ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು: ಪಾಕ್ ಪ್ರಧಾನಿ ಇಮ್ರಾನ್ ಖಾನ್ ರಾಜೀನಾಮೆಗೆ ಸ್ವಪಕ್ಷೀಯರಿಂದಲೇ ಹೆಚ್ಚಿನ ಒತ್ತಡ
ಇಮ್ರಾನ್ ಖಾನ್ ಸರ್ಕಾರ ಅವಿಶ್ವಾಸ ನಿರ್ಣಯವನ್ನು ಸೋಲಿಸುವ ವಿಶ್ವಾಸವನ್ನು ಹೊರಹಾಕಿದೆಯಾದರೂ ಖಾನ್ ಅವರನ್ನು ಪದಚ್ಯುತಗೊಳಿಸುವುದು ನಿಶ್ಚಿತ ಎಂದು ಪ್ರತಿಪಕ್ಷಗಳು ಹೇಳುತ್ತಿವೆ.
ಇಸ್ಲಾಮಾಬಾದ್: ಉಕ್ರೇನ್ ನೆರೆರಾಷ್ಟ್ರ ರಷ್ಯಾದ ದಾಳಿಯಿಂದ ತತ್ತರಿಸಿದ್ದರೆ ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನ ಆಂತರಿಕ ರಾಜಕೀಯ ಸಂಘರ್ಷದಿಂದ ತತ್ತರಿಸಿದೆ. ಪಾಕ್ ಪ್ರಧಾನ ಮಂತ್ರಿ ಮತ್ತು 1992ರಲ್ಲಿ ದೇಶಕ್ಕೆ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ಇಮ್ರಾನ್ ಖಾನ್ (Imran Khan) ಅವರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿವೆ ಮತ್ತು ಖಾನ್ ಸಾಹೇಬರ ಸರ್ಕಾರ ಪತನಗೊಳ್ಳುವುದು ಖಚಿತ ಎನ್ನಲಾಗುತ್ತಿದೆ. ಪಾಕಿಸ್ತಾನದಲ್ಲಂತೂ ರಾಜಕೀಯ ವಿಪ್ಲವ ಶುರುವಾಗಿದೆ. ಏತನ್ಮಧ್ಯೆ, ಪಾಕಿಸ್ತಾನದ ಆಡಳಿತ ಪಕ್ಷ ತೆಹ್ರೀಕ್-ಎ-ಇನ್ಸಾಫ್ ನ (PTI) (ಪಿಟಿಐ) ಸಂಸ್ಥಾಪಕ ಸದಸ್ಯರಾಗಿರುವ ನಜೀಬ್ ಹರೂನ್ (Najeeb Haroon) ಅವರು ಶನಿವಾರ ಹೇಳಿಕೆಯೊಂದನ್ನು ನೀಡಿ, ದೇಶದಲ್ಲಿ ಎದ್ದಿರುವ ರಾಜಕೀಯ ತಲ್ಲಣ ಶಮನಗೊಳ್ಳಲು ಇರುವ ಏಕೈಕ ಮಾರ್ಗವೆಂದರೆ ಇಮ್ರಾನ್ ಖಾನ್ ಅವರು ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದು ಎಂದಿದ್ದಾರೆ ಅಂತ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಜಿಯೋ ಟಿವಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹರೂನ್ ಅವರು, ‘ಪ್ರಧಾನ ಮಂತ್ರಿ ಇಮ್ರಾನ್ ಖಾನ್ ತಮ್ಮ ಸ್ಥಾನವನ್ನು ತ್ಯಜಿಸಿ ಪಿಟಿಐ ಪಕ್ಷದ ಮತ್ತೊಬ್ಬ ಸದಸ್ಯನನ್ನು ಆ ಸ್ಥಾನಕ್ಕೆ ನಿಯುಕ್ತಿ ಮಾಡಬೇಕು,’ ಎಂದು ಹೇಳಿದರು.
‘ಪ್ರಸ್ತುತವಾಗಿ ತಲೆದೋರಿರುವ ರಾಜಕೀಯ ಬಿಕ್ಕಟ್ಟು ಬಗೆಹರಿದು ಮುಂದೆ ಸಾಗಬೇಕೆಂದರೆ ಇದೊಂದೇ ಮಾರ್ಗ ಇರೋದು,’ ಎಂದು ಹರೂನ್ ಹೇಳಿದ್ದಾರೆ.
‘ರಾಜಕೀಯ ಅಸ್ಥಿರತೆಯಿಂದ ದೇಶ ಕಂಗೆಟ್ಟಿದೆ, ಇದನ್ನು ಮುಂದುವರಿಯಲು ಬಿಡಬಾರದು, ಪ್ರಧಾನ ಮಂತ್ರಿ ಇಮ್ರಾನ್ ಖಾನ್ ತಮ್ಮ ಹಟಮಾರಿ ಧೋರಣೆಯನ್ನು ತ್ಯಜಿಸಿ ಪಕ್ಷದ ಮತ್ತೊಬ್ಬ ಸದಸ್ಯನನ್ನು ಪ್ರಧಾನ ಮಂತ್ರಿಯಾಗಿ ಘೋಷಿಸಬೇಕು,’ ಎಂದು ಅವರು ಟಿವಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ ಅಂತ ವರದಿಯಾಗಿದೆ.
ಇಮ್ರಾನ್ ಖಾನ್ ಅವರ ಸರ್ಕಾರ ವಿರುದ್ಧ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿ ದಿನಾಂಕ ಸಮೀಪವಾಗುತ್ತಿದ್ದಂತೆಯೇ ಆಡಳಿತ ಪಕ್ಷ ಪಿಟಿಐನ ಹಲವಾರು ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರು ಪಕ್ಷದೊಂದಿಗೆ ತಾವು ಬಾಂಧವ್ಯ ಕಡಿದುಕೊಂಡಿರುವುದಾಗಿ ಹೇಳುತ್ತಿದ್ದು ಮುಂದಿನ ಚುನಾವಣೆಯಲ್ಲಿ ಪಿಟಿಐ ಪಕ್ಷದ ಟಿಕೆಟ್ ನಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಅಷ್ಟು ಮಾತ್ರವಲ್ಲ ಖಾನ್ ಸಂಪುಟದ ಮೂವರು ಸಚಿವರು ಈಗಾಗಲೇ ಸರ್ಕಾರದಿಂದ ಹೊರಬಂದಿದ್ದಾರೆ ಎಂದು ಒಬ್ಬ ಸದಸ್ಯ ಹೇಳಿದ್ದಾರೆ.
ಮಾರ್ಚ್ 8 ರಂದು ರಾಷ್ಟ್ರೀಯ ಅಸೆಂಬ್ಲಿ ಸಚಿವಾಲಯದಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸುದ್ದಂತೆಯೇ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಲು ಪಾಕಿಸ್ತಾನದ ವಿರೋಧ ಪಕ್ಷಗಳು ಪರಸ್ಪರ ದ್ವೇಷವನ್ನು ಕಾರುತ್ತಿವೆ. ಇಮ್ರಾನ್ ಖಾನ್ ಸರ್ಕಾರ ಅವಿಶ್ವಾಸ ನಿರ್ಣಯವನ್ನು ಸೋಲಿಸುವ ವಿಶ್ವಾಸವನ್ನು ಹೊರಹಾಕಿದೆಯಾದರೂ ಖಾನ್ ಅವರನ್ನು ಪದಚ್ಯುತಗೊಳಿಸುವುದು ನಿಶ್ಚಿತ ಎಂದು ಪ್ರತಿಪಕ್ಷಗಳು ಹೇಳುತ್ತಿವೆ.
ಇದನ್ನೂ ಓದಿ: Imran Khan: ಭಾರತ- ಪಾಕ್ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಟಿವಿ ಚರ್ಚೆ ನಡೆಸೋಣ; ಪ್ರಧಾನಿ ಮೋದಿಗೆ ಇಮ್ರಾನ್ ಖಾನ್ ಆಹ್ವಾನ