ಪಾಕಿಸ್ತಾನದ ಹೊಸ ಪ್ರಧಾನಿಗೆ ಬರೀ ಕಾಶ್ಮೀರದ್ದೇ ಜಪ; ಪ್ರಧಾನಿ ಮೋದಿಗೆ ಪತ್ರ ಬರೆದ ಶೆಹಬಾಜ್ ಶರೀಫ್
ಶೆಹಬಾಜ್ ಶರೀಫ್ ಪ್ರಧಾನಿಯಾಗುತ್ತಿದ್ದಂತೆ ಟ್ವೀಟ್ ಮಾಡಿ ಕೂಡ ಅಭಿನಂದಿಸಿದ್ದ ಪ್ರಧಾನಿ ಮೋದಿ, ಭಾರತವು ತನ್ನ ಪ್ರಾದೇಶಿಕ ಭದ್ರತೆಗೆ ಹೆಚ್ಚಿನ ಆದ್ಯತೆ ಕೊಡುತ್ತದೆ. ಭಯೋತ್ಪಾದನೆ ಮುಕ್ತ, ಶಾಂತಿ ಮತ್ತು ಸ್ಥಿರತೆ ಸ್ಥಾಪನೆ ನಮ್ಮ ಗುರಿಯಾಗಿದೆ ಎಂದಿದ್ದರು.
ಪಾಕಿಸ್ತಾನದಲ್ಲಿ 23ನೇ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿರುವ ಪಾಕಿಸ್ತಾನ್ ಮುಸ್ಲಿಂ ಲೀಗ್ ಪಕ್ಷದ ಶೆಹಬಾಜ್ ಶರೀಫ್, ಹುದ್ದೆಗೇರಿದ ಬಳಿಕ ಸಂಸತ್ತನ್ನು ಉದ್ದೇಶಿಸಿ ಮೊದಲ ಬಾರಿಗೆ ಮಾತನಾಡಿದಾಗಲೇ ಕಾಶ್ಮೀರ ವಿಷಯವನ್ನು ಪ್ರಸ್ತಾಪ ಮಾಡಿದ್ದರು. ನಾವು ಭಾರತದೊಂದಿಗೆ ಉತ್ತಮ ಸಂಬಂಧ, ಸೌಹಾರ್ದತೆಯನ್ನು ಬಯಸುತ್ತೇವೆ. ಆದರೆ ಕಾಶ್ಮೀರದ ಸಮಸ್ಯೆ ಬಗೆಹರಿಯದೆ ಸ್ಥಾಪಿತವಾಗುವ ಶಾಂತಿ, ತುಂಬ ದಿನ ಬಾಳಿಕೆಗೆ ಬರುವಂಥದ್ದಲ್ಲ ಎಂದು ಹೇಳಿದ್ದರು. ಆದರೆ ಅವರು ಅಷ್ಟಕ್ಕೆ ಸುಮ್ಮನಾಗದೆ, ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನೂ ಬರೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಶೆಹಬಾಜ್ ಪಾಕಿಸ್ತಾನದ ಪ್ರಧಾನಿಯಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನಾ ಪತ್ರ ಕಳಿಸಿದ್ದರು. ಭಾರತ, ಪಾಕಿಸ್ತಾನದೊಂದಿಗೆ ರಚನಾತ್ಮಕ ಸಂಬಂಧವನ್ನು ಬಯಸುತ್ತದೆ ಎಂದು ನರೇಂದ್ರ ಮೋದಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಪತ್ರಕ್ಕೆ ಪ್ರತಿಕ್ರಿಯೆ ಬರೆದಿರುವ ಶೆಹಬಾಜ್ ಶರೀಫ್, ಭಾರತದೊಂದಿಗೆ ಶಾಂತಿ ಮತ್ತು ಸಹಕಾರಯುಕ್ತ ಸ್ನೇಹವನ್ನು ಪಾಕಿಸ್ತಾನ ಬಯಸುತ್ತದೆ. ಆದರೆ ಜಮ್ಮು-ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಆದಷ್ಟು ಬೇಗನೇ ಒಂದು ನಿರ್ಣಯ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಇನ್ನು ಶೆಹಬಾಜ್ ಶರೀಫ್ ಪ್ರಧಾನಿಯಾಗುತ್ತಿದ್ದಂತೆ ಟ್ವೀಟ್ ಮಾಡಿ ಕೂಡ ಅಭಿನಂದಿಸಿದ್ದ ಪ್ರಧಾನಿ ಮೋದಿ, ಭಾರತವು ತನ್ನ ಪ್ರಾದೇಶಿಕ ಭದ್ರತೆಗೆ ಹೆಚ್ಚಿನ ಆದ್ಯತೆ ಕೊಡುತ್ತದೆ. ಭಯೋತ್ಪಾದನೆ ಮುಕ್ತ, ಶಾಂತಿ ಮತ್ತು ಸ್ಥಿರತೆ ಸ್ಥಾಪನೆ ನಮ್ಮ ಗುರಿಯಾಗಿದೆ. ಹಾಗಾದಾಗ ನಾವು ಆಂತರಿಕ ಅಭಿವೃದ್ಧಿಯತ್ತ ಹೆಚ್ಚಿನ ಗಮನಕೊಡಬಹುದು. ದೇಶದ ಜನರ ಯೋಗಕ್ಷೇಮ, ಅವರಿಗೆ ಅನುಕೂಲ ಮಾಡಿಕೊಡಬಹುದು ಎಂದು ಹೇಳಿದ್ದರು. ಅಭಿನಂದನೆಗೆ ಧನ್ಯವಾದ ಸಲ್ಲಿಸಿ ಟ್ವೀಟ್ ಮಾಡಿದ್ದ ಶೆಹಬಾಜ್, ಪಾಕಿಸ್ತಾನ ಕೂಡ ಭಾರತದೊಂದಿಗೆ ಸೌಹಾರ್ದತೆ ಬಯಸುತ್ತದೆ. ಆದರೆ ಜಮ್ಮು-ಕಾಶ್ಮೀರ ಸಮಸ್ಯೆ ಪರಿಹಾರ ತುಂಬ ಮುಖ್ಯ ಎಂದಿದ್ದರು.
ಭಾರತ-ಪಾಕಿಸ್ತಾನ ಸಂಬಂಧ ಯಾವತ್ತೂ ಸರಿಯಿರುವಂಥದ್ದಲ್ಲ. ಅದರಲ್ಲೂ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ದಾಳಿ, ಅದಕ್ಕೆ ಪ್ರತಿಯಾಗಿ ಬಾಲಾಕೋಟ್ ಉಗ್ರನೆಲೆಯ ಮೇಲೆ ಭಾರತ ಏರ್ಸ್ಟ್ರೈಕ್ ನಡೆಸಿದ್ದೆಲ್ಲ, ಎರಡೂ ದೇಶಗಳ ಸಂಬಂಧ ಇನ್ನಷ್ಟು ಹಳಸಲು ಕಾರಣವಾಗಿವೆ. ಈ ಹಿಂದಿನ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರಕ್ಕೆ ಏರಿದಾಗಿನಿಂದಲೂ ಭಾರತವನ್ನು ದೂಷಿಸುತ್ತಲೇ ಬಂದವರು, ತಮ್ಮ ಹುದ್ದೆ ಹೋಗುವುದು ಖಚಿತವಾದ ಬಳಿಕ ಭಾರತವನ್ನು ಹೊಗಳಲು ಶುರು ಮಾಡಿದ್ದರು. ಭಾರತದಲ್ಲಿ ಇರುವಂಥ ವಿದೇಶಾಂಗ ನೀತಿಯನ್ನೇ ಪಾಕಿಸ್ತಾನದಲ್ಲೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದರು.
ಇದನ್ನೂ ಓದಿ: ಶ್ರೀರಾಮನ ಹೆಸರಿನಲ್ಲಿ ಕೋಮುವಾದದ ಬೆಂಕಿ ಹಚ್ಚುವುದು ರಾಮನ ಕಲ್ಪನೆಗೆ ಮಾಡಿದ ಅವಮಾನ: ಸಂಜಯ್ ರಾವತ್