ಕೊರೊನಾವೈರಸ್ ಕೈಗೆ ಸಿಗುವಂತಿದ್ದರೆ ದೇವೇಂದ್ರ ಫಡಣವಿಸ್ ಬಾಯಿಗೆ ತುರುಕುತ್ತಿದ್ದೆ: ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್

|

Updated on: Apr 19, 2021 | 2:40 PM

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಬಲ್ಧಾನ ವಿಧಾನಸಭಾ ಕ್ಷೇತ್ರದ ಶಾಸಕ ಸಂಜಯ್ ಗಾಯಕ್ವಾಡ್, ಈ ರೀತಿಯ ಸಾಂಕ್ರಾಮಿಕ ರೋಗ ವ್ಯಾಪಿಸುತ್ತಿರುವ ಹೊತ್ತಲ್ಲಿ ಫಡಣವಿಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರೆ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.

ಕೊರೊನಾವೈರಸ್ ಕೈಗೆ ಸಿಗುವಂತಿದ್ದರೆ ದೇವೇಂದ್ರ ಫಡಣವಿಸ್ ಬಾಯಿಗೆ ತುರುಕುತ್ತಿದ್ದೆ: ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್
ದೇವೇಂದ್ರ ಫಡಣವಿಸ್- ಸಂಜಯ್ ಗಾಯಕ್ವಾಡ್
Follow us on

ಮುಂಬೈ: ಮಹಾರಾಷ್ಟ್ರದಲ್ಲಿ ರೆಮ್​ಡಿಸಿವರ್ ಪೂರೈಕೆ ಬಗ್ಗೆ ಆಡಳಿತರೂಢ ಶಿವಸೇನಾ ಮತ್ತು ಬಿಜೆಪಿ ನಡುವಿನ ವಾಕ್ಸಮರ ಸೋಮವಾರವೂ ಮುಂದುವರಿದಿದೆ. ರೆಮ್​ಡಿಸಿವರ್ ಪೂರೈಕೆದಾರ ಬ್ರಕ್ ಫಾರ್ಮಾ ನಿರ್ದೇಶಕರನ್ನು ಮುಂಬೈ ಪೊಲೀಸರು ಶನಿವಾರ ವಶಕ್ಕೆ ಪಡೆದುಕೊಂಡಿರುವ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು,ಬಿಜೆಪಿ ನಾಯಕ ದೇವೇಂದ್ರ ಫಡಣವಿಸ್ ಮಹಾರಾಷ್ಟ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್, ಕೊರೊನಾವೈರಸ್ ಕೈಗೆ ಸಿಗುವಂತಿದ್ದರೆ ಅದನ್ನು ಫಡಣವಿಸ್ ಬಾಯಿಗೆ ತುರುಕುತ್ತಿದ್ದೆ ಎಂದಿದ್ದಾರೆ.

ಕೊವಿಡ್ ಚಿಕಿತ್ಸೆಗಾಗಿ ಬಳಸುವ ರೆಮ್​ಡಿಸಿವರ್ ಪೂರೈಕೆ ಮಾಡುವ ದಮನ್ ಮೂಲದ ಬ್ರಕ್ ಫಾರ್ಮಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರನ್ನು ಶನಿವಾರ ಮುಂಬೈ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಪ್ರಸ್ತುತ  ಕಂಪನಿ ಅಧಿಕ ಪ್ರಮಾಣದಲ್ಲಿ ರೆಮ್​ಡಿಸಿವರ್ ಸಂಗ್ರಹ ಮಾಡಿದೆ ಎಂಬ ಆರೋಪದ ಮೇರೆಗೆ ಮುಂಬೈಯ ವಿಲೆ ಪಾರ್ಲೆ ಪೊಲೀಸರು ಕಂಪನಿಯ ಅಧಿಕಾರಿಗಳನ್ನು ಶನಿವಾರ ವಶಕ್ಕೆ ಪಡೆದುಕೊಂಡಿದ್ದರು.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಬಲ್ಧಾನ ವಿಧಾನಸಭಾ ಕ್ಷೇತ್ರದ ಶಾಸಕ ಗಾಯಕ್ವಾಡ್, ಈ ರೀತಿಯ ಸಾಂಕ್ರಾಮಿಕ ರೋಗ ವ್ಯಾಪಿಸುತ್ತಿರುವ ಹೊತ್ತಲ್ಲಿ ಫಡಣವಿಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರೆ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.

ಫಡಣವಿಸ್, ಬಿಜೆಪಿ ನಾಯಕ ಪ್ರವೀಣ್ ದಾರೇಕರ್ ಮತ್ತು ಚಂದ್ರಕಾಂತ್ ಪಾಟಿಲ್ ಅವರು ಕೊರೊನಾವೈರಸ್ ಸಾಂಕ್ರಾಮಿಕದ ಹೊತ್ತಲ್ಲಿ ರೆಮ್​ಡಿಸಿವರ್ ಚುಚ್ಚುಮದ್ದು ವಿತರಣೆ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಚುಚ್ಚುಮದ್ದು ವಿತರಣೆ ಮಾಡಬಾರದು ಎಂದು ರಾಜ್ಯದಲ್ಲಿರುವ ರೆಮ್​ಡಿಸಿವರ್ ಉತ್ಪಾದನಾ ಕಂಪನಿಗಳಿಗೆ ಕೇಂದ್ರ ಸರ್ಕಾರ ಹೇಳಿತ್ತು. ಕೇಂದ್ರ ಸರ್ಕಾರ ಮಹಾರಾಷ್ಟ್ರಕ್ಕೆ ಅಗತ್ಯವಿರುವ ವೈದ್ಯಕೀಯ ಆಮ್ಲಜನಕವನ್ನು ಪೂರೈಸುತ್ತಿಲ್ಲ. ಅವರು ಗುಜರಾತಿಗೆ ರೆಮ್​ಡಿಸಿವರ್ ಚುಚ್ಚುಮದ್ದುಗಳನ್ನು ನೀಡುತ್ತಿದ್ದು, ಮಹಾರಾಷ್ಟ್ರದಲ್ಲಿ ಜನರು ಸಾಯುತ್ತಿರುವಾಗ ಇಲ್ಲಿವ ಬಿಜೆಪಿ ಕಚೇರಿಯಿಂದ 50,000 ಡೋಸ್​ಗಳನ್ನು ಉಚಿತವಾಗಿ ಕಳುಹಿಸಲು ಚಿಂತನೆ ನಡೆಸಿದ್ದರು. ಕೇಂದ್ರ ಸರ್ಕಾರ ಮತ್ತು ಫಡಣವಿಸ್ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಗಾಯಕ್ವಾಡ್ ಆರೋಪಿಸಿದ್ದಾರೆ. ಈ ಹೊತ್ತಲ್ಲಿ ರಾಜಕಾರಣ ಮಾಡುವುದಾ? ಕೇಂದ್ರ ಸರ್ಕಾರ ಮತ್ತು ಫಡಣವಿಸ್ ಅವರಿಗೆ ನಾಚಿಕೆಯಾಬೇಕು ಎಂದಿದ್ದಾರೆ ಅವರು.

ಶಾಸಕ ಗಾಯಕ್ವಾಡ್ ಹೇಳಿಕೆ ಖಂಡಿಸಿದ ಬಿಜೆಪಿ ಕಾರ್ಯಕರ್ತರು ಬಲ್ಧಾನದ ವಿವಿಧ ಪ್ರದೇಶಗಳಲ್ಲಿ ಭಾನುವಾರ ಪ್ರತಿಭಟನೆ ನಡೆಸಿ, ಗಾಯಕ್ವಾಡ್ ಅವರ ಪ್ರತಿಕೃತಿ ದಹಿಸಿದ್ದಾರೆ.

ಗಾಯಕ್ವಾಡ್ ವಿರುದ್ಧ ದೂರು

ಫಡಣವಿಸ್  ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಸಂಜಯ್ ಗಾಯಕ್ವಾಡ್ ವಿರುದ್ಧ ಮಲಬಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಮುಂಬೈಯ ಬಿಜೆಪಿ ಅಧ್ಯಕ್ಷ  ಮಂಗಲ್ ಪ್ರಭಾತ್  ಲೋಧಾ ಟ್ವೀಟ್ ಮಾಡಿದ್ದಾರೆ.


ಫಡಣವಿಸ್ ವಿರುದ್ಧ ಟೀಕಾ ಪ್ರಹಾರ


ತುರ್ತು ಬಳಕೆ ಔಷಧಿಯನ್ನು ಕೈವಶವಿರಿಸಿಕೊಂಡಿದ್ದಕ್ಕೆ ಫಡಣವಿಸ್ ವಿರುದ್ಧ  ಶಿವ ಸೇನೆಯ ಸಂಸದೆ ಪ್ರಿಯಾಂಕಾ ಚತುರ್ವೇದಿ, ಮಹಾರಾಷ್ಟ್ರ ಸರ್ಕಾರದ ಮೈತ್ರಿ ಪಕ್ಷಗಳಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಟೀಕಾ ಪ್ರಹಾರ ಮಾಡಿದೆ. ತಮ್ಮ ಕೀಳು ಮಟ್ಟದ ರಾಜಕೀಯಕ್ಕಾಗಿ ಮಹಾರಾಷ್ಟ್ರದ ಜನರ ಬೆನ್ನಿಗೆ ಚೂರಿ ಹಾಕುತ್ತಿರುವುದಲ್ಲದೆ ಮತ್ತೇನು?. ವಿಪಕ್ಷ ನೇತಾರರು ರಹಸ್ಯವಾಗಿ ತುರ್ತು ಔಷಧಿಯನ್ನು ಸಂಗ್ರಹಿಸಿಟ್ಟಿದ್ದಾರೆ. ಇದನ್ನು ಪೊಲೀಸರು ಮುಟ್ಟುಗೋಲು ಹಾಕಿದಾಗ ಜಗಳಕ್ಕೆ ನಿಂತಿದ್ದಾರೆ. ಮಿ. ಫಡಣವಿಸ್ ನಾಚಿಕೆಗೇಡು ಇದು. ನಿಮ್ಮ ಮಧ್ಯರಾತ್ರಿಯ ಹಗರಣ ಈ ಹಿಂದೆಯೂ ಬಯಲಾಗಿತ್ತು. ಈಗ ಮತ್ತೊಮ್ಮೆ ಬಯಲಾಗಿದೆ ಎಂದು ಚತುರ್ವೇದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:  ಮುಂಬೈ ಪೊಲೀಸರಿಂದ ರೆಮ್​ಡಿಸಿವರ್ ಪೂರೈಕೆ ಮಾಡುವ ಬ್ರಕ್ ಫಾರ್ಮಾ ಅಧಿಕಾರಿಗಳ ವಿಚಾರಣೆ : ಬಿಜೆಪಿ ಆಕ್ಷೇಪ

ರೈಲುಗಳ ಮೂಲಕ ವೈದ್ಯಕೀಯ ಆಕ್ಸಿಜನ್​ ಸಾಗಣೆಗೆ ಅವಕಾಶ ಕೊಡಿ; ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರದ ಮನವಿ

(Shiv Sena MLA Sanjay Gaikwad said Would Have Put Coronavirus In BJP leader Devendra Fadnavis Mouth)

Published On - 2:33 pm, Mon, 19 April 21