ದೆಹಲಿಯಲ್ಲಿ 6 ದಿನಗಳ ಲಾಕ್​ಡೌನ್; ಇಂದು ರಾತ್ರಿಯಿಂದಲೇ ಕಠಿಣ ನಿಯಮ ಜಾರಿ: ಅರವಿಂದ ಕೇಜ್ರಿವಾಲ್

ದೆಹಲಿಯಲ್ಲಿ 6 ದಿನಗಳ ಲಾಕ್​ಡೌನ್; ಇಂದು ರಾತ್ರಿಯಿಂದಲೇ ಕಠಿಣ ನಿಯಮ ಜಾರಿ: ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

Lockdown in Delhi: ದೆಹಲಿಯಲ್ಲಿ ಕೊರೊನಾವೈರಸ್​ನ ನಾಲ್ಕನೇ ಅಲೆ ಕಂಡುಬಂದಿದೆ. 25,000 ಕೊವಿಡ್ ಪ್ರಕರಣಗಳು ಇಲ್ಲಿ ವರದಿ ಆಗಿದೆ ಎಂದು ಹೇಳಿದ ಕೇಜ್ರಿವಾಲ್, ಇಂದು (ಸೋಮವಾರ) ರಾತ್ರಿ 10ಗಂಟೆಯಿಂದ ಮುಂದಿನ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಲಾಕ್​ಡೌನ್ ಇರಲಿದೆ ಎಂದಿದ್ದಾರೆ.

Rashmi Kallakatta

|

Apr 19, 2021 | 1:15 PM

ದೆಹಲಿ: ದೆಹಲಿಯಲ್ಲಿ ಕೊರೊನಾವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ರೋಗ ನಿಯಂತ್ರಣಕ್ಕಾಗಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ 6 ದಿನಗಳ ಲಾಕ್​ಡೌನ್ ಘೋಷಿಸಿರುವ ಸರ್ಕಾರ ಇಂದು ರಾತ್ರಿಯಿಂದಲೇ ಈ ನಿಯಮ ಜಾರಿಗೆ ಬರಲಿದೆ ಎಂದಿದೆ. ದೆಹಲಿಯಲ್ಲಿ ಕೊರೊನಾವೈರಸ್​ನ ನಾಲ್ಕನೇ ಅಲೆ ಕಂಡುಬಂದಿದೆ. 25,000 ಕೊವಿಡ್ ಪ್ರಕರಣಗಳು ಇಲ್ಲಿ ವರದಿ ಆಗಿದೆ ಎಂದು ಹೇಳಿದ ಕೇಜ್ರಿವಾಲ್, ಇಂದು (ಸೋಮವಾರ) ರಾತ್ರಿ 10ಗಂಟೆಯಿಂದ ಮುಂದಿನ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಲಾಕ್ ಡೌನ್ ಇರಲಿದೆ ಎಂದಿದ್ದಾರೆ. ಎಲ್ಲ ಖಾಸಗಿ ಕಚೇರಿಗಳು ವರ್ಕ್ ಫ್ರಂ ಹೋಮ್ ವ್ಯವಸ್ಥೆಯಿಂದ ಕಾರ್ಯವೆಸಗಲಿದ್ದು, ಸರ್ಕಾರಿ ಆಸ್ಪತ್ರೆ ಮತ್ತು ಅಗತ್ಯ ಸೇವೆಗಳು ಲಭ್ಯವಿರಲಿದೆ ಎಂದು ಮೂಲಗಳು ಹೇಳಿವೆ.

ಭಾನುವಾರ ದೆಹಲಿಯಲ್ಲಿ 25,462 ಹೊಸ ಪ್ರಕರಣಗಳು ವರದಿ ಆಗಿದ್ದು, ಇಲ್ಲಿ ಪಾಸಿಟಿವಿಟಿ ದರ ಶೇ 30 ರಷ್ಟಿದೆ.  ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ರಾಜಧಾನಿಯಲ್ಲಿ ‘ಬ್ರೇಕ್ ದಿ ಚೈನ್ ಅಭಿಯಾನ’ ನಡೆಸಿ ವಾರಾಂತ್ಯ ಕರ್ಫ್ಯೂ ಘೋಷಿಸಿದ್ದರೂ ಜನರು ನಿಯಮಗಳ ಉಲ್ಲಂಘನೆ ಮಾಡುತ್ತಲೇ ಇದ್ದಾರೆ. ಹೀಗಾಗಿ ಕಠಿಣ ನಿಯಮಗಳನ್ನು ಜಾರಿಗೆ ತರುವುದು ಅನಿವಾರ್ಯವಾಗಿತ್ತು.

ಸೋಮವಾರ ಬೆಳಗ್ಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರನ್ನು ಭೇಟಿ ಮಾಡಿದ ನಂತರ ಈ ನಿರ್ಧಾರ ಘೋಷಿಸಿದ್ದಾರೆ.

ದೆಹಲಿಯ ಆರೋಗ್ಯ ವ್ಯವಸ್ಥೆ ತನ್ನ ಮಿತಿಯನ್ನು ತಲುಪಿದೆ. ಆರೋಗ್ಯ ವ್ಯವಸ್ಥೆ ಪೂರ್ತಿ ಕುಸಿದಿದೆ ಎಂದು ನಾನು ಹೇಳಲಾರೆ ಆದರೆ ಅದರ ಮಿತಿಯನ್ನು ತಲುಪಿದೆ ಎಂದಿದ್ದಾರೆ ಕೇಜಿವಾಲ್. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದು ಸಣ್ಣ ಲಾಕ್​ಡೌನ್. ವಲಸೆ ಕಾರ್ಮಿಕರು ದೆಹಲಿ ಬಿಟ್ಟು ತೆರಳಬೇಡಿ. ದಯವಿಟ್ಟು ಇಲ್ಲೇ ಇರಿ. ಈ ಲಾಕ್ ಡೌನ್ ನ್ನು ವಿಸ್ತರಿಸುವ ಸಂದರ್ಭ ಬರಲಾರದು ಎಂದು ನಾನು ಭಾವಿಸುತ್ತೇನೆ. ಈ ಆರು ದಿನಗಳಲ್ಲಿ ಕೊರಾನಾ ವೈರಸ್ ನಿಯಂತ್ರಣಕ್ಕಾಗಿ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ಕಾರ್ಯವನ್ನು ಸರ್ಕಾರ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆಯೇ ಕೊರೊನಾವೈರಸ್ ನಿಯಂತ್ರಣಕ್ಕಾಗಿ ಆಡಿಟೋರಿಯಂ, ರೆಸ್ಟೊರೆಂಟ್,ಮಾಲ್, ಜಿಮ್ ಮತ್ತು ಸ್ಪಾಗಳನ್ನು ಮುಚ್ಚಲು ಆದೇಶಿಸಿದ್ದ ದೆಹಲಿ ಸರ್ಕಾರ ಸಿನಿಮಾ ಥಿಯೇಟರ್ ಗಳಲ್ಲಿ 3ನೇ1ರಷ್ಟು ಜನರಿಗೆ ಮಾತ್ರ ಆಸನ ವ್ಯವಸ್ಥೆ ಕಲ್ಪಿಸಲು ಆದೇಶಿಸಿತ್ತು. ಅದೇ ವೇಳೆ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಕಾರ್ಯಕ್ರಮಗಳಿಗೆ ಜನ ಸೇರುವುದನ್ನು ಸರ್ಕಾರ ನಿಷೇಧಿಸಿದೆ. ರಾಜ್ಯದಲ್ಲಿ ಕೊರೊನಾವೈರಸ್ ಪ್ರಕರಣ ಏರಿಕೆಯಾಗುತ್ತಿರುವುದು ಆರೋಗ್ಯ ವ್ಯವಸ್ಥೆ ಮೇಲೆ ಒತ್ತಡವನ್ನುಂಟು ಮಾಡಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಯಲ್ಲಿ ರೆಮ್​ಡಿಸಿವರ್, ಆಕ್ಸಿಜನ್ ಪೂರೈಕೆಯ ಬಗ್ಗೆ ನಿಗಾವಹಿಸಲಿದೆ ಸರ್ಕಾರ

ಅದೇ ವೇಳೆ ರಾಜ್ಯದಲ್ಲಿ ಕೊರೊನಾ ಲಸಿಕೆ ಮತ್ತು ಆಮ್ಲಜನಕದ ಕೊರತೆ ಕಂಡುಬಂದಿದೆ. ಈ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಇನ್ನು ಮುಂದೆ ಸರ್ಕಾರ ರೆಮ್​ಡಿಸಿವರ್ ಮತ್ತು ವೈದ್ಯಕೀಯ ಆಮ್ಲಜನಕದ ಪೂರೈಕೆಯ ಬಗ್ಗೆ ನಿಗಾ ಇರಿಸಲಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದಂತೆ ರೆಮ್​ಡಿಸಿವರ್ ಬೇಡಿಕೆ ಕೂಡಾ ಹೆಚ್ಚಿದೆ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಆಕ್ಸಿಜನ್​, ರೆಮ್​ಡಿಸಿವಿರ್ ಔಷಧ​​ಗಳ ತೀವ್ರ ಕೊರತೆ: ಆತಂಕ ವ್ಯಕ್ತಪಡಿಸಿದ ಸಿಎಂ ಅರವಿಂದ್ ಕೇಜ್ರಿವಾಲ್​

(Rising cases of the coronavirus 6 day lockdown in Delhi till next Monday announces Chief minister Arvind Kejriwal)

Follow us on

Related Stories

Most Read Stories

Click on your DTH Provider to Add TV9 Kannada