ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು 25 ವರ್ಷ ಸಮಯ ವ್ಯರ್ಥ ಮಾಡಿದೆವು ಎಂದು ಶಿವಸೇನೆ ನಾಯಕ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ನೀಡಿದ ಬೆನ್ನಲ್ಲೇ, ಶಿವಸೇನೆ ಸಂಸದ ಸಂಜಯ್ ರಾವತ್ (Shiv Sena Leader Sanjay Raut) ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದಲ್ಲಿ ತಳದಲ್ಲಿದ್ದ ಬಿಜೆಪಿಯನ್ನು ಮೇಲೇರಿಸಿದ್ದೇ ನಮ್ಮ ಶಿವಸೇನೆ ಪಕ್ಷ ಎಂದೂ ಹೇಳಿದ್ದಾರೆ. ಎಎನ್ಐ ಜತೆ ಮಾತನಾಡಿದ ಸಂಜಯ್ ರಾವತ್, ಉತ್ತರ ಪ್ರದೇಶದಲ್ಲಿ ಬಾಬ್ರಿ ಮಸೀದಿ ಧ್ವಂಸ ಘಟನೆಯಾದ ನಂತರ ದೇಶದ ಉತ್ತರ ಭಾಗದಲ್ಲಿ ಶಿವಸೇನೆಯ ಅಲೆ ಇತ್ತು. ಆ ಸಮಯದಲ್ಲಿ ನಾವು ಚುನಾವಣೆಗಳಲ್ಲಿ ಸಕ್ರಿಯವಾಗಿ ಸ್ಪರ್ಧಿಸಿದ್ದರೆ ಇಂದು ನಮ್ಮ ಪಕ್ಷದ ಪ್ರಧಾನಮಂತ್ರಿ ದೇಶದ ಆಡಳಿತ ನಡೆಸುತ್ತಿದ್ದರು. ಆದರೆ ನಾವು ಬಿಜೆಪಿಗೆ ಬಿಟ್ಟುಕೊಟ್ಟೆವು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಕೇಸರಿ ಪಕ್ಷ ಅಧಿಕಾರಕ್ಕಾಗಿ ಕೇವಲ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ ಎಂದೂ ವಾಗ್ದಾಳಿ ನಡೆಸಿದ್ದಾರೆ.
We took BJP from bottom to top in Maharashtra. After Babri, there was a Shiv Sena wave in Northern India,if we had fought polls at that time, there would have been our(Shiv Sena) PM in country but we left it for them. BJP only uses Hindutva for power: Shiv Sena leader Sanjay Raut pic.twitter.com/cDQKh8lzGJ
— ANI (@ANI) January 24, 2022
ಅದಕ್ಕೂ ಮೊದಲು ಭಾನುವಾರ, ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಜನ್ಮ ವಾರ್ಷಿಕೋತ್ಸವ ಸಮಾರಂಭ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಿವಸೇನೆ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಸಿಎಂ ಉದ್ಧವ್ ಠಾಕ್ರೆ, ನಮ್ಮ ಪಕ್ಷ ಬಿಜೆಪಿಯನ್ನು ತೊರೆದಿದೆ ಹೊರತು ಹಿಂದುತ್ವವನ್ನಲ್ಲ. ಬಿಜೆಪಿ ಮತ್ತು ಹಿಂದುತ್ವ ಒಂದೇ ಅಲ್ಲ, ಹಿಂದುತ್ವಕ್ಕೆ ಸಮಾರ್ಥಾಕವೆಂದರೆ ಅದು ಬಿಜೆಪಿ ಎಂದು ಭಾವಿಸಬೇಕಾಗಿಲ್ಲ ಎಂದು ಹೇಳಿದ್ದರು. ನಾವು ಬಿಜೆಪಿಯನ್ನು ಹೃದಯಪೂರ್ವಕವಾಗಿಯೇ ಬೆಂಬಲಿಸಿದ್ದೆವು. ಆ ಪಕ್ಷ ರಾಷ್ಟ್ರದ ವಿಚಾರದಲ್ಲಿ ಇಟ್ಟುಕೊಂಡಿದ್ದ ಮಹಾತ್ವಾಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಸಂಪೂರ್ಣ ಸಹಕಾರ ನೀಡಿದ್ದೆವು. ಆದರೆ ನಮ್ಮ ಸ್ವಸ್ಥಳವಾದ ಮಹಾರಾಷ್ಟ್ರದಲ್ಲಿ, ನಮ್ಮನ್ನೇ ನಾಶಗೊಳಿಸಲು ಮುಂದಾದ ಬಿಜೆಪಿ ನಂಬಿಕೆ ದ್ರೋಹ ಮಾಡಿತು. ಹಾಗಾಗಿ ನಾವು ಪ್ರತಿರೋಧ ಒಡ್ಡಬೇಕಾಯಿತು ಎಂದೂ ಹೇಳಿದ್ದರು.
ದೇವೇಂದ್ರ ಫಡ್ನವೀಸ್ ತಿರುಗೇಟು
ಶಿವಸೇನೆ ನಾಯಕರ ವಾಗ್ದಾಳಿಗೆ ಬಿಜೆಪಿ ನಾಯಕ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕಟು ತಿರುಗೇಟು ನೀಡಿದ್ದಾರೆ. ಶಿವಸೇನೆ ಪಕ್ಷ ಹುಟ್ಟುವುದಕ್ಕೂ ಮೊದಲೇ ಮುಂಬೈನಲ್ಲಿ ಬಿಜೆಪಿಯ ಕಾರ್ಪೋರೇಟರ್ ಇದ್ದರು ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ನಮ್ಮ ಬಿಜೆಪಿ ಪಕ್ಷದೊಂದಿಗೆ ಮೈತ್ರಿಯಲ್ಲಿದ್ದಾಗಲೇ ಶಿವಸೇನೆ ನಂಬರ್ 1 ಅಥವಾ 2 ಪಕ್ಷವಾಗಿತ್ತು. ಈಗಂತೂ ನಂಬರ್ 4ರ ಪಕ್ಷವಾಗಿ ಇದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ನಾವು (ಬಿಜೆಪಿ-ಆರ್ಎಸ್ಎಸ್) ರಾಮಜನ್ಮಭೂಮಿ ಅಭಿಯಾನದಲ್ಲಿ ಬುಲೆಟ್ ಮತ್ತು ಲಾಠಿ ರುಚಿ ನೋಡಿದ್ದೇವೆ. ನೀವು ಆಗ ಎಲ್ಲಿದ್ದಿರಿ? ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂಬುದನ್ನು ನೆನಪಿಡಿ ಎಂದಿದ್ದಾರೆ.
2019ರವರೆಗೂ ಒಟ್ಟಿಗೇ ಇದ್ದ ಬಿಜೆಪಿ ಮತ್ತು ಶಿವಸೇನೆ 2019ರಲ್ಲಿ ಬೇರೆಯಾಗಿವೆ. ಮುಖ್ಯಮಂತ್ರಿ ಹುದ್ದೆಯನ್ನು ಶಿವಸೇನೆಗೆ ಕೊಡಬೇಕು ಎಂಬ ಆಗ್ರಹ ಹೆಚ್ಚಾದ ಬೆನ್ನಲ್ಲೇ ಪಕ್ಷಗಳ ಮಧ್ಯೆ ಬಿರುಕು ಉಂಟಾಗಿತ್ತು. ಬಳಿಕ ಶಿವಸೇನೆ ಬಿಜೆಪಿಯನ್ನು ಬಿಟ್ಟು, ಎನ್ಸಿಪಿ ಮತ್ತು ಕಾಂಗ್ರೆಸ್ ಜತೆ ಸೇರಿ ಮಹಾ ವಿಕಾಸ್ ಅಘಾಡಿ ಸರ್ಕಾರ ರಚನೆ ಮಾಡಿದೆ.
ಇದನ್ನೂ ಓದಿ: Union Budget 2022: ಕೇಂದ್ರ ಬಜೆಟ್ 2022ರಿಂದ ವ್ಯಾಪಾರ ವರ್ಗದ ನಿರೀಕ್ಷೆಗಳೇನು?
Published On - 3:29 pm, Mon, 24 January 22