Shocking News: ದುರ್ಗಾ ಪೂಜೆಗಿಟ್ಟ ಸೇಬು ಹಣ್ಣನ್ನು ತಿಂದಿದ್ದಕ್ಕೆ ಬಿಹಾರದ ಶಾಲೆಯಲ್ಲಿ 6 ವರ್ಷದ ಬಾಲಕನ ಕೊಲೆ!

ಶಾಲೆಯ ಆವರಣದೊಳಗೆ ದುರ್ಗಾ ಪೂಜೆ ಆಯೋಜಿಸಲಾಗಿತ್ತು. ಆಗ ವಿವೇಕ್ ಪೂಜೆಗೆ ಇಟ್ಟಿದ್ದ ಸೇಬು ಹಣ್ಣನ್ನು ತಿಂದಿದ್ದ. ಇದರಿಂದ ಆತನನ್ನು ಶಾಲಾ ಕೊಠಡಿಗೆ ಎಳೆದುಕೊಂಡು ಹೋಗಿ ಶಾಲಾ ಸಿಬ್ಬಂದಿ ಮನಬಂದಂತೆ ಥಳಿಸಿದ್ದರು.

Shocking News: ದುರ್ಗಾ ಪೂಜೆಗಿಟ್ಟ ಸೇಬು ಹಣ್ಣನ್ನು ತಿಂದಿದ್ದಕ್ಕೆ ಬಿಹಾರದ ಶಾಲೆಯಲ್ಲಿ 6 ವರ್ಷದ ಬಾಲಕನ ಕೊಲೆ!
Updated By: ಸುಷ್ಮಾ ಚಕ್ರೆ

Updated on: Oct 01, 2022 | 12:21 PM

ಗಯಾ: ದುರ್ಗಾ ದೇವಿಯ ಪೂಜೆಗೆ (Durga Puja) ಇಟ್ಟ ಸೇಬು ಹಣ್ಣನ್ನು ತಿಂದಿದ್ದಕ್ಕೆ 6 ವರ್ಷದ ವಿದ್ಯಾರ್ಥಿಯನ್ನು ಶಾಲೆಯಲ್ಲಿ ಹೊಡೆದು ಕೊಂದಿರುವ ಆಘಾತಕಾರಿ ಘಟನೆ (Shocking News) ಬಿಹಾರದ ಗಯಾದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಗಯಾದ ಬಾಕಿ ಬಿಘಾ ಗ್ರಾಮದಲ್ಲಿ ಲಿಟಲ್ ಲೀಡರ್ಸ್ ಪಬ್ಲಿಕ್ ಸ್ಕೂಲ್ ಎಂಬ ಶಾಲೆಯನ್ನು ನಡೆಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.

ಮೃತಪಟ್ಟ ಬಾಲಕನನ್ನು ವಿವೇಕ್ ಎಂದು ಗುರುತಿಸಲಾಗಿದೆ. ಶಾಲೆಯ ಆವರಣದೊಳಗೆ ದುರ್ಗಾ ಪೂಜೆ ಆಯೋಜಿಸಲಾಗಿತ್ತು. ಆಗ ವಿವೇಕ್ ಪೂಜೆಗೆ ಇಟ್ಟಿದ್ದ ಸೇಬು ಹಣ್ಣನ್ನು ತಿಂದಿದ್ದ. ಇದರಿಂದ ಆತನನ್ನು ಶಾಲಾ ಕೊಠಡಿಗೆ ಎಳೆದುಕೊಂಡು ಹೋಗಿ ಶಾಲಾ ಸಿಬ್ಬಂದಿ ಮನಬಂದಂತೆ ಥಳಿಸಿದ್ದರು. ನಂತರ ಆತನನ್ನು ಶಾಲೆಯಿಂದ ಹೊರಹಾಕಿದ್ದರು.

ಆಗ ವಿವೇಕ್ ಶಾಲೆಯ ಗೇಟ್‌ನ ಹೊರಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಎಂದು ವಿವೇಕ್​ನ ಅಜ್ಜ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆಗ ಆಟೋ ಡ್ರೈವರ್ ಅವನನ್ನು ಗುರುತಿಸಿ ಅವನನ್ನು ಮನೆಗೆ ಕರೆದುಕೊಂಡು ಬಂದಿದ್ದ. ಆತನನ್ನು ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ವಿವೇಕ್ ಮೃತಪಟ್ಟಿದ್ದಾನೆ.

ಇದನ್ನೂ ಓದಿ: Jammu Kashmir: ಕಾಶ್ಮೀರದಲ್ಲಿ ಉಗ್ರನ ಬಂಧನ; ಹೊರಬಿತ್ತು ಆಘಾತಕಾರಿ ಸತ್ಯ, ಪಾಕ್ ಸೇನೆಯ ಹಸ್ತಕ್ಷೇಪಕ್ಕೆ ದೊರಕಿತು ಸಾಕ್ಷ್ಯ

ಸಾಯುವ ಮೊದಲು ಅವನು ತನ್ನ ಶಿಕ್ಷಕರು ತನ್ನ ಎದೆಗೆ ಹೊಡೆದಿದ್ದರು ಎಂದು ತನ್ನ ಕುಟುಂಬಕ್ಕೆ ತಿಳಿಸಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ವಜೀರ್‌ಗಂಜ್‌ನ ಎಸ್‌ಎಚ್‌ಒ ರಾಮ್ ಎಕ್ಬಾಲ್ ಯಾದವ್, “ನಾವು ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದೇವೆ. ವಿದ್ಯಾರ್ಥಿ ವಿವೇಕ್ ಲಿಟಲ್ ಲೀಡರ್ಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಓದುತ್ತಿದ್ದಾನೆ. ಅವನು ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ಎಂದು ಮೃತನ ಕುಟುಂಬ ಸದಸ್ಯರು ಹೇಳಿದ್ದಾರೆ. ಆತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಶಾಲೆಯ ಮಾಲೀಕರಾದ ವಿಕಾಸ್ ಸಿಂಗ್ ಮತ್ತು ಆತನ ಪತ್ನಿಯಿಂದ ಆ ಬಾಲಕ ಸಾವನ್ನಪ್ಪಿದ್ದಾರೆ. ನಾವು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದೇವೆ.” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ