ಧನ್‌ಬಾದ್: ತಮ್ಮ ಸರ್ಕಾರ ಜನರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದಾಗಿ ಜಾರ್ಖಂಡ್ ಸರ್ಕಾರ (Jharkhand Government) ಘೋಷಿಸಿಕೊಂಡಿದೆ. ಆದರೆ, ವಾಸ್ತವ ವಿಚಾರ ಬೇರೆಯೇ ಇದೆ. ಜಾರ್ಖಂಡ್ನ ಧನ್‌ಬಾದ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ (Delivery) ಬಂದು ಅಡ್ಮಿಟ್ ಆಗಿದ್ದ ಮಹಿಳೆಯೊಬ್ಬರು ನೋವಿನಿಂದ ನರಳುತ್ತಿದ್ದರು. ಆದರೆ, ಆ ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್ನಲ್ಲಿ (OT) ಲೈಟ್ ಇರಲಿಲ್ಲ. ಲೈಟ್ ಇಲ್ಲದೆ ಆಪರೇಷನ್ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದಾಗ ಹೇಗಾದರೂ ಮಾಡಿ ತಾಯಿ ಮತ್ತು ಮಗುವನ್ನು ಉಳಿಸಿಕೊಡಿ ಎಂದು ಮಹಿಳೆಯ ಮನೆಯವರು ಬೇಡಿಕೊಂಡರು. ಹೀಗಾಗಿ, ಆಸ್ಪತ್ರೆಯ ಪಕ್ಕದಲ್ಲಿದ್ದ ಪಾನ್ ಶಾಪ್ನಿಂದ ಟಾರ್ಚ್ ತಂದ ವೈದ್ಯರು ಅದೇ ಟಾರ್ಚ್ ಬೆಳಕಿನಲ್ಲಿ ಸಿಸೇರಿಯನ್ ಆಪರೇಷನ್ ಮಾಡಿ, ಮಗುವನ್ನು ಹೊರತೆಗೆದಿದ್ದಾರೆ.
ಧನ್‌ಬಾದ್‌ನ ಸರ್ಕಾರಿ ಆಸ್ಪತ್ರೆಯ ಹತ್ತಿರದ ಪಾನ್ ಅಂಗಡಿಯಿಂದ ಖರೀದಿಸಿದ ಟಾರ್ಚ್‌ಲೈಟ್‌ನಲ್ಲಿ ವೈದ್ಯರು ಸಿಸೇರಿಯನ್ ಮಾಡಿದ್ದಾರೆ. ಅದೃಷ್ಟವಶಾತ್ ಆಪರೇಷನ್ ಸಕ್ಸಸ್ ಆಗಿದ್ದು, ತಾಯಿ- ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ. ಓಟಿ ಲೈಟ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಟಾರ್ಚ್‌ಲೈಟ್‌ನಲ್ಲಿ ಆಪರೇಷನ್ ಮಾಡಲಾಗಿದೆ. ಈ ವಿಷಯ ಹೊರಬೀಳುತ್ತಿದ್ದಂತೆ ಆಸ್ಪತ್ರೆಯಲ್ಲಿದ್ದ ರೋಗಿಗಳು ಮತ್ತು ಸಾರ್ವಜನಿಕರು ಆ ಆಸ್ಪತ್ರೆಯ ವೈದ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಅಪ್ಪನ ಜೀವ ಉಳಿಸಲು ಕಿಡ್ನಿ ನೀಡಲಿರುವ ಲಾಲೂ ಪ್ರಸಾದ್ ಯಾದವ್ ಮಗಳು; ಈ ತಿಂಗಳಾಂತ್ಯದಲ್ಲಿ ಸಿಂಗಾಪುರದಲ್ಲಿ ಆಪರೇಷನ್
ಆದರೆ, ತಮ್ಮ ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್ನಲ್ಲಿ ಲೈಟ್ ಇಲ್ಲ ಎಂಬುದಕ್ಕೆ ತಲೆಕೆಡಿಸಿಕೊಳ್ಳದ, ಆ ವ್ಯವಸ್ಥೆಯನ್ನು ಸರಿ ಮಾಡಿಸದ ಆಸ್ಪತ್ರೆಯ ಆಡಳಿತ ವರ್ಗದವರು ತಮ್ಮ ಆಸ್ಪತ್ರೆಯಲ್ಲಿ ಟಾರ್ಚ್ ಬೆಳಕಿನಲ್ಲಿ ಹೆರಿಗೆ ಮಾಡಿದ್ದು ದೊಡ್ಡ ಸಾಧನೆ ಎಂದು ಹೇಳುತ್ತಿದ್ದಾರೆ. ಆಸ್ಪತ್ರೆಯ ಉಪಕರಣಗಳನ್ನು ದುರಸ್ತಿ ಮಾಡಲು ಆಸಕ್ತಿ ತೋರದ ಆಸ್ಪತ್ರೆಯ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ದಿನಗಳಿಂದ ಓಟಿ ಲೈಟ್ ಕೆಟ್ಟು ನಿಂತಿದ್ದರೂ ದುರಸ್ತಿಗೆ ಯಾರೂ ಕಾಳಜಿ ವಹಿಸಿಲ್ಲ ಎಂಬ ಆರೋಪವಿದೆ. ಹಲವಾರು ಸೌಲಭ್ಯಗಳಿಲ್ಲದಿದ್ದರೂ ಆ ಮಹಿಳೆಯನ್ನು ಅನಿವಾರ್ಯವಾಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅದೃಷ್ಟವಶಾತ್ ಸಿಸೇರಿಯನ್ ಆಪರೇಷನ್ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದು, ಆರೋಗ್ಯವಾಗಿದ್ದಾರೆ.
Published On - 8:16 am, Fri, 18 November 22