ಅಪ್ಪನ ಜೀವ ಉಳಿಸಲು ಕಿಡ್ನಿ ನೀಡಲಿರುವ ಲಾಲೂ ಪ್ರಸಾದ್ ಯಾದವ್ ಮಗಳು; ಈ ತಿಂಗಳಾಂತ್ಯದಲ್ಲಿ ಸಿಂಗಾಪುರದಲ್ಲಿ ಆಪರೇಷನ್
ತನ್ನ ಜೀವ ಉಳಿಸಲು ರೋಹಿಣಿ ತನ್ನ ಕಿಡ್ನಿ ದಾನ ಮಾಡುವುದಕ್ಕೆ ಲಾಲು ಪ್ರಸಾದ್ ಯಾದವ್ ಆರಂಭದಲ್ಲಿ ಒಪ್ಪಿರಲಿಲ್ಲ. ಆದರೆ ಆಕೆಯ ಒತ್ತಡದ ನಂತರ ಅವರು ಆಪರೇಷನ್ಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಕಳೆದ ಹಲವಾರು ವರ್ಷಗಳಿಂದ ಮೂತ್ರಪಿಂಡದ ಕಾಯಿಲೆ ಮತ್ತು ಇತರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಂಗಾಪುರದಲ್ಲಿರುವ ಅವರ ಪುತ್ರಿ ರೋಹಿಣಿ ಆಚಾರ್ಯ (Rohini Acharya) ಅವರು ತಮ್ಮ ತಂದೆಯ ಜೀವ ಉಳಿಸಲು ತಮ್ಮ ಕಿಡ್ನಿಗಳಲ್ಲಿ ಒಂದನ್ನು ಲಾಲೂ ಪ್ರಸಾದ್ ಯಾದವ್ ಅವರಿಗೆ ದಾನ ಮಾಡಲು ನಿರ್ಧರಿಸಿದ್ದಾರೆ. ಇದರಿಂದಾಗಿ ಲಾಲೂ ಪ್ರಸಾದ್ ಯಾದವ್ ಇದೀಗ ಹೊಸ ಜೀವನ ಪಡೆಯಲಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ಸಿಂಗಾಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರಿಗೆ ಕಿಡ್ನಿ ಕಸಿ ಮಾಡಿಸಿಕೊಳ್ಳುವಂತೆ ಸಿಂಗಾಪುರದ ವೈದ್ಯರು ಸಲಹೆ ನೀಡಿದ್ದರು. ಇದಾದ ಬಳಿಕ ರೋಹಿಣಿ ತನ್ನ ಒಂದು ಮೂತ್ರಪಿಂಡವನ್ನು ತನ್ನ ತಂದೆಗೆ ದಾನ ಮಾಡಲು ಮುಂದಾಗಿದ್ದಾರೆ.
ತನ್ನ ಜೀವ ಉಳಿಸಲು ರೋಹಿಣಿ ತನ್ನ ಕಿಡ್ನಿ ದಾನ ಮಾಡುವುದಕ್ಕೆ ಲಾಲು ಪ್ರಸಾದ್ ಯಾದವ್ ಆರಂಭದಲ್ಲಿ ಒಪ್ಪಿರಲಿಲ್ಲ. ಆದರೆ ಆಕೆಯ ಒತ್ತಡದ ನಂತರ ಅವರು ಆಪರೇಷನ್ಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ನವೆಂಬರ್ 20ರಿಂದ 24ರ ನಡುವೆ ಲಾಲು ಪ್ರಸಾದ್ ಯಾದವ್ ಅವರು ಮತ್ತೆ ಸಿಂಗಾಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಸಮಯದಲ್ಲಿ ಅವರು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Breaking News: ಉದ್ಯೋಗಕ್ಕಾಗಿ ಭೂಮಿ ಹಗರಣ; ಲಾಲು ಪ್ರಸಾದ್ ಯಾದವ್ ಸೇರಿ 15 ಜನರ ವಿರುದ್ಧ ಸಿಬಿಐ ಚಾರ್ಜ್ಶೀಟ್ ಸಲ್ಲಿಕೆ
ಸಿಂಗಾಪುರದಲ್ಲಿ ನೆಲೆಸಿರುವ ಲಾಲು ಅವರ ಎರಡನೇ ಪುತ್ರಿ ರೋಹಿಣಿ ಅವರು ತಮ್ಮ ತಂದೆಯ ಮೂತ್ರಪಿಂಡದ ಕಾಯಿಲೆಯ ಬಗ್ಗೆ ತುಂಬಾ ಚಿಂತಿತರಾಗಿದ್ದರು. ಮೂತ್ರಪಿಂಡದ ಕಸಿಯ ಸಲಹೆ ನೀಡಿದ ವೈದ್ಯರ ತಂಡವನ್ನು ಭೇಟಿ ಮಾಡಲು ರೋಹಿಣಿ ಅವರೇ ಲಾಲೂ ಪ್ರಸಾದ್ ಯಾದವ್ ಅವರನ್ನು ಸಿಂಗಾಪುರಕ್ಕೆ ಒತ್ತಾಯದಿಂದ ಕರೆಸಿಕೊಂಡಿದ್ದರು.
ಕಿಡ್ನಿ ಸಮಸ್ಯೆಯಿಂದ ಕಳೆದ ಹಲವು ವರ್ಷಗಳಿಂದ ದೆಹಲಿ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲು ಪ್ರಸಾದ್ ಅವರಿಗೆ ಎಐಐಎಂಎಸ್‌ನ ವೈದ್ಯರು ಕಿಡ್ನಿ ಕಸಿ ಮಾಡುವಂತೆ ಸಲಹೆ ನೀಡಿರಲಿಲ್ಲ. ಆದರೆ ಸಿಂಗಾಪುರ ಭೇಟಿ ವೇಳೆ ಅಲ್ಲಿನ ವೈದ್ಯರು ಕಿಡ್ನಿ ಕಸಿ ಮಾಡುವಂತೆ ಸಲಹೆ ನೀಡಿದ್ದರು.