ಮುದ್ರಣಾಲಯದಿಂದಲೇ 500 ರೂಪಾಯಿ ಗರಿಗರಿ ನೋಟುಗಳ 10 ಬಂಡಲ್ ನಾಪತ್ತೆ​; ಬಿಗಿಭದ್ರತೆ ನಡುವೆಯೂ ಮಹಾಮೋಸ

| Updated By: Skanda

Updated on: Jul 14, 2021 | 8:37 AM

ನಾಸಿಕ್​ನಲ್ಲಿ ವರ್ಷಕ್ಕೆ 200ರಿಂದ 250 ಕೋಟಿ ರೂಪಾಯಿ ಮೌಲ್ಯದ ನಗದು ಮುದ್ರಣವಾಗುತ್ತದೆ. ಈ ಕಾರಣದಿಂದ ವರ್ಷದ 365ದಿನಗಳಲ್ಲೂ ದಿನದ 24 ಗಂಟೆ ಅತ್ಯಂತ ಬಿಗಿ ಭದ್ರತೆ ಇರುತ್ತದೆ. ಹೀಗಾಗಿ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಮುದ್ರಣಾಲಯದಿಂದಲೇ 500 ರೂಪಾಯಿ ಗರಿಗರಿ ನೋಟುಗಳ 10 ಬಂಡಲ್ ನಾಪತ್ತೆ​; ಬಿಗಿಭದ್ರತೆ ನಡುವೆಯೂ ಮಹಾಮೋಸ
ಸಾಂಕೇತಿಕ ಚಿತ್ರ
Follow us on

ಮುಂಬೈ: ಆಗಷ್ಟೇ ಮುದ್ರಣಗೊಂಡಿದ್ದ 500ರೂಪಾಯಿ ಮೌಲ್ಯದ ನೋಟಿನ 10 ಬಂಡಲ್​ಗಳು ಮಾಯವಾಗಿರುವ ಘಟನೆ ಮುಂಬೈನ ನಾಸಿಕ್​ನಲ್ಲಿ (Nashik) ನಡೆದಿದೆ. ನಾಸಿಕ್​ನಲ್ಲಿರುವ ನೋಟು ಮುದ್ರಣಾಲಯದಿಂದ ಗರಿಗರಿ ನೋಟುಗಳು ಕಾಣೆಯಾಗಿದ್ದು, ಅತ್ಯಂತ ಭದ್ರತೆಯಿದ್ದರೂ ಹಣ ನಾಪತ್ತೆಯಾಗಿದ್ದು ಹೇಗೆ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಪ್ರಕರಣದ ಬಗ್ಗೆ ಮುದ್ರಣಾಲಯದ (Currency note Press) ಅಧಿಕಾರಿಗಳು ಹೆಚ್ಚುವರಿ ಮಾಹಿತಿಯನ್ನು ನೀಡಿಲ್ಲ. ಸದ್ಯ ನಾಸಿಕ್​ ಪೊಲೀಸರಿಗೆ (Nashik Police) ಈ ಬಗ್ಗೆ ವಿಷಯ ಮುಟ್ಟಿಸಲಾಗಿದೆ ಎನ್ನುವುದು ತಿಳಿದುಬಂದಿದೆ.

ಕಾಣೆಯಾಗಿರುವ ನೋಟುಗಳು ಹೊಸದಾಗಿ ಮುದ್ರಣಗೊಂಡವುಗಳಾಗಿದ್ದು, ಮುದ್ರಣಾಲಯದಿಂದ ಹೊರಬರುವ ಮುನ್ನವೇ ಅವುಗಳು ಯಾರದ್ದೋ ಪಾಲಾಗಿವೆ. 500 ರೂಪಾಯಿ ಮುಖಬೆಲೆಯ 10 ಬಂಡಲ್​ ಎಂದರೆ ಒಟ್ಟು 5 ಲಕ್ಷ ರೂಪಾಯಿ ಮೌಲ್ಯದ ನೋಟುಗಳು ಕಣ್ಮರೆಯಾಗಿದ್ದು, ದಿನದ 24 ಗಂಟೆಯೂ ನೀಡಲಾಗುವ ಭಾರೀ ಭದ್ರತೆಯ ನಡುವೆ ಇವುಗಳನ್ನು ಯಾರು ತೆಗೆದುಕೊಂಡು ಹೋಗಲು ಸಾಧ್ಯ ಎಂಬ ಪ್ರಶ್ನೆ ಮೂಡಿದೆ.

ಸಾಧಾರಣವಾಗಿ ನೋಟು ಮುದ್ರಿಸುವ ಮುದ್ರಣಾಲಯಗಳಿಗೆ ಅತ್ಯಂತ ಬಿಗಿ ಭದ್ರತೆಯನ್ನು ಒದಗಿಸಲಾಗುತ್ತದೆ. ಯಾರೂ ಸಹ ಸುಖಾಸುಮ್ಮನೆ ಮುದ್ರಾಣಾಲಯಗಳಿಗೆ ಹೋಗುವಂತಿಲ್ಲ. ಅಲ್ಲದೇ, ನೋಟು ಅಮಾನ್ಯೀಕರಣದಂತಹ ಸಂದರ್ಭದಲ್ಲೂ ಈ ರೀತಿಯ ಯಾವುದೇ ಪ್ರಕರಣಗಳು ದಾಖಲಾಗಿರಲಿಲ್ಲ. ಅಲ್ಲಿನ ಸಿಬ್ಬಂದಿ ಸಹ ಸಾಕಷ್ಟು ನಿಯಮಾವಳಿಗಳನ್ನು ಪಾಲಿಸಿಯೇ ಕೆಲಸ ಮಾಡಬೇಕಾದ್ದರಿಂದ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಹೊರ ಹೋಗುವುದು ಸಾಧ್ಯವಿಲ್ಲ.

ಸದ್ಯ ಈ ಘಟನೆ ಮುದ್ರಣಾಲಯದ ಹಿರಿಯ ಸಿಬ್ಬಂದಿಗೂ ಅಚ್ಚರಿ ಮೂಡಿಸಿದ್ದು, ಸೋಮವಾರ ನಾಸಿಕ್​ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಸಾಕಷ್ಟು ಸಂದೇಹಗಳಿದ್ದು ಬೇರೆ ಬೇರೆ ಆಯಾಮಗಳಲ್ಲಿ ಪ್ರಕರಣದ ಬಗ್ಗೆ ಯೋಚಿಸುವಂತಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಸದರಿ ಘಟನೆಗೆ ಮುದ್ರಣಾಲಯದ ಸಿಬ್ಬಂದಿ ನಿರ್ಲಕ್ಷತನವೇ ಕಾರಣವೇ, ಭದ್ರತಾ ಸಿಬ್ಬಂದಿ ಲೋಪವೇ ಎಂದು ಹೇಳುವುದು ಸಾಧ್ಯವಾಗುತ್ತಿಲ್ಲ.

ನಾಸಿಕ್​ನಲ್ಲಿ ವರ್ಷಕ್ಕೆ 200ರಿಂದ 250 ಕೋಟಿ ರೂಪಾಯಿ ಮೌಲ್ಯದ ನಗದು ಮುದ್ರಣವಾಗುತ್ತದೆ. ಈ ಕಾರಣದಿಂದ ವರ್ಷದ 365ದಿನಗಳಲ್ಲೂ ದಿನದ 24 ಗಂಟೆ ಅತ್ಯಂತ ಬಿಗಿ ಭದ್ರತೆ ಇರುತ್ತದೆ. ಹೀಗಾಗಿ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಯಾವ ರೀತಿ ಇದಕ್ಕೆ ತಾರ್ಕಿಕ ಅಂತ್ಯ ಕಾಣಲಿದೆ ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ:
Old Coin Auction: ಹಳೇ ಕಾಲದ ನೋಟು, ನಾಣ್ಯ ಇದ್ದರೆ ಲಕ್ಷಗಟ್ಟಲೆ ಸಂಪಾದಿಸಿ; ಆನ್​ಲೈನ್​ ವ್ಯವಹಾರ ಮಾಡುವಾಗ ಎಚ್ಚರವೂ ಇರಲಿ