ದೆಹಲಿಯಲ್ಲಿ ಪ್ರಶಾಂತ್ ಕಿಶೋರ್ ಮತ್ತು ರಾಹುಲ್-ಪ್ರಿಯಾಂಕಾ ನಡುವೆ ಭೇಟಿ, ಚರ್ಚೆ ಕೇವಲ ಸಿಂಗ್-ಸಿಧುಗೆ ಸೀಮಿತವಾಗಿರಲಿಲ್ಲ: ಮೂಲಗಳು
ಮೂಲಗಳ ಪ್ರಕಾರ ರಾಜ್ಯದಲ್ಲಿ ಅಥವಾ ಸರ್ಕಾರದಲ್ಲಿ ಸಿಧು ಅವರಿಗೆ ದೊಡ್ಡ ಜವಾಬ್ದಾರಿಯನ್ನು ವಹಿಸುವುದು ಸಿಂಗ್ ಅವರಿಗೆ ಇಷ್ಟವಿಲ್ಲ. ಸಿಂಗ್ ಮತ್ತು ಸೋನಿಯಾ ಭೇಟಿಯ ನಂತರ ಕಾಂಗ್ರೆಸ್ ಮೂಲಗಳು, ಅಮರಿಂದರ್ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರೆಸುವ ಮತ್ತು ಸಂಪುಟದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿ ಸಿಧು ಅವರನ್ನು ಆದರಲ್ಲಿ ಸೇರಿಸಿಕೊಳ್ಳುವ ಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದವು
ನವದೆಹಲಿ: ಪಂಜಾಬನಲ್ಲಿ ತನ್ನ ಪ್ರಮುಖ ನಾಯಕರ ನಡುವೆ ನಡೆಯುತ್ತಿರುವ ಕಾದಾಟಗಳಿಂದ ಬೇಸತ್ತಿರುವ ಕಾಂಗ್ರೆಸ್ ಪಕ್ಷದ ವರಿಷ್ಠರಾಗಿರುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಚುನಾವಣಾ ರಣವ್ಯೂಹ ರಚಿಸುವುದರಲ್ಲಿ ನಿಷ್ಣಾತರೆನಿಸಿಕೊಂಡಿರುವ ಪ್ರಶಾಂತ್ ಕಿಶೋರ್ ಅವರು ಮಂಗಳವಾರದಂದು ನವದೆಹಲಿಯಲ್ಲಿ ಭೇಟಿಯಾದರು. ಆ ರಾಜ್ಯದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಹಿರಿಯ ನಾಯಕ ಹಾಗೂ ಮಾಜಿ ಕ್ರಿಕೆಟ್ ಆಟಗಾರ ನವಜೋತ್ ಸಿಂಗ್ ಸಿಧು ನಡುವೆ ಜಾರಿಯಲ್ಲಿರುವ ಜಗಳಗಳು ಜಗಜ್ಜಾಹೀಜಗೀರಾಗಿವೆ. ಮುಂದಿನ ವರ್ಷ ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಶಾಂತ್ ಕಿಶೋರ್ ಗಾಂಧಿಗಳನ್ನು ಭೇಟಿಯಾಗಿರುವುದು ಮಹತ್ವ ಪಡೆದುಕೊಂಡಿದೆ.
ಈ ಭೇಟಿಗೆ ಸಂಬಂಧಿಸಿದ ಹತ್ತು ಅಂಶಗಳನ್ನು ಹೀಗೆ ಪಟ್ಟಿಮಾಡಿ ಚರ್ಚಿಸಬಹುದು.
ಗಾಂಧಿಗಳೊಂದಿಗೆ ಸಭೆ ಮುಗಿದ ಕೂಡಲೇ, ಪಂಜಾಬನಲ್ಲಿ ಕಾಂಗ್ರೆಸ್ ಉಸ್ತುವಾರಿಯಾಗಿರುವ ಹರೀಶ್ ರಾವತ್ ಮಾಧ್ಯಮದವರರೊಂದಿಗೆ ಮಾತಾಡಿ, ‘ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸಿಧು ಮತ್ತು ಸಿಂಗ್ ಇಬ್ಬರನ್ನೂ ಕುರಿತಾದ ಒಳ್ಳೆಯ ಸುದ್ದಿಯೊಂದು ನಿಮಗೆ ಸಿಗಲಿದೆ,’ ಎಂದು ಹೇಳಿದರು.
ಮೂಲಗಳ ಪ್ರಕಾರ ಪ್ರಶಾಂತ್ ಕಿಶೋರ್ ಮತ್ತು ಗಾಂಧಿಗಳ ನಡುವಿನ ಭೇಟಿಯು ಕೇವಲ ಪಂಜಾಬಿಗೆ ಸೀಮಿತವಾಗಿರದೆ, ದೊಡ್ಡ ರಣವ್ಯೂಹ ಬಗ್ಗೆ ಚರ್ಚೆ ನಡೆಯಿತು. ಕಿಶೋರ್ ಅವರು ಕೆಲ ದಿನಗಳ ಮುಂಚೆ ಎನ್ಸಿಪಿಯ ಶರದ್ ಪವಾರ್ ಅವರನ್ನು ಭೇಟಿಯಾಗಿದ್ದು, 2024 ರ ಚುನಾವಣೆಗೆ ಮೊದಲು, ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ಸಂಯುಕ್ತ ರಂಗ ರಚನೆಗೆ ಮಾತಕತೆ ನಡೆದಿದೆ ಎನ್ನಲಾಗಿದೆ. ಬಿಜೆಪಿ ಅಥವಾ ಕಾಂಗ್ರೆಸ್ ಹೊರತಾದ ಸಮ್ಮಿಶ್ರ ರಚನೆಯಾಗುವುದು ಸಾಧ್ಯವೇ ಇಲ್ಲ ಎಂದು ಇವರಿಬ್ಬರೂ ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಪಂಜಾಬ್ಗೆ ಸಂಬಂಧಿಸಿದ ಮಾತುಕತೆಯಲ್ಲಿ ರಾಜ್ಯದ ಇಬ್ಬರು ಪ್ರಮುಖ ನಾಯಕರ ನಡುವೆ ಚುನಾವಣೆಗೆ ಮೊದಲು ಮನಸ್ತಾಪಗಳು ದೂರಗೊಂಡು, ಅವರು ಒಟ್ಟುಗೂಡಿ ಕೆಲಸ ಮಾಡುವಂಥ ಸ್ಥಿತಿ ನಿರ್ಮಾಣ ಮಾಡುವ ಬಗ್ಗೆ ಗಂಭೀರ ಚರ್ಚೆ ನಡೆಯಿತು. ರಾಹುಲ್ ಮತ್ತು ಪ್ರಿಯಾಂಕಾ; ಸಿಂಗ್ ಮತ್ತು ಸಿಧು ಅವರನ್ನು ಈಗಾಗಲೇ ಪ್ರತ್ಯೇಕವಾಗಿ ಭೇಟಿಯಾಗಿದ್ದಾರೆ.
ಕಿಶೋರ್, 2017ರಲ್ಲಿ ನಡೆದ ವಿಧಾನ ಸಭಾ ಚುನಾವಣೆಗೆ ಕೆಲವೇ ದಿನ ಮೊದಲು ಸಿಧು ಅವರನ್ನು ಕಾಂಗ್ರೆಸ್ಗೆ ಕರೆತರುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದರು. ಆಗ ಬಿಜೆಪಿ ಪಕ್ಷದ ರಾಜ್ಯ ಸಭಾ ಸದಸ್ಯರಾಗಿದ್ದ ಸಿಧು ಅವರು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ನಡುವೆ ಓಡಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಆದರೆ, ಕಿಶೋರ್ ರಚಿಸಿದ ರಣವ್ಯೂಹದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸಿಂಗ್ ಮತ್ತು ಸಿಧು ನಡುವೆ ತಿಕ್ಕಾಟ ಶುರುವಾಯಿತು. ಎರಡು ವರ್ಷಗಳ ನಂತರ ಸಿಂಗ್ ಅವರ ಸಚಿವ ಸಂಪುಟ ಬಿಟ್ಟು ಹೊರಬಂದ ಸಿಧು ಅವರು ಸಿಂಗ್ ಅವರನ್ನು ಟೀಕಿಸುವ ಒಂದು ಅವಕಾಶವನ್ನೂ ಬಿಡಲಿಲ್ಲ.
ಜೂನ್ 30 ರಂದು ಪ್ರಿಯಾಂಕಾ ಅವರನ್ನು ಭೇಟಿಯಾದ ಸಿಧು, ಅವರೊಂದಿಗಿನ ಫೋಟೋ ಸಹ ಟ್ಬೀಟ್ ಮಾಡಿದರು. ಆಕೆಯೇ, ಸಿಧು ಮತ್ತು ರಾಹುಲ್ ನಡುವೆ ಮೀಟಿಂಗ್ ಒಂದರ ಏರ್ಪಾಡು ಮಾಡಿಸಿದರೆಂದು ನಂತರ ವರದಿಯಾಗಿತ್ತು. ಅದಕ್ಕೆ ಮೊದಲಿ ರಾಹುಲ್ ಅವರು ಸಿಧು ಜೊತೆ ಭೇಟಿಯಾಗುವ ಅಗತ್ಯವಿಲ್ಲ ಅಂತ ಹೇಳಿದ್ದರು.
ಕೆಲ ದಿನಗಳ ನಂತರ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾದ ಅಮರಿಂದರ್ ಸಿಂಗ್ ವಾಪಸ್ಸು ತೆರಳವಾಗ ಮಾಧ್ಯಮದವರೊಂದಿಗೆ ಮಾತಾಡುತ್ತಾ, ‘ಸಿಧು ಸಾಬ್ ನನಗೇನೂ ಗೊತ್ತಿಲ್ಲ. ನಾನು ಹೇಳುವುದಿಷ್ಟೇ, ಪಕ್ಷದ ಅಧ್ಯಕ್ಷರು ತೆಗೆದುಕೊಳ್ಳುವ ನಿರ್ಧಾರವನ್ನು ನಾವೆಲ್ಲ ಪಾಲಿಸುತ್ತೇವೆ,’ ಎಂದು ಹೇಳಿದರು.
ಆದರೆ ಮೂಲಗಳ ಪ್ರಕಾರ ರಾಜ್ಯದಲ್ಲಿ ಅಥವಾ ಸರ್ಕಾರದಲ್ಲಿ ಸಿಧು ಅವರಿಗೆ ದೊಡ್ಡ ಜವಾಬ್ದಾರಿಯನ್ನು ವಹಿಸುವುದು ಸಿಂಗ್ ಅವರಿಗೆ ಇಷ್ಟವಿಲ್ಲ. ಸಿಂಗ್ ಮತ್ತು ಸೋನಿಯಾ ಭೇಟಿಯ ನಂತರ ಕಾಂಗ್ರೆಸ್ ಮೂಲಗಳು, ಅಮರಿಂದರ್ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರೆಸುವ ಮತ್ತು ಸಂಪುಟದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿ ಸಿಧು ಅವರನ್ನು ಆದರಲ್ಲಿ ಸೇರಿಸಿಕೊಳ್ಳುವ ಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದವು.
ತಮ್ಮ ಮನದಿಂಗಿತವನ್ನು ಸಿಧು ಸರಣಿ ಟ್ವೀಟ್ಗಳ ಮೂಲಕ ಹೊರಹಾಕುತ್ತಿದ್ದ್ದಾರೆ. ಎರಡು ದಿನಗಳಿಂದ ಅವರು ಸಿಂಗ್ ಬದಲಿಗೆ ಪಂಜಾಬ್ನಲ್ಲಿ ಕಾಂಗ್ರೆಸ್ ಪಕ್ಷದ ಬದ್ಧ ವೈರಿಗಳಾಗಿರುವ ಬಿಜೆಪಿ-ಅಕಾಲಿ ದಳ ಮತ್ತು ದೆಹಲಿಯ ಆಪ್ ಸರ್ಕಾರವನ್ನು ಗುರಿಯಾಗಿಸಿದ್ದಾರೆ. ಆಪ್ ಪಕ್ಷ ವಿರುದ್ಧ ಮಾಡಿರುವ ಅವರ ಇಂದಿನ ಟ್ವೀಟ್ಗಳನ್ನು ವಿಡಂಬನೆ ಎಂದು ಕೆಲವರು ಪರಿಗಣಿಸಿದರೆ ಇನ್ನೂ ಕೆಲವರು, ಅರವಿಂದ್ ಕೇಜ್ರಿವಾಲ್ ಅವರ ಪಕ್ಷವನ್ನು ಸೇರುವ ಸುಳಿವು ನೀಡುತ್ತಿದ್ದಾರೆ,’ ಎಂದು ಹೇಳುತ್ತಿದ್ದಾರೆ.
2017 ರ ಉತ್ತರ ಪ್ರದೇಶದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವನ್ನು ಒಂದುಗೂಡಿಸಿ ರಣವ್ಯೂಹ ರಚಿಸಿದ್ದ ಕಿಶೋರ್ ಬಿಜೆಪಿ ಗೆಲ್ಲುವುದನ್ನು ತಡೆಯಲು ವಿಫಲರಾಗಿದ್ದರು. ಆದಾದ ನಂತರ ರಾಹುಲ ಗಾಂಧಿ ಮೊದಲ ಬಾರಿಗೆ ಮಂಗಳವಾರ ಕಿಶೋರ್ ಅವರನ್ನು ಭೇಟಿಯಾದರು.