ವಿಶಾಖಪಟ್ಟಣಂನಲ್ಲಿ ಇಂದು ಆರು ಮಂದಿ ನಕ್ಸಲರನ್ನು ಗ್ರೇಹೌಂಡ್ಸ್ ಪೊಲೀಸ್ ಪಡೆ ಹೊಡೆದುರುಳಿಸಿದೆ. ಇಂದು ಬೆಳಗ್ಗೆಯಿಂದಲೂ ಮಾವೋವಾದಿಗಳು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಗುಂಡಿನ ವಿನಿಮಯ ನಡೆಯುತ್ತಿತ್ತು. ಈ ಎನ್ಕೌಂಟರ್ನಲ್ಲಿ ಆರು ಮಂದಿ ನಕ್ಸಲರನ್ನು ಗ್ರೇಹೌಂಡ್ಸ್ ಪೊಲೀಸರು ಹತ್ಯೆಗೈದಿದ್ದಾರೆ ಎಂದು ವಿಶಾಖ ಗ್ರಾಮೀಣ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ.ಕೃಷ್ಣರಾವ್ ತಿಳಿಸಿದ್ದಾರೆ.
ಆ್ಯಂಟಿ ನಕ್ಸಲ್ ವಿಶೇಷ ಪಡೆ ಗ್ರೇಹೌಂಡ್ಸ್ ಪೊಲೀಸರು ಮತ್ತು ಸಿಪಿಐ (ಮಾವೋವಾದಿಗಳು) ಸಿಬ್ಬಂದಿ ನಡುವೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಮಾಂಪಾದಲ್ಲಿರುವ ಕೊಯಿರು ಸುತ್ತಲಿನ ಅರಣ್ಯಪ್ರದೇಶವಾದ ತೀಲಗಮೆಟ್ಟದಲ್ಲಿ ಬೆಳಗ್ಗೆ ಗುಂಡಿನಚಕಮಕಿ ನಡೆದಿತ್ತು. ಆರು ಮಂದಿ ಮೃತಪಟ್ಟವರಲ್ಲಿ ಮಹಿಳಾ ನಕ್ಸಲರೂ ಸೇರಿದ್ದಾರೆ. ಮೃತಪಟ್ಟವರ ಬಳಿಯಿದ್ದ ಒಂದು ಎಕೆ 47, ಮೂರು 303 ರೈಫಲ್ಸ್, ಒಂದು ಎಸ್ಎಲ್ಆರ್ ಸೇರಿ ಹಲವು ವಿಧದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೃಷ್ಣರಾವ್ ಮಾಹಿತಿ ನೀಡಿದ್ದಾರೆ.
ಪೊಲೀಸ್ ಸಿಬ್ಬಂದಿ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ. ಈ ಎನ್ಕೌಂಟರ್ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಇಂದು ಸಂಜೆ ವೇಳೆಗೆ ತಿಳಿಸಲಾಗುವುದು ಎಂದು ಹೇಳಿದ್ದಾರೆ. ಇತ್ತೀಚೆಗೆ ನಕ್ಸಲರ ಹಾವಳಿ ಜಾಸ್ತಿಯಾಗುತ್ತಿದೆ. ಛತ್ತೀಸ್ಗಢ್ನಲ್ಲಂತೂ ನಕ್ಸಲರ ದಾಳಿಗೆ ಅದೆಷ್ಟೋ ಪೊಲೀಸರು ಜೀವಕಳೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಆ್ಯಂಟಿ ನಕ್ಸಲ್ ಪಡೆಗಳು ತಮ್ಮ ಕಾರ್ಯವನ್ನು ಚುರುಕುಗೊಳಿಸಿವೆ.
Six Naxals killed in by Greyhounds police in Visakhapatnam