ತಿರುವನಂತಪುರಂ, ಏಪ್ರಿಲ್ 4: ಕಳೆದ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇದೀಗ ವಯ್ನಾಡ್ಗೆ (Wayanad constituency) ಹೋಗಿ ರಾಹುಲ್ರನ್ನು ಕಟ್ಟಿಹಾಕುವ ಪ್ರಯತ್ನ ಮಾಡಿದ್ದಾರೆ. ರಾಹುಲ್ ಗಾಂಧಿ ಸ್ಪರ್ಧಿಸಿರುವ ಕೇರಳದ ವಯ್ನಾಡು ಕ್ಷೇತ್ರದಲ್ಲಿ ಸ್ಮೃತಿ ಇರಾನಿ (Smriti Irani) ಪ್ರಚಾರ ನಡೆಸುತ್ತಿದ್ದಾರೆ. ಅಲ್ಲಿಯ ಬಿಜೆಪಿ ಅಭ್ಯರ್ಥಿ ಕೆ ಸುರೇಂದ್ರನ್ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯನ್ನು ಪಲಾಯನವಾದಿ ಎಂದು ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಅಮೇಥಿ ಕ್ಷೇತ್ರದ ಜನರಿಗೆ ವಂಚಿಸಿ ವಯ್ನಾಡಿಗೆ ಪಲಾಯನ ಮಾಡಿ ಬಂದಿದ್ದಾರೆ. ಈಗ ವಯ್ನಾಡ್ ಜನರಿಗೂ ಇವರು ಮೋಸ ಮಾಡಲಿದ್ದಾರೆ ಎಂದು ಕೇಂದ್ರ ಸಚಿವೆ ಆರೋಪಿಸಿದ್ದಾರೆ.
‘ಮೋದಿ ಪ್ರಧಾನಿ ಆದ ಬಳಿಕ ಅಮೇಥಿಯಲ್ಲಿ ನಾಲ್ಕು ಲಕ್ಷ ಕುಟುಂಬಗಳು ಮೊದಲ ಬಾರಿಗೆ ಶೌಚಾಲಯ ಪಡೆದವು. ಕಾಂಗ್ರೆಸ್ ಅಲ್ಲಿ 50 ವರ್ಷ ಅಧಿಕಾರದಲ್ಲಿದ್ದರೂ ಬಹಳಷ್ಟು ಜನರು ಮೋದಿ ಪ್ರಧಾನಿ ಆದ ಬಳಿಕವೇ ಮನೆಗಳನ್ನು ಪಡೆದದ್ದು. ಈಗ ರಾಹುಲ್ ಗಾಂಧಿ ಈ ವಯ್ನಾಡನ್ನು ತನ್ನ ಕುಟುಂಬ ಎನ್ನುತ್ತಿದ್ದಾರೆ. ಬಹಳ ಕಾಲ ಪ್ರತಿನಿಧಿಸುತ್ತಿದ್ದ ಅಮೇಥಿಯನ್ನು ತೊರೆದರು. ಅಲ್ಲಿಯ ಕುಟುಂಬದಿಂದ ಪಲಾಯನ ಮಾಡಿದರು. ಈಗ ವಯ್ನಾಡ್ನಲ್ಲೂ ಅದೇ ಕೆಲಸ ಮಾಡುತ್ತಿದ್ದರೆ. ಈ ಕ್ಷೇತ್ರದಲ್ಲಿ ಅವರ ಅನುಪಸ್ಥಿತಿಯೇ ಇದನ್ನು ಹೇಳುತ್ತಿದೆ,’ ಎಂದು ಸ್ಮೃತಿ ಇರಾನಿ ಸಿಡಿಗುಟ್ಟಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದ ಗೌರವ್ ವಲ್ಲಭ್ ಬಿಜೆಪಿ ಸೇರ್ಪಡೆ
ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಿರುತೆರೆ ನಟಿ ಕಮ್ ರಾಜಕೀಯ ತಾರೆ. ಕೇಂದ್ರ ಸಚಿವೆಯಾಗಿ ಮಾಡಿದ ಹೆಸರಿಗಿಂತ ರಾಹುಲ್ ಗಾಂಧಿ ವಿರುದ್ಧ ಗೆಲುವು ಸಾಧಿಸಿ ಹೆಚ್ಚು ಹೆಸರುವಾಸಿಯಾದವರು. ರಾಹುಲ್ ಗಾಂಧಿಗೆ ಅಭೇದ್ಯ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ 2019ರ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅದ್ಭುತ ರೀತಿಯಲ್ಲಿ ಗೆಲುವು ಸಾಧಿಸಿದ್ದರು. 2014ರ ಚುನಾವಣೆಯಲ್ಲೇ ಅಮೇಥಿಯ ಕಾಂಗ್ರೆಸ್ ಭದ್ರಕೋಟೆಯಲ್ಲಿ ಇರಾನಿ ಬಿರುಕು ಮೂಡಿಸಿದ್ದರು.
2009ರ ಚುನಾವಣೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ರಾಹುಲ್ ಗಾಂಧಿಯ ಗೆಲುವಿನ ಅಂತರ 2014ರ ಚುನಾವಣೆಯಲ್ಲಿ ಒಂದು ಲಕ್ಷಕ್ಕೆ ಕುಸಿಯಿತು. 2019ರ ಚುನಾವಣೆಯಲ್ಲಿ ರಾಹುಲ್ ಗಾಂಧಿಗೆ ಸೋಲಿನ ಮುನ್ಸೂಚನೆ ಇದ್ದಂತೆ ಅಮೇಥಿ ಮತ್ತು ವಯ್ನಾಡ್ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರು. ಅಮೇಥಿಯಲ್ಲಿ ಸ್ಮೃತಿ ಇರಾನಿ ಎದುರು ಸೋತರು. ವಯ್ನಾಡ್ನಲ್ಲಿ ದೊಡ್ಡ ಅಂತರದಿಂದ ಗೆದ್ದರು.
ಇದನ್ನೂ ಓದಿ: ಹೂಡಿಕೆಯಲ್ಲಿ ಬುದ್ಧಿವಂತ ರಾಹುಲ್ ಗಾಂಧಿ; ಎಲ್ಲೆಲ್ಲಿ ಅವರ ಇನ್ವೆಸ್ಟ್ಮೆಂಟ್ ಇದೆ ನೋಡಿ
ಕೇರಳದ ವಯ್ನಾಡ್ ಕ್ಷೇತ್ರವೂ ಕೂಡ ಕಾಂಗ್ರೆಸ್ನ ಭದ್ರಕೋಟೆಯೇ. 2019ರ ಚುನಾವಣೆಯಲ್ಲಿ ರಾಹುಲ್ ಗಾಂಧಿ 4 ಲಕ್ಷಕ್ಕೂ ಹೆಚ್ಚು ಅಂತರದ ಭಾರೀ ಗೆಲುವು ಪಡೆದಿದ್ದಾರೆ. ಇಲ್ಲಿ ಕಾಂಗ್ರೆಸ್ಗೆ ಪ್ರಮುಖ ಎದುರಾಳಿ ಸಿಪಿಐ ಪಕ್ಷ. ಈ ಕ್ಷೇತ್ರದಲ್ಲಿ ಬಿಜೆಪಿ ಉಪಸ್ಥಿತಿ ನಗಣ್ಯ. ಕೇರಳದ ಬಿಜೆಪಿ ಘಟಕದ ಅಧ್ಯಕ್ಷ ಕೆ ಸುರೇಂದ್ರನ್ ಈ ಬಾರಿ ಇಲ್ಲಿ ಸ್ಪರ್ಧಿಸಿರುವುದು ಕುತೂಹಲ. ಸಿಪಿಐನಿಂದ ಆ್ಯನೀ ರಾಜಾ ಅವರು ಸ್ಪರ್ಧಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Thu, 4 April 24