ರೋಹಿತ್ ಶರ್ಮಾ ಟ್ವೀಟ್ಗೆ ಆಕ್ಷೇಪಾರ್ಹ ಪ್ರತಿಕ್ರಿಯೆ; ಕಂಗನಾ ಟ್ವೀಟ್ ಡಿಲೀಟ್ ಮಾಡಿದ ಟ್ವಿಟರ್
ಕ್ರಿಕೆಟಿಗ ರೋಹಿತ್ ಶರ್ಮಾ ಅವರ ಟ್ವೀಟ್ಗೆ ದೋಭಿ ಕಾ ಕುತ್ತಾ ಎಂಬ ಪದ ಬಳಸಿ ಪ್ರತಿಕ್ರಿಯಿಸಿದ್ದಕ್ಕಾಗಿ ಕಂಗನಾ ರನೌತ್ ಅವರ ಟ್ವೀಟ್ನ್ನು ಟ್ವಿಟರ್ ಸಂಸ್ಥೆ ಡಿಲೀಟ್ ಮಾಡಿದೆ.
ನವದೆಹಲಿ: ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಸೆಲೆಬ್ರಿಟಿಗಳ ವಿರುದ್ಧ ಟ್ವೀಟ್ ಪ್ರಹಾರ ಮಾಡುತ್ತಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅವರ ಎರಡು ಟ್ವೀಟ್ ಗಳನ್ನು ಟ್ವಿಟರ್ ಸಂಸ್ಥೆ ಡಿಲೀಟ್ ಮಾಡಿದೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಭಾಗದಲ್ಲಿ ಪ್ರತಿಭಟನೆ ನಿರತರಾಗಿರುವ ರೈತರ ಬಗ್ಗೆ ನಾವು ಯಾಕೆ ಚರ್ಚಿಸುತ್ತಿಲ್ಲ ಎಂದು ಅಮೆರಿಕದ ಪಾಪ್ ತಾರೆ ರಿಹಾನ್ನಾ ಟ್ವೀಟ್ ಮಾಡಿದ್ದರು. ರಿಹಾನ್ನಾ ಟ್ವೀಟ್ ಬೆನ್ನಲ್ಲೇ ಸ್ವೀಡನ್ ನ ಪರಿಸರ ಹೋರಾಟಗಾರ್ತಿ ಗ್ರೇಟಾ ಥುನ್ಬರ್ಗ್, ಮಾಜಿ ನೀಲಿಚಿತ್ರ ತಾರೆ ಮಿಯಾ ಖಲೀಫಾ ಕೂಡಾ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.
ವಿದೇಶಿ ಸೆಲೆಬ್ರಿಟಿಗಳ ಟ್ವೀಟ್ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿರುವಾಗಲೇ ಪಂಜಾಬಿ ಗಾಯಕ, ನಟ ದಿಲ್ಜಿತ್ ದೊಸಾಂಜ್ ರಿಹಾನ್ನಾ ಅವರಿಗೆ ‘ರಿರಿ’ ಹಾಡನ್ನು ಅರ್ಪಿಸಿರುವುದಾಗಿ ಟ್ವೀಟಿಸಿದ್ದರು. ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ಕಂಗನಾ, ದಿಲ್ಜಿತ್ರನ್ನು ಖಾಲಿಸ್ತಾನಿ ಎಂದು ಕರೆದಿದ್ದರು.
ರೋಹಿತ್ ಟ್ವೀಟ್ಗೆ ಕಂಗನಾ ಪ್ರತಿಕ್ರಿಯೆ ಡಿಲೀಟ್ ರಿಹಾನ್ನಾ ಟ್ವೀಟ್ ಬೆನ್ನಲ್ಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆಯೊಂದನ್ನು ಹೊರಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸುವ ಹ್ಯಾಷ್ಟ್ಯಾಗ್, ವಿಷಯಗಳ ನಿಜ ಸಂಗತಿಯನ್ನು ಅರಿತು ಪ್ರತಿಕ್ರಿಯೆ ನೀಡಿ ಎಂದು ಹೇಳಿತ್ತು. ಈ ಪ್ರಕಟಣೆಯೊಂದಿಗೆ #IndiaTogether #IndiaAgainstPropaganda ಎಂಬ ಹ್ಯಾಷ್ಟ್ಯಾಗ್ ಬಳಸಿತ್ತು. ಇದಕ್ಕೆ ಬೆಂಬಲ ಸೂಚಿಸಿ ಹಲವಾರು ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದರು. ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ, ಅನಿಲ್ ಕುಂಬ್ಳೆ, ರೋಹಿತ್ ಶರ್ಮಾ ಮೊದಲಾದವರು ದೇಶದ ಒಗ್ಗಟಿನ ಬಗ್ಗೆ ಟ್ವೀಟ್ ಮಾಡಿದ್ದರು. ಈ ಪೈಕಿ ರೋಹಿತ್ ಶರ್ಮಾ ಮಾಡಿದ ಟ್ವೀಟ್ಗೆ ಕಂಗನಾ ಮಾಡಿದ ಪ್ರತಿಕ್ರಿಯೆಯನ್ನು ಟ್ವಿಟರ್ ಸಂಸ್ಥೆ ಡಿಲೀಟ್ ಮಾಡಿದೆ.
ಭಾರತ ಸದಾ ಶಕ್ತವಾಗಿದ್ದು, ಸಮಸ್ಯೆಯನ್ನು ಪರಿಹರಿಸಲು ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲುವುದು ಈ ಹೊತ್ತಿನ ತುರ್ತು. ನಮ್ಮ ರೈತರು ದೇಶದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಒಗ್ಗಟ್ಟಾಗಿ ನಿಂತು ಸಮಸ್ಯೆಯನ್ನು ಪರಿಹರಿಸಲು ಎಲ್ಲರೂ ಅವರವರ ಪಾತ್ರ ನಿಭಾಯಿಸಬೇಕಾಗುತ್ತದೆ ಎಂದು ಹಿಟ್ಮ್ಯಾನ್ ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದರು.
ರೋಹಿತ್ ಶರ್ಮಾ ಟ್ವೀಟ್ ಹೀಗಿತ್ತು
India has always been stronger when we all stand together and finding a solution is the need of the hour. Our farmers play an important role in our nation’s well being and I am sure everyone will play their roles to find a solution TOGETHER. #IndiaTogether ??
— Rohit Sharma (@ImRo45) February 3, 2021
ಇದಕ್ಕೆ ಪ್ರತಿಕ್ರಿಯಿಸಿದ ಕಂಗನಾ, ಈ ಎಲ್ಲ ಕ್ರಿಕೆಟಿಗರು ‘ದೋಭಿ ಕಾ ಕುತ್ತಾ ನಾ ಘರ್ ಕಾ ನಾ ಘಾಟ್ ಕಾ’ ಎಂಬಂತೆ ಯಾಕೆ ವರ್ತಿಸುತ್ತಿದ್ದಾರೆ? ಕೃಷಿ ಕಾನೂನು ಕ್ರಾಂತಿಕಾರಿ ಮತ್ತು ರೈತರಿಗೆ ಸಹಕಾರಿ ಆಗಿರುವಾಗ ರೈತರು ಪ್ರತಿಭಟನೆ ನಡೆಸುತ್ತಿರುವುದೇಕೆ. ಈ ರೀತಿ ಗಲಭೆ ಮಾಡುವವರು ಭಯೋತ್ಪಾದಕರು.. ಅದನ್ನು ಹೇಳಲು ಭಯವಾಗುತ್ತಿದೆಯೇ? ಎಂದಿದ್ದರು. ದೋಭಿ ಕಾ ಕುತ್ತಾ (ಅಗಸನ ನಾಯಿ) ಎಂಬ ಪದ ಬಳಸಿದ್ದಕ್ಕಾಗಿ ಕಂಗನಾಳ ಟ್ವೀಟ್ನ್ನು ಟ್ವಿಟರ್ ಡಿಲೀಟ್ ಮಾಡಿದೆ.
ಅದೇ ವೇಳೆ ಬಾಲಿವುಡ್ ನಟಿ ತಾಪ್ಸಿ ಪನ್ನು ಬಗ್ಗೆ ಕಂಗನಾ ಮಾಡಿದ್ದ ಟ್ವೀಟ್ ಅನ್ನೂ ಕೂಡಾ ಟ್ವಿಟರ್ ಡಿಲೀಟ್ ಮಾಡಿದೆ. ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ನಾವು ಕ್ರಮಕೈಗೊಳ್ಳುತ್ತಿದ್ದೇವೆ ಎಂದು ಟ್ವಿಟರ್ ಸಂಸ್ಥೆ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.
India Together ಹ್ಯಾಷ್ಟ್ಯಾಗ್ನೊಂದಿಗೆ ದೇಶ ಮೊದಲು ಎಂದ ಸಚಿನ್, ಕರಣ್, ಅಕ್ಷಯ್