ಮುಂಬೈ: ಸಮಾಜ ಸೇವಕ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಬಾಬಾ ಆಮ್ಟೆ (ಮುರಳಿಧರ್ ದೇವಿದಾಸ್ ಆಮ್ಟ್) ಮೊಮ್ಮಗಳು, ಖ್ಯಾತ ಸಾಮಾಜಿಕ ಕಾರ್ಯಕರ್ತೆ, ವೈದ್ಯೆ ಶೀತಲ್ ಆಮ್ಟೆ ಕರಾಜಿಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಂದ್ರಾಪುರ ಜಿಲ್ಲೆಯ ಆನಂದವನ್ದಲ್ಲಿ ಇರುವ ತಮ್ಮ ನಿವಾಸದಲ್ಲಿ ಇಂದು ವಿಷಪೂರಿತ ಇಂಜಕ್ಷನ್ ಚುಚ್ಚಿಕೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಷವನ್ನು ಇಂಜೆಕ್ಟ್ ಮಾಡಿಕೊಂಡು ಅಸ್ವಸ್ಥರಾಗಿದ್ದ ಶೀತಲ್ ಆಮ್ಟೆ ಅವರನ್ನು ವರೋರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇವರೂ ಕೂಡ ತಾತ ಬಾಬಾ ಆಮ್ಟೆಯವರಂತೆ ಸಮಾಜ ಸೇವೆಯಲ್ಲಿ ಸಕ್ರಿಯರಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಮಾಡಿದ್ದರು. ಕುಷ್ಠರೋಗಿಗಳ ಆರೈಕೆಗಾಗಿ ಆನಂದವನದಲ್ಲಿ ಸ್ಥಾಪಿಸಲಾಗಿರುವ ಮಹಾರೋಗಿ ಸೇವಾ ಸಮಿತಿಯ ಸಿಇಒ ಆಗಿದ್ದರು.
ನಾಗಪುರದ ಸರ್ಕಾರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದ ಶೀತಲ್ ಆಮ್ಟೆ, ವೈದ್ಯಕೀಯ ಕೋರ್ಸ್ ಮುಗಿದ ನಂತರ ಆನಂದವನಕ್ಕೆ ಆಗಮಿಸಿದ್ದರು. ಬಾಬಾ ಆಮ್ಟೆ ಸ್ಥಾಪಿಸಿದ ಮಹಾರೋಗಿ ಸೇವಾ ಸಮಿತಿಯ ಜವಾಬ್ದಾರಿ ವಹಿಸಿಕೊಂಡರು. ಸಮಾಜ ಸೇವೆಯನ್ನೇ ಮುಖ್ಯವನ್ನಾಗಿಸಿಕೊಂಡು ಸಾಗಿದರು. 2016ರಲ್ಲಿ ವಿಶ್ವ ಆರ್ಥಿಕ ವೇದಿಕೆ ಡಾ. ಶೀತಲ್ರನ್ನು ‘ಯಂಗ್ ಗ್ಲೋಬಲ್ ಲೀಡರ್’ ಆಗಿ ಆಯ್ಕೆ ಮಾಡಿತ್ತು.
‘ವಾರ್ ಆ್ಯಂಡ್ ಪೀಸ್’
ಇಂದು ಮುಂಜಾನೆ 5.45ರ ಸಮಯದಲ್ಲಿ ಶೀತಲ್ ಆಮ್ಟೆ ಮಾಡಿರುವ ಟ್ವೀಟ್ ಇದೀಗ ಚರ್ಚೆಗೆ ಕಾರಣವಾಗಿದೆ. ಕ್ಯಾನ್ವಾಸ್ ಪೇಂಟಿಂಗ್ ಫೋಟೋವನ್ನು ಪೋಸ್ಟ್ ಮಾಡಿ, ವಾರ್ ಆ್ಯಂಡ್ ಪೀಸ್ (ಯುದ್ಧ ಮತ್ತು ಶಾಂತಿ) ಎಂದು ಕ್ಯಾಪ್ಷನ್ ಬರೆದಿದ್ದರು. ಅದಾದ ಕೆಲವೇ ಗಂಟೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
'War and Peace'#acrylic on canvas.
30 inches x 30 inches. pic.twitter.com/yxfFhuv89z— Dr. Sheetal Amte-Karajgi (@AmteSheetal) November 30, 2020
ಅಕ್ರಮ ಬಯಲಿಗೆ
ಶೀತಲ್ ಆಮ್ಟೆ ಕಳೆದ ವಾರ ತಮ್ಮ ಫೇಸ್ಬುಕ್ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿ, ಅದರಲ್ಲಿ ಮಹಾರೋಗಿ ಸೇವಾ ಸಮಿತಿಯಲ್ಲಿ ಕೆಲವು ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿದ್ದರು. ಆ ವಿಡಿಯೋವನ್ನು ಎರಡೇ ತಾಸಿನಲ್ಲಿ ಅಲ್ಲಿಂದ ತೆಗೆದುಹಾಕಿದ್ದರು.
ಇದನ್ನೂ ಓದಿ: ‘ಚಿನ್ನ’ ತಂದ ನೀವಾರ್ ಚಂಡಮಾರುತ; ಸಮುದ್ರ ತೀರಕ್ಕೆ ಮೀನುಗಾರರು ದೌಡು
Published On - 4:58 pm, Mon, 30 November 20