
ನವದೆಹಲಿ, ಜನವರಿ 14: ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ಮಹಿಳೆಯ ಕೊಲೆಯಾಗಿತ್ತು. ಈ ಕೊಲೆ (Murder Case) ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಏಕೆಂದರೆ ಎಷ್ಟೇ ತಲೆಕೆಡಿಸಿಕೊಂಡು ಹುಡುಕಾಟ ನಡೆಸಿದ್ದರೂ ಅವರಿಗೆ ಕೊಲೆಗಾರನ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಕೊನೆಗೂ ಈ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಆದರೆ, ಆ ಮಹಿಳೆಯ ಕೊಲೆಗಾರ ಬೇರಾರೂ ಅಲ್ಲ, ಆಕೆಯ ಮಗನೇ ಎಂಬುದು ಅಚ್ಚರಿಯ ವಿಷಯ. ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಆ ಯುವಕ ಇದೀಗ ಕಂಬಿ ಎಣಿಸುತ್ತಿದ್ದಾನೆ.
ಕೌಟುಂಬಿಕ ಉದ್ವಿಗ್ನತೆಯಿಂದಾಗಿ ಆತ ಸ್ನೇಹಿತನ ಸಹಾಯದಿಂದ ಆಕೆಯನ್ನು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಹರಿಯಾಣದ ಶ್ಯಾಮಪುರ ಗ್ರಾಮದ ಸರಪಂಚ್ ಅವರ ಪತ್ನಿ ಬಲ್ಜಿಂದರ್ ಕೌರ್ ಡಿಸೆಂಬರ್ 24ರ ರಾತ್ರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಕೇಸನ್ನು ತನಿಖೆಗಾಗಿ ಅಪರಾಧ ಶಾಖೆಗೆ ಹಸ್ತಾಂತರಿಸಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಇದನ್ನೂ ಓದಿ: Crime News: ತಾಯಿ, ಹೆಂಡತಿಯನ್ನು ಕೊಂದು ಮಾಂಸ ಬಗೆದು ತಿಂದ ಕಿರಾತಕ!
ಆಗ ಆಧುನಿಕ ತಂತ್ರಜ್ಞಾನದ ಮೊರೆಹೋದ ಪೊಲೀಸರು ತಾಂತ್ರಿಕ ಪುರಾವೆಗಳು, ಮೊಬೈಲ್ ಸ್ಥಳದ ಟ್ರ್ಯಾಕಿಂಗ್ ಮತ್ತು ಫೋನ್ ಕಾಲ್ ದಾಖಲೆಗಳ ಮೂಲಕ ಪ್ರಕರಣವನ್ನು ಬಯಲು ಮಾಡಿದ್ದಾರೆ. ಮೃತ ಮಹಿಳೆಯ ಮಗ ಗೋಮಿತ್ ಡಿಸೆಂಬರ್ 18ರಂದೇ ಇಂಗ್ಲೆಂಡ್‌ನಿಂದ ಭಾರತಕ್ಕೆ ರಹಸ್ಯವಾಗಿ ಮರಳಿದ್ದ ಎಂಬುದು ತನಿಖೆಯ ವೇಳೆ ಬಯಲಾಗಿತ್ತು. ಆತ ತನ್ನ ಕುಟುಂಬಕ್ಕೆ ತಿಳಿಸದೆ ತನ್ನ ಆಪ್ತ ಸ್ನೇಹಿತ ಪಂಕಜ್ ಸಹಾಯ ಪಡೆದು ಅದೇ ಊರಿನಲ್ಲಿ ಬಚ್ಚಿಟ್ಟುಕೊಂಡಿದ್ದ.
ಗೋಮಿತ್ ತನ್ನ ತಾಯಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ. ಬೇರೆ ಜಾತಿಯ ಮಹಿಳೆಯೊಂದಿಗಿನ ಅವನ ಸಂಬಂಧವನ್ನು ಆಕೆ ವಿರೋಧಿಸಿದ ನಂತರ ಉದ್ವಿಗ್ನತೆ ಹೆಚ್ಚಾಗಿತ್ತು. ಇದು ಅವನನ್ನು ತೀವ್ರವಾಗಿ ಕೆರಳಿಸಿತ್ತು. ಈ ಪರಿಸ್ಥಿತಿಯನ್ನು ಪರಿಹರಿಸಲು ಸಾಧ್ಯವಾಗದ ಕುಟುಂಬದ ಸದಸ್ಯರು ಗೋಮಿತ್‌ನನ್ನು ಅಧ್ಯಯನ ವೀಸಾದಲ್ಲಿ ಇಂಗ್ಲೆಂಡ್‌ಗೆ ಕಳುಹಿಸಿದ್ದರು. ವಿದೇಶದಲ್ಲಿ ಅವನು ತನ್ನ ಅಧ್ಯಯನವನ್ನು ಮುಂದುವರಿಸಿ, ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಅವನ ತಾಯಿಯ ಬಗ್ಗೆ ಅಸಮಾಧಾನ ಕಡಿಮೆಯಾಗಿರಲಿಲ್ಲ. ತನ್ನ ಪ್ರೀತಿಗೆ ಅಡ್ಡ ಬರುತ್ತಿರುವ ಅಮ್ಮನನ್ನೇ ಮುಗಿಸಬೇಕೆಂದು ಪ್ಲಾನ್ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಕನಸಲ್ಲಿ ಕಾಡಿದ 3 ಮಹಿಳೆಯರು; ಭಯದಿಂದ ಪ್ರಾಣವನ್ನೇ ಕಳೆದುಕೊಂಡ ಯುವಕ
ಡಿಸೆಂಬರ್ 24ರಂದು ಗೋಮಿತ್ ತನ್ನ ಮನೆಗೆ ಹೋಗಿ ದನದ ಕೊಟ್ಟಿಗೆಯಲ್ಲಿ ಅಡಗಿಕೊಂಡನು. ಆ ರಾತ್ರಿ ನಂತರ, ಅವನು ತನ್ನ ತಾಯಿಯ ಮೇಲೆ ದಾಳಿ ಮಾಡಿ, ಕತ್ತು ಹಿಸುಕಿ ಕೊಂದನು. ಕೊಲೆ ಆಕಸ್ಮಿಕವೆಂದು ತೋರಿಸಲು ಆತ ಆಕೆಯ ಶವವನ್ನು ನೀರಿನ ಟ್ಯಾಂಕ್‌ನಲ್ಲಿ ಎಸೆದಿದ್ದ ಎಂದು ಆರೋಪಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ