ಗೋವಾ: ಕಳೆದ ತಿಂಗಳು ಗೋವಾದಲ್ಲಿ ಹರಿಯಾಣದ ರಾಜಕಾರಣಿ ಸೋನಾಲಿ ಫೋಗಟ್ ಅವರ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ತಂಡವು ಇಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಸಂಗ್ರಹಿಸಲು ಬಿಜೆಪಿ ನಾಯಕಿ ಮತ್ತು ಆಕೆ ಜೊತೆಗೆ ತಂಗಿದ್ದ ಸ್ನೇಹಿತರ ಹೋಟೆಲ್‌ನ ಕೊಠಡಿಗಳನ್ನು ಶೋಧಿಸಿದೆ. ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಮುನ್ನ ತನಿಖೆ ನಡೆಸುತ್ತಿದ್ದ ಗೋವಾ ಪೊಲೀಸರು, ತನಿಖೆಯ ಭಾಗವಾಗಿ ಹೋಟೆಲ್, ಗ್ರ್ಯಾಂಡ್ ಲಿಯೋನಿಯಲ್ಲಿನ ಕೊಠಡಿಗಳನ್ನು ಸೀಲ್ ಮಾಡಿದ್ದರು.
ಸಿಬಿಐ ತಂಡವು ದಾಖಲೆಗಳನ್ನು ಸಂಗ್ರಹಿಸುತ್ತದೆ ಮತ್ತು ಮಾಜಿ ಟಿವಿ ಆಂಕರ್ ಅವರನ್ನು ಆಸ್ಪತ್ರೆಗೆ ಕರೆತಂದ ನಂತರ ಪರೀಕ್ಷಿಸಿದ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ವೈದ್ಯರೊಂದಿಗೆ ಸಂವಾದ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರಿಯಾಣದಲ್ಲಿರುವ ಸೋನಾಲಿ ಫೋಗಟ್ ಸಹೋದರರ ಹೇಳಿಕೆಯನ್ನು ಕೇಂದ್ರ ತನಿಖಾ ಸಂಸ್ಥೆ ಈಗಾಗಲೇ ತೆಗೆದುಕೊಂಡಿದೆ. ಸಿಬಿಐ ತಂಡವು ನಮ್ಮ ಮನೆಗೆ ಬಂದು ನಮ್ಮ ಕುಟುಂಬದ ಹೇಳಿಕೆಯನ್ನು ದಾಖಲಿಸಿದೆ. ನಂತರ ಅವರು ನಮ್ಮ ಸಹೋದರನ ಮನೆಗೆ ತೆರಳಿ ಹೇಳಿಕೆ ದಾಖಲಿಸಿದ್ದಾರೆ ಎಂದು ಸೋನಾಲಿ ಫೋಗಟ್ ಅವರ ಸಹೋದರ ವತನ್ ಧಾಕಾ ಹೇಳಿದ್ದಾರೆ.
ಸೋನಾಲಿ ಫೋಗಟ್ ಸಾವಿನ ಹಿಂದೆ ಪಿತೂರಿ ಇದೆ ಎಂದು ಆಕೆಯ ಕುಟುಂಬ ಈ ಹಿಂದೆ ಹೇಳಿಕೊಂಡಿತ್ತು ಮತ್ತು ಸಿಬಿಐ ತನಿಖೆಯಿಂದ ಮಾತ್ರ ಸತ್ಯವನ್ನು ಹೊರ ತರಬೇಕಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಪತ್ರದಲ್ಲಿ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಪ್ರಕರಣವನ್ನು ಸಿಬಿಐಗೆ ವಹಿಸಿದೆ.
ಹರಿಯಾಣದ ಹಿಸಾರ್‌ನ ಬಿಜೆಪಿ ನಾಯಕಿ ಸೋನಾಲಿ ಫೋಗಟ್ (43) ಕಳೆದ ತಿಂಗಳು ಗೋವಾದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಇದನ್ನು ಕೊಲೆ ಎಂದು ಹೇಳಲಾಗಿದೆ. ಇಲ್ಲಿಯವರೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಜೊತೆಗಿದ್ದ ಸುಧೀರ್ ಸಾಂಗ್ವಾನ್ ಮತ್ತು ಸುಖ್ವಿಂದರ್ ಸಿಂಗ್, ಇತರ ಮೂವರನ್ನು ಬಂಧಿಸಲಾಗಿದೆ.
Published On - 2:28 pm, Sat, 17 September 22