AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಗದ ಅರಿಶಿನಕ್ಕೆ ಗಾಯನದ ಕುಂಕುಮ ಬೆರೆಸಿ, ಕನ್ನಡಮ್ಮನ ಹಣೆಗೆ ಹಚ್ಚಿದ್ರು ಬಾಲು..

ಯಾವುದೇ ವ್ಯಕ್ತಿಯಾಗ್ಲಿ.. ಅದೆಂಥಾ ಶಕ್ತಿಯೇ ಆಗಿರಲಿ. ಹೊರಗಿಂದ ಬಂದವ್ರನ್ನ, ನಮ್ಮವ್ರು ಅಂತ ಒಪ್ಪೋದು ಅಷ್ಟು ಸುಲಭವಲ್ಲ. ನಮ್ಮೊಳಗೊಬ್ರು ಅಂತ ಅಪ್ಪಿಕೊಳ್ಳುದಂತೂ ಮಾಮೂಲಿ ಮಾತಲ್ಲ. ಆದ್ರೆ, ಬಾಲು ವಿಷ್ಯದಲ್ಲಿ ಹಾಗೇ ಆಗ್ಲೇ ಇಲ್ಲ. ಎಸ್​​ಪಿಬಿ ಕೊರಳಿನಲ್ಲೇ ಕನ್ನಡಾಂಬೆ ಕೂತಿದ್ಳು. ಬಾಲು ಹಾಡುತ್ತಿದ್ರು ಕನ್ನಡಕ್ಕೆ ಜೀವ ಕಳೆ ಬರುತ್ತಿತ್ತು. ಸ್ವರ ಕನ್ನಡ.. ಉಸಿರು ಕನ್ನಡ.. ಶ್ರುತಿ ಕನ್ನಡ.. ಕೃತಿ ಕನ್ನಡ.. ರಾಗದ ಅರಿಶಿನಕ್ಕೆ ಗಾಯನದ ಕುಂಕುಮ ಬೆರೆಸಿ, ಕನ್ನಡಮ್ಮನ ಹಣೆಗೆ ಹಚ್ಚಿದ್ರು. ಕಣ ಕಣದಲ್ಲೂ ಕನ್ನಡವನ್ನ ಹೊತ್ತು, ತಾಯಿ ಭುವನೇಶ್ವರಿಗೆ […]

ರಾಗದ ಅರಿಶಿನಕ್ಕೆ ಗಾಯನದ ಕುಂಕುಮ ಬೆರೆಸಿ, ಕನ್ನಡಮ್ಮನ ಹಣೆಗೆ ಹಚ್ಚಿದ್ರು ಬಾಲು..
ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ
ಆಯೇಷಾ ಬಾನು
|

Updated on: Sep 26, 2020 | 7:22 AM

Share

ಯಾವುದೇ ವ್ಯಕ್ತಿಯಾಗ್ಲಿ.. ಅದೆಂಥಾ ಶಕ್ತಿಯೇ ಆಗಿರಲಿ. ಹೊರಗಿಂದ ಬಂದವ್ರನ್ನ, ನಮ್ಮವ್ರು ಅಂತ ಒಪ್ಪೋದು ಅಷ್ಟು ಸುಲಭವಲ್ಲ. ನಮ್ಮೊಳಗೊಬ್ರು ಅಂತ ಅಪ್ಪಿಕೊಳ್ಳುದಂತೂ ಮಾಮೂಲಿ ಮಾತಲ್ಲ. ಆದ್ರೆ, ಬಾಲು ವಿಷ್ಯದಲ್ಲಿ ಹಾಗೇ ಆಗ್ಲೇ ಇಲ್ಲ. ಎಸ್​​ಪಿಬಿ ಕೊರಳಿನಲ್ಲೇ ಕನ್ನಡಾಂಬೆ ಕೂತಿದ್ಳು. ಬಾಲು ಹಾಡುತ್ತಿದ್ರು ಕನ್ನಡಕ್ಕೆ ಜೀವ ಕಳೆ ಬರುತ್ತಿತ್ತು.

ಸ್ವರ ಕನ್ನಡ.. ಉಸಿರು ಕನ್ನಡ.. ಶ್ರುತಿ ಕನ್ನಡ.. ಕೃತಿ ಕನ್ನಡ.. ರಾಗದ ಅರಿಶಿನಕ್ಕೆ ಗಾಯನದ ಕುಂಕುಮ ಬೆರೆಸಿ, ಕನ್ನಡಮ್ಮನ ಹಣೆಗೆ ಹಚ್ಚಿದ್ರು. ಕಣ ಕಣದಲ್ಲೂ ಕನ್ನಡವನ್ನ ಹೊತ್ತು, ತಾಯಿ ಭುವನೇಶ್ವರಿಗೆ ಕಳಶವಿಟ್ರು. ನೆರೆ ರಾಜ್ಯದಿಂದ ಬಂದರೂ, ನಮ್ಮವರಾಗೇ ಇದ್ದವ್ರು ಬಾಲು. ಗಾನ ಗಾರುಡಿಗನೇ ಹೇಳಿಕೊಡಂತೆ, ಇಲ್ಲಿ ಸಿಕ್ಕಷ್ಟು ಪ್ರೀತಿ, ಅಭಿಮಾನ ಎಲ್ಲಿಯೂ ಸಿಕ್ಕಿಲ್ಲ.

ನಿಜ.. ಸ್ವರ ಸಾಮ್ರಾಟ ಗಳಿಸಿದ ಸಂಪತ್ತೇ ಅಂತದ್ದು. ಬಾಲು ದನಿಗೆ ರಾಜ್ಯದಲ್ಲಿ ಸಿಕ್ಕ ಮನ್ನಣೆಯೇ ಅಂತದ್ದು. ಯಾಕಂದ್ರೆ, ಆಂಧ್ರದಿಂದ ಬಂದ ಎಸ್​​​​ಪಿಬಿ ಕಂಠದಲ್ಲಿ, ಕನ್ನಡಕ್ಕೆ ಕಿಂಚಿತ್ತೂ ಧಕ್ಕೆ ಬರಲಿಲ್ಲ. ಗಾನಗಾರುಡಿಗನ ದನಿಯಲ್ಲಿ ಭಾಷೆಗೆ ಒಂಚೂರು ಭಿನ್ನ ಉಂಟಾಗ್ಲಿಲ್ಲ. ಎಸ್​​ಪಿಬಿ ಹಾಡುತ್ತಿದ್ರೆ ಜೇನಿನಂತಹ ಭಾಷೆ, ಹಾಲಿನೊಳಗೆ ಬೆರತಂತೆ ಆಗ್ತಿತ್ತು. ಪದಪುಂಜಗಳಿಗೆ ಬಾಲೂ ದನಿಯಿಂದ, ಮತ್ತೊಂದು ಜೀವ ಸಿಗುತ್ತಿತ್ತು. ಹೀಗಾಗೇ, ಎಸ್​​ಪಿಬಿ ರಾಜ್ಯದ ಮಾನಸ ಪುತ್ರರಾದ್ರು. ಕನ್ನಡಿಗರು ಕೊಟ್ಟ ಪ್ರೀತಿಯನ್ನ ಕ್ಷಣ ಕ್ಷಣವೂ ನೆನೆಯುತ್ತಿದ್ದ ಬಾಲು, ಮುಂದಿನ ಜನ್ಮ ಇದ್ರೆ ನಾನು ಕನ್ನಡಿಗನಾಗೇ ಹುಟ್ಟಬೇಕು ಅಂತಿಂದ್ರು.

ನಮಗೂ ಅದೇ ಬಯಕೆ. ಬಾಲೂ ಮತ್ತೆ ಹುಟ್ಟಬೇಕು. ಕರುನಾಡಲ್ಲೇ, ಕನ್ನಡ ತಾಯಿ ಮಡಿಲಿನಲ್ಲೇ ಜನ್ಮ ಎತ್ತಬೇಕು. ಯಾಕಂದ್ರೆ, ಸ್ವರ ಸಾಮ್ರಾಟನ ರೀತಿ ಕನ್ನಡಾಂಬೆಯನ್ನು ಸ್ತುತಿಸಿದ ಮತ್ತೊಬ್ಬ ಗಾಯಕನಿಲ್ಲ. ನಾಡು ನುಡಿಯನ್ನ ಬಾಲೂ ಹೊಗಳಿದ್ದಕ್ಕೆ ಲೆಕ್ಕವೇ ಸಿಗಲ್ಲ. ಕರುನಾಡ ತಾಯಿಯನ್ನ ಸದಾ ಚಿನ್ಮಯಿ ಎಂದ ಬಾಲೂ, ಇದೇ ನಾಡು, ಇದೇ ಭಾಷೆ ಎಂದೆಂದೂ ನನ್ನದಾಗಿರಲಿ ಅಂದ್ರು.

ಪದ್ಮಶ್ರೀ ಪುರಸ್ಕೃತ ಎಸ್​​ಪಿಬಿಗೂ ಅಷ್ಟೇ.. ಕನ್ನಡದ ಮೇಲೆ ವಿಶೇಷ ಪ್ರೀತಿ. ಕನ್ನಡಾಂಬೆಯ ಗಾನ ಗಂಗೆಯ ಮೇಲೆ ವಿಶೇಷ ಭಕ್ತಿ. ಅದಕ್ಕಾಗೆ, ಕನ್ನಡವನ್ನ ಅವ್ವ ಕಣೋ ಅಂದ್ರು.. ನಮ್​ ಜೀವ ಕಣೋ ಅಂದ್ರು. ಕನ್ನಡ ಹೊನ್ನುಡಿಯನ್ನ ಪೂಜಿಸಿ, ಆರಾಧಿಸೋಣ ಅಂತ ಎಲ್ಲರನ್ನೂ ಕರೆದ್ರು. ಸಿರಿಗನ್ನಡವೇ ರೋಮಾಂಚನ ಎಂದ ಎಸ್​​​ಪಿಬಿ, ಹುಬ್ಬಳ್ಳಿ ಆದ್ರೇನು ಬೆಳಗಾವಿ ಆದ್ರೇನು ಎಲ್ಲವೂ ಒಂದೇ ಅಂತ ಸಾರಿದ್ರು.

ಕರ್ನಾಟಕದಲ್ಲಿ ಎಸ್​​ಬಿಪಿ ಹಾಡಿದ ಹಾಡುಗಳಿಗೆ ಲೆಕ್ಕವಿಲ್ಲ. ಕನ್ನಡಾಂಬೆಯನ್ನ ಕೊರಳಿನಲ್ಲಿ ಇರಿಸಿಕೊಂಡಂತೆ ಬಾಲು ಹಾಡುತ್ತಿದ್ರು. ಕನ್ನಡಿಗರು ಕೂಡ ಅಷ್ಟೇ.. ಬಾಲುವನ್ನ ಯಾವತ್ತೂ ಬೇರೆಯವರಂತೆ ನೋಡೇ ಇಲ್ಲ. ಚಂದನವನವಂತೂ ಎಸ್​​ಪಿಬಿಯನ್ನ ದತ್ತು ಪುತ್ರನಂತೆ ಸ್ವೀಕರಿಸಿತ್ತು. ಇದಕ್ಕಾಗೇ ಬಾಲು, ಇಲ್ಲಿ ಸಿಕ್ಕಷ್ಟು ಪ್ರೀತಿ ಇನ್ನೆಲ್ಲೂ ಸಿಗ್ತಿಲ್ಲ ಅಂತಿಂದ್ರು. ಬಾಲು ಅವರು ಸ್ಟೇಜ್ ಪ್ರೋಗ್ರಾಮ್‌ನಲ್ಲಿ ಹಾಡಿದ ಜೊತೆಯಲಿ ಜೊತೆ ಜೊತೆಯಲಿ ಹಾಡು ನೆರೆದಿದ್ದವರಿಗೆ ಕಿಕ್ಕೇರಿಸಿತ್ತು. ಅದರಲ್ಲೂ ಅವರ ಆ ಜೋಷ್ ನೋಡುತ್ತಿದ್ದರೇ ಎಂತಹವರಿಗೂ ರೋಮಾಂಚನ ಆಗುತ್ತೆ. ಲಾಕ್‌ಡೌನ್ ಟೈಂನಲ್ಲಿ ಸುಂದರಿ ಸುಂದರಿ ಹಾಡುನ್ನ ಹೇಳಿದ್ದನ್ನ ನೀವು ಒಮ್ಮೆ ಕೇಳಿ.. ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳ್ತಾನೆ ಇರಬೇಕು ಅನ್ಸುತ್ತೆ. ಅದರಲ್ಲೂ ಅವರು ಹಾಡು ಹೇಳ್ತಾ, ಆ್ಯಕ್ಟಿಂಗ್ ಮಾಡೋದನ್ನ ನೋಡಿದ್ರೆ ನಾವೂ ಹೆಜ್ಜೆ ಹಾಕ್ಬೇಕು ಅನ್ಸುತ್ತೆ.

ಒಟ್ನಲ್ಲಿ, ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಚಿರಸ್ಥಾಯಿಯಾಗಿ ಉಳಿಯೋ ಗಾಯಕ ಎಸ್​​​ಪಿಬಿ. ಕನ್ನಡಿಗರು ಕೂಡ ಆ ಮಟ್ಟಿಗೆ ಪ್ರೀತಿಯನ್ನ ಬಾಲುವಿಗೆ ಧಾರೆ ಎರೆದಿದ್ದಾರೆ. ಎಸ್​​​​​ಪಿಬಿ ಜತೆಗಿನ ನಂಟು, ಅವರ ಒಡನಾಟ ನೋಡಿದ್ರೆ ಅನ್ನಿಸೋದಿಷ್ಟೇ. ಇಲ್ಲಿನ ಜನರೊಂದಿಗಿನ ಬಾಂಧವ್ಯ ಮಾಮೂಲಿಯದ್ದಲ್ಲ. ಇದು ಪೂರ್ವ ಜನ್ಮದ ಬಂಧುತ್ವದ ಬೆಸುಗೆ.