New Delhi: ನಮ್ಮ ರಾಷ್ಟ್ರದ ರಾಜಧಾನಿಯಲ್ಲಿ ಹೀಗೂ ನಡೆಯುತ್ತದೆ. ಒಬ್ಬ ಐಎಎಸ್ ಆಧಿಕಾರಿ ತನ್ನ ನಾಯಿಯೊಂದಿಗೆ ವಿಹರಿಸಲು ಅನುವು ಮಾಡಿಕೊಡಲು ದೆಹಲಿಯ ಪ್ರಮುಖ ಒಂದು ಸ್ಟೇಡಿಯಂ ಅನ್ನು (sportd complex) ಸಾಮಾನ್ಯ ಸಮಯಕ್ಕಿಂತ ಮೊದಲೇ ಅದರಲ್ಲಿ ಅಭ್ಯಾಸನಿರತ ಕ್ರೀಡಾಪಟುಗಳನ್ನು ಹೊರಕ್ಕೆ ಕಳಿಸಿ ಮುಚ್ಚಲಾಗುತ್ತಿದೆ. ಭಾರತದ ಪ್ರಮುಖ ದಿನಪತ್ರಿಕೆ ಇಂಡಿಯನ್ ಎಕ್ಸ್ಪ್ರೆಸ್ (Indian Express) ಈ ಕುರಿತು ವರದಿಯೊಂದನ್ನು ಪ್ರಕಟಿಸುತ್ತಿದ್ದಂತೆಯೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರು ರಾಜ್ಯ ಸರ್ಕಾರ ಸ್ವಾಮ್ಯದ ಎಲ್ಲ ಕ್ರೀಡಾಂಗಣಗಳನ್ನು ಕ್ರೀಡಾಪಟುಗಳಿಗಾಗಿ ರಾತ್ರಿ 10 ಗಂಟೆಯವರೆಗೆ ತೆರೆದಿಡಬೇಕೆಂದು ನಿರ್ದೇಶನ ನೀಡಿದ್ದಾರೆ.
ಗುರುವಾರದ ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ದೆಹಲಿ ಸರ್ಕಾರದ ಅಧೀನದಲ್ಲಿರುವ ತ್ಯಾಗರಾಜ ಸ್ಟೇಡಿಯಂ ಅನ್ನು ನಿಗದಿತ ಸಮಯವಾಗಿರುವ 7 ಗಂಟೆಗಿಂತ ಮೊದಲೇ ಮುಚ್ಚಲಾಗುತಿದೆ, ಇದರಿಂದಾಗಿ ತರಬೇತಿಯಲ್ಲಿ ತೊಡಗುವ ಕ್ರೀಡಾಪಟುಗಳು ತಮ್ಮ ಅಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿಬಿಡುವ ಪರಿಸ್ಥಿತಿ ಎದುರಾಗಿದೆ ಅಂದ ಪ್ರತಿದಿನ ದೂರುತ್ತಿದ್ದರು. ಸ್ಟೇಡಿಯಂ ಕ್ರೀಡಾಪಟುಗಳಿಗೆ ಮುಚ್ಚಿದ ಸುಮಾರು ಅರ್ಧ ಗಂಟೆಯ ಬಳಿಕ ದೆಹಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಕಂದಾಯ ಇಲಾಖೆ) ಸಂಜೀವ ಖಿರ್ವಾರ್ ಸ್ಟೇಡಿಯಂನಲ್ಲಿ ವಿಹರಿಸಲು ತಮ್ಮ ನಾಯಿಯೊಂದಿಗೆ ಬರುತ್ತಾರೆ ಎಂದು ಕ್ರೀಡಾಪಟುಗಳು ದೂರಿದ್ದಾರೆ.
‘ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ಸೌಲಭ್ಯ ಇರುವುದರಿಂದ ನಾವು ರಾತ್ರಿ 8.30 ರವರೆಗೆ ಅಭ್ಯಾಸ ಮಾಡುತ್ತಿದ್ದೆವು. ಆದರೆ ಈಗ ನಾಯಿಯೊಂದಿಗೆ ಬರುವ ಅಧಿಕಾರಿಯ ಸಲುವಾಗಿ 7 ಗಂಟೆಗೆಲ್ಲ ನಮ್ಮನ್ನು ಜಾಗ ಖಾಲಿ ಮಾಡಿಸಲಾಗುತ್ತಿದೆ. ಇದರಿಂದಾಗಿ ನಮ್ಮ ಟ್ರೇನಿಂಗ್ ಶೆಡ್ಯೂಲ್ ಮೊಟಕುಗೊಳ್ಳುತ್ತಿದೆ,’ ಎಂದು ಒಬ್ಬ ಕೋಚ್ ಪತ್ರಿಕೆಗೆ ತಿಳಿಸಿದ್ದಾರೆ.
ಪತ್ರಿಕೆಯ ವರದಿಗಾರ ಖಿರ್ವಾರ್ ಅವರನ್ನು ಸಂಪರ್ಕಿಸಿದಾಗ, ‘ಅದು ಶುದ್ಧ ಸುಳ್ಳು’ ಅಂತ ಹೇಳಿ, ತಾನು ನಾಯಿ ಜೊತೆ ಸ್ಟೇಡಿಯಂ ಒಳಗೆ ಅಗಾಗ್ಗೆ ವಾಕ್ ಮಾಡುವುದು ನಿಜವಾದರೂ ಅದರಿಂದ ಕ್ರೀಡಾಪಟುಗಳ ಟ್ರೇನಿಂಗ್ ಯಾವತ್ತೂ ತೊಂದರೆಯಾಗಿಲ್ಲ ಎಂದರು.
ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಪತ್ರಿಕೆಯ ವರದಿಯನ್ನು ಟ್ಯಾಗ್ ಮಾಡಿ, ‘ನಗರದ ಕೆಲ ಕ್ರೀಡಾಂಗಣಗಳನ್ನು ನಿಗದಿತ ಸಮಯಕ್ಕೆ ಮೊದಲೇ ಮುಚ್ಚುತ್ತಿರುವುದರಿಂದ ತಡರಾತ್ರಿವರೆಗೆ ಅಭ್ಯಾಸ ಮಾಡಬಯಸುವ ಕ್ರೀಡಾಪಟುಗಳಿಗೆ ಅನಾನುಕೂಲವಾಗುತ್ತಿದೆ ಎಂಬ ವರದಿಗಳು ನಮ್ಮ ಗಮನಕ್ಕೆ ಬಂದಿವೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಸರ್ಕಾರದ ಅಧೀನದಲ್ಲಿರುವ ಎಲ್ಲ ಕ್ರೀಡಾಂಗಣಗಳು ಕ್ರೀಡಾಪಟುಗಳಿಗಾಗಿ ರಾತ್ರಿ 10 ಗಂಟೆಯವರೆಗೆ ತೆರೆದಿಡಬೇಕೆಂದು ಸೂಚಿಸಿದ್ದಾರೆ,’ ಅಂತ ಟ್ವೀಟ್ ಮಾಡಿದ್ದಾರೆ.
News reports have brought to our notice that certain sports facilities are being closed early causing inconvenience to sportsmen who wish to play till late nite. CM @ArvindKejriwal has directed that all Delhi Govt sports facilities to stay open for sportsmen till 10pm pic.twitter.com/LG7ucovFbZ
— Manish Sisodia (@msisodia) May 26, 2022
ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರು ಪ್ರತಿಕ್ರಿಯಿಸಿ, ಇದು ಅಧಿಕಾರದ ದುರುಪಯೋಗವಲ್ಲದೆ ಮತ್ತೇನೂ ಅಲ್ಲ, ಸದರಿ ಅಧಿಕಾರಿ ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದಾರೆ.
ಎ ಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತಾಡಿರುವ ಕೌಶಲ್, ‘ಒಬ್ಬ ಐಎಎಸ್ ಅಧಿಕಾರಿ ತನ್ನ ನಾಯಿಯೊಂದಿಗೆ ನಿರಾತಂಕದಿಂದ ವಿಹರಿಸಲು ಅನುವು ಮಾಡಿಕೊಡಲು ದೆಹಲಿಯ ತ್ಯಾಗರಾಜ ಸ್ಟೇಡಿಯಂನಿಂದ ಕ್ರೀಡಾಪಟುಗಳು ಹೊರಗೆ ಹೋಗುವಂತೆ ಹೇಳುವುದು ಲಜ್ಜಾಸ್ಪದ ಸಂಗತಿಯಾಗಿದೆ. ಈ ಅಧಿಕಾರಿ ಕ್ಷಮಾಪಣೆ ಕೇಳಬೇಕು. ಇದು ಅಧಿಕಾರದ ದುರುಪಯೋಗವಾಗಿದೆ,’ ಎಂದು ಹೇಳಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.