‘ರಾಜಕೀಯದಲ್ಲಿ ಇರುವುದಕ್ಕಿಂತ ಮನೆಗೆ ಹೋಗಿ ಅಡುಗೆ ಮಾಡಿ’: ಸುಪ್ರಿಯಾ ಸುಳೆ ವಿರುದ್ಧ ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷನ ಹೇಳಿಕೆಗೆ ವ್ಯಾಪಕ ಖಂಡನೆ
ಬಿಜೆಪಿ ಪ್ರತಿಭಟನೆ ವೇಳೆ ಸುಳೆ ವಿರುದ್ಧ ಟೀಕಾ ಪ್ರಹಾರ ಮಾಡಿದ ಪಾಟೀಲ್, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಮಗಳು ಯಾರು? ಅವರ್ಯಾಕೆ ರಾಜಕೀಯದಲ್ಲಿದ್ದಾರೆ? ಮನೆಗೆ ಹೋಗಿ ಅಡುಗೆ ಮಾಡಲಿ.
ಎನ್‌ಸಿಪಿ (NCP) ಸಂಸದೆ ಸುಪ್ರಿಯಾ ಸುಳೆ (Supriya Sule) ಅವರಲ್ಲಿ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್(Chandrakant Patil) ನೀವು ರಾಜಕೀಯದಲ್ಲಿ ಇರುವುದಕ್ಕಿಂತ “ಮನೆಗೆ ಹೋಗಿ ಅಡುಗೆ ಮಾಡಿ” ಎಂದು ವಾಗ್ದಾಳಿ ನಡೆಸಿದ್ದು, ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಚುನಾವಣೆಯಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (OBC) ಮೀಸಲಾತಿ ನೀಡುವಂತೆ ಒತ್ತಾಯಿಸಿ ಮುಂಬೈನಲ್ಲಿ ರಾಜ್ಯ ಬಿಜೆಪಿ ಘಟಕದ ಪ್ರತಿಭಟನೆಯ ಸಂದರ್ಭದಲ್ಲಿ ಪಾಟೀಲ್ ಬುಧವಾರ ಈ ಹೇಳಿಕೆ ನೀಡಿದ್ದಾರೆ. ಇತ್ತೀಚೆಗಷ್ಟೇ ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿಗೆ ಮೀಸಲಾತಿಯನ್ನು ಸುಪ್ರೀಂಕೋರ್ಟ್ ಅನುಮತಿಸಿದ ನಂತರ, ಮಹಾರಾಷ್ಟ್ರದಲ್ಲಿ ಶಿವಸೇನಾ ಮತ್ತು ಕಾಂಗ್ರೆಸ್‌ನೊಂದಿಗೆ ಅಧಿಕಾರವನ್ನು ಹಂಚಿಕೊಂಡಿರುವ ಎನ್‌ಸಿಪಿ ಪಕ್ಷದ ಸುಳೆ ತಮ್ಮ ದೆಹಲಿ ಭೇಟಿಯ ಸಮಯದಲ್ಲಿ ನಾನು ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸಂಪರ್ಕಿಸಿರುವುದಾಗಿ ಹೇಳಿದ್ದರು. ಆದರೆ ಮೀಸಲಾತಿಗೆ ಒಪ್ಪಿಗೆ ಪಡೆಯಲು ಏನು ಮಾಡಿದೆ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ ಎಂದಿದ್ದರು. ಬಿಜೆಪಿ ಪ್ರತಿಭಟನೆ ವೇಳೆ ಸುಳೆ ವಿರುದ್ಧ ಟೀಕಾ ಪ್ರಹಾರ ಮಾಡಿದ ಪಾಟೀಲ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮಗಳು ಯಾರು? ಅವರ್ಯಾಕೆ ರಾಜಕೀಯದಲ್ಲಿದ್ದಾರೆ? ಮನೆಗೆ ಹೋಗಿ ಅಡುಗೆ ಮಾಡಲಿ. ದೆಹಲಿ ಅಥವಾ ಸ್ಮಶಾನಕ್ಕೆ ಹೋಗಲಿ ನಮಗೆ ಒಬಿಸಿ ಕೋಟಾ ನೀಡಿ. ಲೋಕಸಭಾ ಸದಸ್ಯರಾಗಿದ್ದರೂ ಮುಖ್ಯಮಂತ್ರಿಯ ಬಳಿ ಹೇಗೆ ಅಪಾಯಿಂಟ್‌ಮೆಂಟ್ ಪಡೆಯಬೇಕೆಂದು ನಿಮಗೆ ತಿಳಿದಿಲ್ಲವೇ ಎಂದಿದ್ದಾರೆ.
ಪಾಟೀಲ್ ಹೆಸರು ಉಲ್ಲೇಖಿಸದೆಯ ಅವರ ಹೇಳಿಕೆಯನ್ನು ಖಂಡಿಸಿದ ಎನ್‌ಸಿಪಿಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾ ಚವ್ಹಾಣ್, ಹಾಲಿ ಮಹಿಳಾ ಶಾಸಕರಿಗೆ ಟಿಕೆಟ್ ನಿರಾಕರಿಸಿ ಅವರ ಕ್ಷೇತ್ರದಿಂದ ಸ್ಪರ್ಧಿಸಿದ ವ್ಯಕ್ತಿಯೊಬ್ಬರು ಸಂಸದೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. (ಸುಳೆ) ಅವರಿಗೆ ಎರಡು ಬಾರಿ ಗೌರವಾನ್ವಿತ ಸಂಸದ್ ರತ್ನ ಪ್ರಶಸ್ತಿ (ಉತ್ತಮ ಕೆಲಸಕ್ಕಾಗಿ) ನೀಡಲಾಗಿದೆ ಎಂದಿದ್ದಾರೆ. “ನೀವು ಮನುಸ್ಮೃತಿಯನ್ನು ನಂಬುತ್ತೀರಿ ಎಂದು ನಮಗೆ ತಿಳಿದಿದೆ, ಆದರೆ ನಾವು ಇನ್ನು ಮುಂದೆ ಮೌನವಾಗಿರುವುದಿಲ್ಲ” ಎಂದು ಅವರು ಹೇಳಿದ್ದಾರೆ.
“ಅವರು ಚಪಾತಿ ಮಾಡಲು ಕಲಿಯಬೇಕು. ಹಾಗಾದರೆ ಅವರು ಮನೆಯಲ್ಲಿ ತನ್ನ ಹೆಂಡತಿಗೆ ಸಹಾಯ ಮಾಡಬಹುದು” ಎಂದು ಎನ್‌ಸಿಪಿ ನಾಯಕರು ವ್ಯಂಗ್ಯವಾಡಿದ್ದಾರೆ.
ಕೊಲ್ಲಾಪುರದ ಪಾಟೀಲ್ 2019 ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪುಣೆಯ ಕೊತ್ರುಡ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಲ್ಲಿ ಹಾಲಿ ಬಿಜೆಪಿ ಶಾಸಕಿ ಮೇಧಾ ಕುಲಕರ್ಣಿ ಅವರಿಗೆ ಟಿಕೆಟ್ ನಿರಾಕರಿಸಿ ಇವರನ್ನು ಕಣಕ್ಕಿಳಿಸಲಾಗಿತ್ತು.
I am proud of my wife who is a homemaker, mother and a SUCCESSFUL politician, one amongst many other hardworking and talented women in India….this is an insult to all women….
— sadanandsule (@sadanandsule) May 25, 2022
ಸುಪ್ರಿಯಾ ಸುಳೆ ಅವರ ಪತಿ ಸದಾನಂದ್ ಸುಳೆ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಪಾಟೀಲ್ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ. “ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರು ಸುಪ್ರಿಯಾ ಬಗ್ಗೆ ಮಾತನಾಡುತ್ತಿದ್ದಾರೆ. ಅವರು (ಬಿಜೆಪಿ) ಸ್ತ್ರೀದ್ವೇಷಿಗಳು ಮತ್ತು ಸಾಧ್ಯವಾದಾಗಲೆಲ್ಲಾ ಮಹಿಳೆಯರನ್ನು ಕೀಳಾಗಿ ನೋಡುತ್ತಿರುತ್ತಾರೆ ಎಂಬುದು ನನಗರ್ಥವಾಗಿದೆ. “ನನ್ನ ಹೆಂಡತಿ ಒಬ್ಬ ಗೃಹಿಣಿ, ತಾಯಿ ಮತ್ತು ಯಶಸ್ವಿ ರಾಜಕಾರಣಿ, ಭಾರತದ ಇತರ ಅನೇಕ ಶ್ರಮಶೀಲ ಮತ್ತು ಪ್ರತಿಭಾವಂತ ಮಹಿಳೆಯರಲ್ಲಿ ಒಬ್ಬಳಾಗಿದ್ದಾಳೆ. ಇದು ಎಲ್ಲ ಮಹಿಳೆಯರಿಗೆ ಮಾಡಿದ ಅವಮಾನ’ ಎಂದಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 5:53 pm, Thu, 26 May 22