ಶರದ್ ಪವಾರ್ ವಿರುದ್ಧ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್: ಮರಾಠಿ ನಟಿ ಕೇತಕಿ ಚಿತಾಲೆ ಬಂಧನ
ಸದರಿ ಪೋಸ್ಟ್ ನಲ್ಲಿ ಎನ್ ಸಿ ಪಿ ಮಹಾನಾಯಕನ ಪೂರ್ಣ ಹೆಸರನ್ನು ಉಲ್ಲೇಖಿಸಿಲ್ಲವಾದರೂ 80 ವರ್ಷ ವಯಸ್ಸಿನ ಮಿ ಪವಾರ್ ಎಂದು ಬರೆಯಲಾಗಿದೆ. ಎನ್ ಸಿ ಪಿ ಪಿತಾಮಹಾಗೆ ಈಗ 81 ರ ಪ್ರಾಯ ಅನ್ನೋದನ್ನು ನೆನೆಪಿಗೆ ತಂದುಕೊಳ್ಳಬೇಕು. ಮರಾಠಿಯಲ್ಲಿ ಬರೆದಿರುವ ಲೇಖನದಲ್ಲಿ ಪವಾರ್ ಕುರಿತು ‘ನರಕ ನಿಮಗಾಗಿ ಕಾಯುತ್ತಿದೆ,’ ‘ನೀವು ಬ್ರಾಹ್ಮಣ ದ್ವೇಷಿ’ ಅಂತ ಬರೆಯಲಾಗಿದೆ.
ಮುಂಬಯಿ: ಎನ್ಸಿಪಿ ಪಿತಾಮಹರೆನಿಸಿಕೊಂಡಿರುವ ಶರದ್ ಪವಾರ್ (Sharad Pawar) ವಿರುದ್ಧ ಪೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಮರಾಠಿ ನಟಿ ಕೇತಕಿ ಚಿತಾಲೆ (Ketaki Chitale) ಅವರನ್ನು ಥಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇತಕಿ ಸಾಮಾಜಿಕ ಜಾತಲಾಣದಲ್ಲಿ ಹಾಕಿದ ಅವಹೇಳನಕಾರಿ ಪೋಸ್ಟ್ ಬಗ್ಗೆ ಗೊತ್ತಾಗುತ್ತಿದ್ದಂತೆಯೇ ಎನ್ಸಿಪಿ ಧುರೀಣರು ನಟಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಬಳಿಕ ಪೊಲೀಸರು ಬಂಧಿಸಿದರು.
#UPDATE | Marathi actress Ketaki Chitale has been taken into custody by Thane police.
— ANI (@ANI) May 14, 2022
ಕುತೂಹಲಕಾರಿ ಸಂಗತಿ ಏನೆಂದರೆ ಅಡ್ವೊಕೇಟ್ ನಿತಿನ್ ಭಾವೆ ಅವರು ಪವಾರ್ ಅವರನ್ನು ಖಂಡಿಸಿ ಬರೆದಿರುವ ಪೋಸ್ಟ್ ಅನ್ನು ಶೇರ್ ಮಾಡಿರುವ ಕಾರಣ ಕೇತಕಿಯನ್ನು ಬಂಧಿಸಲಾಗಿದೆ. ಸದರಿ ಪೋಸ್ಟ್ ನಲ್ಲಿ ಎನ್ ಸಿ ಪಿ ಮಹಾನಾಯಕನ ಪೂರ್ಣ ಹೆಸರನ್ನು ಉಲ್ಲೇಖಿಸಿಲ್ಲವಾದರೂ 80 ವರ್ಷ ವಯಸ್ಸಿನ ಮಿ ಪವಾರ್ ಎಂದು ಬರೆಯಲಾಗಿದೆ. ಎನ್ ಸಿ ಪಿ ಪಿತಾಮಹಾಗೆ ಈಗ 81 ರ ಪ್ರಾಯ ಅನ್ನೋದನ್ನು ನೆನೆಪಿಗೆ ತಂದುಕೊಳ್ಳಬೇಕು. ಮರಾಠಿಯಲ್ಲಿ ಬರೆದಿರುವ ಲೇಖನದಲ್ಲಿ ಪವಾರ್ ಕುರಿತು ‘ನರಕ ನಿಮಗಾಗಿ ಕಾಯುತ್ತಿದೆ,’ ‘ನೀವು ಬ್ರಾಹ್ಮಣ ದ್ವೇಷಿ’ ಅಂತ ಬರೆಯಲಾಗಿದೆ. ಹಿಂದೆ ಮುಖ್ಯಮಂತ್ರಿಗಳಾಗಿದ್ದ ಪವಾರ್ ಅವರ ಪಕ್ಷ ಮತ್ತು ಕಾಂಗ್ರೆಸ್ ಜೊತೆ ಸೇರಿ ಶಿವ ಸೇನಾ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದೆ.
ಸ್ವಪ್ನೀಲ್ ನೆಟ್ಕೆ ಹೆಸರಿನ ವ್ಯಕ್ತಿಯೊಬ್ಬರು ಥಾಣೆಯ ಕಲ್ವಾ ಪೊಲೀಸ್ ಸ್ಟೇಶನಲ್ಲಿ ಶನಿವಾರ ದೂರು ನೀಡಿದ ನಂತರ ಕೇತಕಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಕೇತಕಿ ಅವರ ಪೋಸ್ಟ್ ನಲ್ಲಿ ಆಕ್ಷೇಪಾರ್ಹ ಅಂಶಗಳಿದ್ದು ಅದು ಎರಡು ರಾಜಕೀಯ ಪಕ್ಷಗಳೊಂದಿಗೆ ಎನ್ ಸಿ ಪಿ ಹೊಂದಿರುವ ಬಾಂಧವ್ಯವನ್ನು ಹಾಳು ಮಾಡಬಹುದಾಗಿದೆ ಎಂದು ದೂರುದಾರ ಅರೋಪಿಸಿದ್ದಾರೆ.
ಚಿತಾಲೆ ವಿರುದ್ಧ ಐಪಿಸಿಯ 500 (ಮಾನನಷ್ಟ) 501 (ಮಾನಹಾನಿ ಉಂಟುಮಾಡಬಹುದಾದ ವಿಷಯದ ಮುದ್ರಣ) 505 (2) (ಎರಡು ಗುಂಪುಗಳ ನಡುವೆ ಸಂಘರ್ಷ ಮತ್ತು ದ್ವೇಷಕ್ಕೆ ಉತ್ತೇಜಿಸಬಹುದಾದ ಹೇಳಿಕೆ, ಗಾಳಿಸುದ್ದಿ ಪ್ರಕಟಿಸುವುದು ಇಲ್ಲವೇ ಪ್ರಚಾರ) ಮತ್ತು 153 ಎ (ಜನಗಳ ನಡುವೆ ಅಶಾಂತಿಯನ್ನು ಸೃಷ್ಟಿಸುವುದು) ಸೆಕ್ಷನ್ ಗಳನ್ನು ದಾಖಲಿಸಲಾಗಿದೆ.
ಕೇತಕಿ ಅವರ ಆರೋಪಿತ ಅವಹೇಳನಕಾರಿ ಪೋಸ್ಟ್ ಎನ್ ಸಿ ಪಿ ಧುರೀಣರು ಮತ್ತು ಕಾರ್ಯಕರ್ತರಲ್ಲಿ ಕೋಪ ಉಕ್ಕಿಸಿದೆ. ಪಕ್ಷದ ಪುಣೆ ಘಟಕದ ನಾಯಕರು ಕೇತಕಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
‘ಚಿತಾಲೆ ಅವರು ಸೋಶಿಯಲ್ ಮಿಡಿಯಾ ಪೋಸ್ಟ್ ಅವಹೇಳನಕಾರಿಯಾಗಿದೆ. ತಮ್ಮ ಪೋಸ್ಟ್ ನಲ್ಲಿ ಅವರು ಪವಾರ್ ಮತ್ತು ಸುಪ್ರಿಯಾ ಸುಳೆ ಅವರನ್ನು ಅಪಮಾನಿಸಿದ್ದಾರೆ. ಸದರಿ ಪೋಸ್ಟ್ ಅಶಾಂತಿಯನ್ನು ಸೃಷ್ಟಿಸುವ ಸಾಧ್ಯತೆ ಇರುವುದರಿಂದ ನಾವು ಸೈಬರ್ ಪೊಲೀಸ್ ಗೆ ದೂರು ನೀಡಿ ಕ್ರಮ ತೆಗೆದುಕೊಳ್ಳಲು ಅಗ್ರಹಿಸಿದ್ದೇವೆ,’ ಎಂದು ಎನ್ ಸಿ ಪಿ ಪುಣೆ ಘಟಕದ ಅಧ್ಯಕ್ಷ ಪ್ರಶಾಂತ್ ಜಗ್ತಾಪ್ ಮಾಧ್ಯಮದವರಿಗೆ ತಿಳಿಸಿದರು.
ಕೇತಕಿ ಅವರ ಪೊಸ್ಟ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ವಸತಿ ಅಭಿವೃದ್ಧಿ ಸಚಿವ ಜಿತೇಂದ್ರ ಅವ್ಹದ್, ಮಹಾರಾಷ್ಟ್ರದಾದ್ಯಂತ ಕನಿಷ್ಟ 100-200 ಪೊಲೀಸ್ ಠಾಣೆಗಳಲ್ಲಿ ಎನ್ ಸಿ ಪಿ ಕಾರ್ಯಕರ್ತರಿಂದ ದೂರು ದಾಖಲಿಸಲಾಗುವುದು ಎಂದಿದ್ದಾರೆ.
‘ನಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಏನಿಲ್ಲವೆಂದರೂ 100-200 ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ದಾಖಲಿಸುವರು. ಪವಾರ್ ಎನ್ ಸಿ ಪಿ ಕುಟುಂಬದ ಪಿತೃವಾಗಿದ್ದಾರೆ. ಅವರು ನಮಗೆ ಎಲ್ಲವೂ ಅಗಿದ್ದಾರೆ. ಅಂಥ ನಾಯಕನ ವಿರುದ್ಧ ಒಬ್ಬ ಮಹಿಳೆ ಹೇವರಿಕೆ ಹುಟ್ಟಿಸುವ ಕಾಮೆಂಟ್ ಗಳನ್ನು ಮಾಡಿದ್ದಾರೆ,’ ಎಂದು ಸುದ್ದಿ ವಾಹಿನಿಯೊಂದಿಗೆ ಮಾತಾಡಿದ ಅವ್ಹದ್ ಹೇಳಿದರು.
ಎನ್ ಸಿ ಪಿಯ ಹಿರಿಯ ನಾಯಕ ಛಗನ್ ಭುಜ್ಪಲ್ ಸಹ ಆಕ್ರೋಷವನ್ನು ವ್ಯಕ್ತಪಡಿಸಿದ್ದಾರೆ. ‘ಅದು ನಟಿಯಾಗಿರಲಿ, ನಟ ಅಥವಾ ಮಿನಿಸ್ಟರ್, ಕೂಡಲೇ ಕ್ರಮ ಜರುಗಿಸಬೇಕು. ಅಂಥ ಹೇಳಿಕೆಗಳನ್ನು ನೀಡಲು ಆಕೆಗೆ ಯಾವುದೇ ಹಕ್ಕಿಲ್ಲ,’ ಎಂದು ಭುಜ್ಬಲ್ ಹೇಳಿದ್ದಾರೆ.
ಇದನ್ನೂ ಓದಿ: ನಿಮಗೆ ಧೈರ್ಯವಿದ್ದರೆ ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ: ಮಹಾರಾಷ್ಟ್ರ ಸಿಎಂಗೆ ಸವಾಲೆಸೆದ ಸಂಸದೆ ನವನೀತ್ ರಾಣಾ