Sputnik V: ಸ್ಪುಟ್ನಿಕ್​ ವಿ ಕೊರೊನಾ ಲಸಿಕೆ ಒಂದು ಡೋಸ್​ಗೆ 995.40 ರೂ; ಭಾರತದಲ್ಲಿ ಉತ್ಪಾದನೆ ಆರಂಭವಾದ ನಂತರ ಬೆಲೆ ತಗ್ಗುವ ಸಾಧ್ಯತೆ

| Updated By: ರಶ್ಮಿ ಕಲ್ಲಕಟ್ಟ

Updated on: May 14, 2021 | 1:45 PM

Covid Vaccine: ಸ್ಪುಟ್ನಿಕ್ ವಿ ಲಸಿಕೆಗೆ ಇಂದು (ಮೇ 14) ಹೈದರಾಬಾದ್​ನಲ್ಲಿ ಚಾಲನೆ ನೀಡಲಾಗಿದ್ದು, ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ. ಈ ಲಸಿಕೆಯನ್ನು ಭಾರತದಲ್ಲೇ ಉತ್ಪಾದಿಸಲು ಆರಂಭಿಸಿದ ನಂತರ ಬೆಲೆ ತಗ್ಗುವ ನಿರೀಕ್ಷೆಗಳಿದೆ

Sputnik V: ಸ್ಪುಟ್ನಿಕ್​ ವಿ ಕೊರೊನಾ ಲಸಿಕೆ ಒಂದು ಡೋಸ್​ಗೆ 995.40 ರೂ; ಭಾರತದಲ್ಲಿ ಉತ್ಪಾದನೆ ಆರಂಭವಾದ ನಂತರ ಬೆಲೆ ತಗ್ಗುವ ಸಾಧ್ಯತೆ
Sputnik V Covid Vaccine
Follow us on

ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಪರಿಸ್ಥಿತಿ ಬಿಗಡಾಯಿಸಿದ್ದು, ಅದೇ ಸಂದರ್ಭಕ್ಕೆ ಸರಿಯಾಗಿ ಲಸಿಕೆ ಕೊರತೆಯೂ ಎದುರಾಗಿರುವುದರಿಂದ ಸರ್ಕಾರಕ್ಕೆ ಅತಿದೊಡ್ಡ ಸವಾಲು ಎದುರಾಗಿದೆ. ಭಾರತದಲ್ಲಿ ಈವರೆಗೆ ಭಾರತ್ ಬಯೋಟೆಕ್​ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್​ ಹಾಗೂ ಸೆರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಲಸಿಕೆಯನ್ನು ಮಾತ್ರ ನೀಡಲಾಗುತ್ತಿತ್ತು. ಆದರೆ, ಇದೀಗ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನೂ ವಿತರಿಸಲು ನಿರ್ಧರಿಸಲಾಗಿದ್ದು, ಡಾ.ರೆಡ್ಡೀಸ್ ಲ್ಯಾಬೋರೇಟರಿಯಲ್ಲಿ ಇದನ್ನು ಉತ್ಪಾದಿಸಲು ಅನುಮತಿ ಸಿಕ್ಕಿದೆ. ಸದ್ಯ ರಷ್ಯಾದಿಂದ ಆಮದು ಮಾಡಿಕೊಂಡಿರುವ ಸ್ಪುಟ್ನಿಕ್ ವಿ ಲಸಿಕೆಯ ಬೆಲೆ ಕುರಿತಾದ ಮಾಹಿತಿ ಹೊರಬಿದ್ದಿದ್ದು, ಭಾರತದಲ್ಲಿ ಒಂದು ಡೋಸ್ ಲಸಿಕೆಯ ಬೆಲೆ ₹995.40ರಷ್ಟು ಇರಲಿದೆ ಎಂದು ತಿಳಿದುಬಂದಿದೆ.

ವಿದೇಶದಿಂದ ಭಾರತಕ್ಕೆ ಆಮದಾಗುವ ಲಸಿಕೆ ಮೇಲೆ ಶೇ.5ರಷ್ಟು ಜಿಎಸ್​ಟಿ ವಿಧಿಸಲಾಗುತ್ತಿದ್ದು, ಇದೇ ಲಸಿಕೆ ಭಾರತದಲ್ಲಿ ತಯಾರಾದರೆ ಇನ್ನೂ ಕಡಿಮೆ ಬೆಲೆಗೆ ದೊರೆಯಲಿದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಅಧ್ಯಯನಗಳ ಪ್ರಕಾರ ಕೊರೊನಾ ವಿರುದ್ಧ ಸ್ಪುಟ್ನಿಕ್ ವಿ ಲಸಿಕೆಯು ಶೇ.91.6ರಷ್ಟು ಪರಿಣಾಮಕಾರಿಯಾಗಿದ್ದು, ಭಾರತದಲ್ಲಿ ಈಗ ಲಭ್ಯವಿರುವ ಕೊವಿಶೀಲ್ಡ್​ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳಿಗಿಂತಲೂ ಹೆಚ್ಚು ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

ಈ ಲಸಿಕೆಯು ಮುಂದಿನ ವಾರದಿಂದ ಮಾರುಕಟ್ಟೆಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದ್ದು, ವಿವಿಧ ರಾಜ್ಯಗಳಲ್ಲಿ ಉಂಟಾಗಿರುವ ಕೊರೊನಾ ಲಸಿಕೆ ಕೊರತೆಯನ್ನು ನಿಭಾಯಿಸಲು ಕೊಂಚ ಸಹಕಾರಿಯಾಗಲಿದೆ. ಅಷ್ಟಾದರೂ ಈಗಾಗಲೇ ಕೊವಿಶೀಲ್ಡ್​ ಅಥವಾ ಕೊವ್ಯಾಕ್ಸಿನ್ ಲಸಿಕೆಗಳ ಮೊದಲ ಡೋಸ್ ಪಡೆದವರು ಆಯಾ ಲಸಿಕೆಗಳನ್ನೇ ಎರಡನೇ ಬಾರಿಯೂ ಪಡೆಯಬೇಕಾಗಿರುವ ಕಾರಣ ಹೊಸದಾಗಿ ಲಸಿಕೆ ತೆಗೆದುಕೊಳ್ಳುವವರಿಗೆ ಸ್ಪುಟ್ನಿಕ್​ ವಿ ನೀಡಬೇಕಾಗಿದೆ.

ಜಾಗತಿಕ ಮಟ್ಟದಲ್ಲಿ ಫೈಜರ್ ಹಾಗೂ ಮಾಡೆರ್ನಾ ಲಸಿಕೆಗಳ ನಂತರ ಸ್ಪುಟ್ನಿಕ್ ವಿ ಲಸಿಕೆ ಅತಿಹೆಚ್ಚು ಕಾರ್ಯಕ್ಷಮತೆ ಹೊಂದಿದೆ ಎಂದು ಕೆಲ ವರದಿಗಳು ತಿಳಿಸಿರುವುದರಿಂದ ಸಹಜವಾಗಿ ಇದರ ಬಗೆಗಿನ ನಿರೀಕ್ಷೆಗಳೂ ಹೆಚ್ಚಿವೆ. ಸ್ಪುಟ್ನಿಕ್​ ವಿ ಲಸಿಕೆಯು ದ್ರವ ರೂಪ ಹಾಗೂ ಪುಡಿರೂಪ (ಪೌಡರ್) ಎಂದು ಎರಡು ಬಗೆಯಲ್ಲಿ ಲಭ್ಯವಿದ್ದು, ದ್ರವರೂಪದ ಲಸಿಕೆಯನ್ನು ಮೈನಸ್ 18ಡಿಗ್ರಿ ಸೆಲ್ಸಿಯಸ್​ನಲ್ಲಿ ಹಾಗೂ ಪುಡಿರೂಪದ ಲಸಿಕೆಯನ್ನು 2ರಿಂದ 8ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಶೇಖರಿಸಿಡಬಹುದಾಗಿದೆ.

ಆಮದು ಮಾಡಿಕೊಂಡ ಸ್ಪುಟ್ನಿಕ್ ವಿ ಲಸಿಕೆಗೆ ಇಂದು (ಮೇ 14) ಹೈದರಾಬಾದ್​ನಲ್ಲಿ ಚಾಲನೆ ನೀಡಲಾಗಿದ್ದು, ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ. ಈ ಲಸಿಕೆಯನ್ನು ಭಾರತದಲ್ಲೇ ಉತ್ಪಾದಿಸಲು ಆರಂಭಿಸಿದ ನಂತರ ಬೆಲೆ ತಗ್ಗುವ ನಿರೀಕ್ಷೆಗಳಿದ್ದು ಸದ್ಯ ಭಾರತದಲ್ಲಿ ಕೊವಿಶೀಲ್ಡ್, ಕೊವ್ಯಾಕ್ಸಿನ್​ ನಂತರ ಅಧಿಕೃತವಾಗಿ ಸ್ಪುಟ್ನಿಕ್​ ವಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಒಟ್ಟು ಮೂರು ಕೊರೊನಾ ಲಸಿಕೆಗಳು ಲಭ್ಯವಾಗಲಿವೆ.

ಇದನ್ನೂ ಓದಿ:  ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಜೊತೆಗೆ ಭಾರತದಲ್ಲಿ ಸಿಗಲಿದೆ ಸ್ಪುಟ್ನಿಕ್​-ವಿ ಕೊರೊನಾ ಲಸಿಕೆ; ಮೂರರಲ್ಲಿ ಯಾವುದು ಉತ್ತಮ?

ರಷ್ಯಾದ ಸ್ಪುಟ್ನಿಕ್ ಕೊವಿಡ್ ಲಸಿಕೆ ಮುಂದಿನ ವಾರ ಲಭ್ಯ ಸಾಧ್ಯತೆ: ಕೇಂದ್ರ ಸರ್ಕಾರ

Published On - 1:28 pm, Fri, 14 May 21