ರಾಮ ದೇವರಲ್ಲ, ಆತ ರಾಮಾಯಣದ ಒಂದು ಪಾತ್ರವಷ್ಟೇ; ಬಿಹಾರದ ಬಿಜೆಪಿ ಮಿತ್ರಪಕ್ಷದ ನಾಯಕನ ಅಚ್ಚರಿಯ ಹೇಳಿಕೆ
"ವಾಲ್ಮೀಕಿ ರಾಮಾಯಣವನ್ನು ಬರೆದಿದ್ದಾರೆ. ನಾವು ಅದನ್ನು ನಂಬುತ್ತೇವೆ. ನಾವು ತುಳಸಿದಾಸ್ ಮತ್ತು ವಾಲ್ಮೀಕಿಯನ್ನು ನಂಬುತ್ತೇವೆಯೇ ಹೊರತು ರಾಮನನ್ನಲ್ಲ" ಎಂದು ಮಾಂಝಿ ಹೇಳಿದ್ದಾರೆ
ಬಿಹಾರ: ‘ನಾನು ರಾಮನನ್ನು ನಂಬುವುದಿಲ್ಲ. ರಾಮ ದೇವರಲ್ಲ. ರಾಮನೆಂಬುದು ತುಳಸಿದಾಸ್ ಮತ್ತು ವಾಲ್ಮೀಕಿ ಸೃಷ್ಟಿ ಮಾಡಿದ ಒಂದು ಪಾತ್ರವಷ್ಟೇ’ ಎಂದು ಹೇಳುವ ಮೂಲಕ ಬಿಹಾರದ ಬಿಜೆಪಿ ಪಕ್ಷದ ಪ್ರಮುಖ ಮಿತ್ರ ಪಕ್ಷ ವಿವಾದಕ್ಕೆ ಗುರಿಯಾಗಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಹೇಳಿರುವ ಈ ಮಾತುಗಳು ತೀವ್ರ ಚರ್ಚೆಗೆ ಕಾರಣವಾಗಿವೆ.
“ವಾಲ್ಮೀಕಿ ರಾಮಾಯಣವನ್ನು ಬರೆದಿದ್ದಾರೆ. ಅವರ ಬರಹಗಳಲ್ಲಿ ಅನೇಕ ಉತ್ತಮ ಪಾಠಗಳಿವೆ. ನಾವು ಅದನ್ನು ನಂಬುತ್ತೇವೆ. ನಾವು ತುಳಸಿದಾಸ್ ಮತ್ತು ವಾಲ್ಮೀಕಿಯನ್ನು ನಂಬುತ್ತೇವೆಯೇ ಹೊರತು ರಾಮನನ್ನಲ್ಲ” ಎಂದು ಮಾಂಝಿ ಹೇಳಿದ್ದಾರೆ. ಅವರ ಮಗ ಸಂತೋಷ್ ಮಾಂಝಿ ಬಿಹಾರದಲ್ಲಿ ನಿತೀಶ್ ಕುಮಾರ್-ಬಿಜೆಪಿ ಸಂಪುಟದ ಸಚಿವರಾಗಿದ್ದಾರೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಿರುವ ಹಿಂದೂಸ್ತಾನ್ ಅವಾಮ್ ಮೋರ್ಚಾ (ಎಚ್‌ಎಎಂ) ಮುಖ್ಯಸ್ಥ ಮಾಂಝಿ ಅವರು ಭಾರತದ ಸಂವಿಧಾನವನ್ನು ರೂಪಿಸಿದ ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
“ನಿಮಗೆ ರಾಮನಲ್ಲಿ ನಂಬಿಕೆಯಿದ್ದರೆ, ರಾಮನು ಶಬರಿಯು ರುಚಿಯಾದ ಹಣ್ಣನ್ನು ತಿಂದಿದ್ದಾನೆ ಎಂಬುದು ನಾವು ಯಾವಾಗಲೂ ಕೇಳುವ ಕಥೆ. ನಾವು ಕಚ್ಚಿದ ಹಣ್ಣನ್ನು ನೀವು ತಿನ್ನುವುದಿಲ್ಲ. ಆದರೆ ನಾವು ಮುಟ್ಟಿದ್ದನ್ನು ತಿನ್ನುತ್ತೀರಿ” ಎಂದು ಮಾಂಝಿ ದೇಶದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆಯೂ ಟೀಕಿಸಿದ್ದಾರೆ.
ಇದನ್ನೂ ಓದಿ: ಶ್ರೀರಾಮಸೇನೆ ಗೂಂಡಾಗಳಿಗೆ ರಾಮನ ಹೆಸರು ಹೇಳುವ ಯಾವ ಯೋಗ್ಯತೆಯಿದೆ: ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ