Video: ಅಸ್ಸಾಂನಲ್ಲಿ ರೋಂಗಾಲಿ ಬಿಹು ಸಂಭ್ರಮದಲ್ಲಿ ಆನೆಗಳ ಓಟದ ಸ್ಪರ್ಧೆ; ಕ್ಯೂಟ್ ಆಗಿ ಓಡಿದ ಗಜಗಳು !
ಹಬ್ಬದ ಮೂರು ದಿನಗಳಲ್ಲಿ ಒಂದೊಂದು ದಿನವನ್ನೂ ಕೈಮಗ್ಗಗಳು, ಕೃಷಿ ಉಪಕರಣಗಳು, ಜಾನುವಾರುಗಳಿಗೆ ಮೀಸಲಾಗಿಟ್ಟು, ಅವುಗಳಿಗೆ ಸಂಬಂಧಪಟ್ಟಂತೆ ಆಚರಣೆಯೂ ಇರುತ್ತದೆ. ಪರಸ್ಪರರಿಗೆ ಉಡುಗೋರೆ ಕೊಟ್ಟುಕೊಳ್ಳುತ್ತಾರೆ.
ಅಸ್ಸಾಂ ಮತ್ತಿತರ ಈಶಾನ್ಯ ರಾಜ್ಯಗಳಲ್ಲಿ ಏಪ್ರಿಲ್ 14ರಿಂದ ರೋಂಗಾಲಿ ಬಿಹು ಹಬ್ಬ ಶುರುವಾಗಿದ್ದು, ನಾಳೆಯವರೆಗೆ ಇದರ ಆಚರಣೆ ಇರುತ್ತದೆ. ಅಂದರೆ ನಮ್ಮಲ್ಲಿ ಯುಗಾದಿಯನ್ನು ಹೊಸವರ್ಷವೆಂದು ಆಚರಣೆ ಮಾಡಿದಂತೆ, ಅಲ್ಲಿನ ಜನರು ಈ ರೋಂಗಾಲಿ ಬಿಹುದಿಂದ ಹೊಸ ವರ್ಷ ಪ್ರಾರಂಭ ಎಂದು ಪರಿಗಣಿಸಿ, ಸಂಭ್ರಮದಿಂದ ಹಬ್ಬ ಮಾಡುತ್ತಾರೆ. ಈ ಹಬ್ಬದಂದು ಸಾಂಪ್ರದಾಯಿಕ ನೃತ್ಯ, ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಸ್ವಲ್ಪ ವಿಭಿನ್ನವಾಗಿ ಅಸ್ಸಾಂನ ಶಿವಸಾಗರ ಎಂಬಲ್ಲಿ ಆನೆಗಳ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಹಬ್ಬದ ಆಚರಣೆಗಳಲ್ಲಿ ಸಾಮಾನ್ಯವಾಗಿ ಗೂಳಿಗಳ ಓಟ, ದನಗಳನ್ನು ಓಡಿಸುವುದು ಇತ್ಯಾದಿ ಸ್ಪರ್ಧೆಯನ್ನು ನಾವು ನೋಡುತ್ತೇವೆ. ಆದರೆ ಧಡೂತಿ ಶರೀರ ಹೊತ್ತು, ಗಾಂಭೀರ್ಯದ ನಡಿಗೆಗೆ ಹೆಸರಾಗಿರುವ ಆನೆಗಳ ನಡುವೆ ಓಟದ ಸ್ಪರ್ಧೆ ಆಯೋಜಿಸಿದ್ದು ವಿಶೇಷ ಎನ್ನಿಸಿದೆ. ಹಾಗೇ, ಇದರ ವಿಡಿಯೋಗಳು ವೈರಲ್ ಆಗಿವೆ. ಅದರಲ್ಲಿ ಆನೆಗಳು ತಾ ಮುಂದೆ, ನಾ ಮುಂದೆ ಎನ್ನುತ್ತ ಓಡುವ ಕ್ಯೂಟ್ ದೃಶ್ಯವನ್ನು ನೋಡಬಹುದು.
#WATCH | | An elephant race was organized by locals in Assam’s Sivasagar earlier today, marking the festival of #RongaliBihu pic.twitter.com/muSwr8R3qw
— ANI (@ANI) April 15, 2022
ಈ ಬಿಹು ಮೂರು ದಿನಗಳ ಹಬ್ಬವಾದರೂ ಅಲ್ಲಿನ ಜನರು ವಾರದವರೆಗೆ ಸಂಭ್ರಮ ಆಚರಣೆ ಮಾಡುತ್ತಲೇ ಇರುತ್ತಾರೆ. ಈ ಮೂರು ದಿನಗಳಲ್ಲಿ ಒಂದೊಂದು ದಿನವನ್ನೂ ಕೈಮಗ್ಗಗಳು, ಕೃಷಿ ಉಪಕರಣಗಳು, ಜಾನುವಾರುಗಳಿಗೆ ಮೀಸಲಾಗಿಟ್ಟು, ಅವುಗಳಿಗೆ ಸಂಬಂಧಪಟ್ಟಂತೆ ಆಚರಣೆಯೂ ಇರುತ್ತದೆ. ಪರಸ್ಪರರಿಗೆ ಉಡುಗೋರೆ ಕೊಟ್ಟುಕೊಳ್ಳುತ್ತಾರೆ. ಹಾಗೇ, ಜಾನಪದ ಸಂಗೀತ, ನೃತ್ಯಗಳ ಪ್ರದರ್ಶನ ಭರ್ಜರಿಯಾಗಿ ನಡೆಯುತ್ತದೆ. ರಾಜ್ಯಾದ್ಯಂತ ಸುಮಾರು 1200 ಬಿಹು ಸಮಿತಿಗಳಿದ್ದು, ಈ ಹಬ್ಬ ಆಚರಣೆಗೆಂದೇ ರಾಜ್ಯ ಸರ್ಕಾರ ಪ್ರತಿ ಸಮಿತಿಗೆ ತಲಾ 1.5 ಲಕ್ಷ ರೂಪಾಯಿ ನೀಡಿತ್ತು. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭೂಯಾನ್ ಶರ್ಮಾ ಗುರುವಾರ ತಮ್ಮ ನಿವಾಸ ಜೋರ್ಹಾತ್ನಲ್ಲಿ ಬಿಹು ಆಚರಣೆ ಮಾಡಿದ್ದಾರೆ. ಅದರ ವಿಡಿಯೋವನ್ನೂ ಕೂಡ ಸಿಎಂ ಶೇರ್ ಮಾಡಿಕೊಂಡಿದ್ದರು.