ಹೈದರಾಬಾದ್, ಮೇ 2: ಕರ್ನಾಟಕದ ಬೀದರ್ (Bidar) ಜಿಲ್ಲೆಯ 1 ವರ್ಷದ ಮಗುವಿಗೆ ಹೈದರಾಬಾದ್ನಲ್ಲಿ (Hyderabad) ಯಶಸ್ವಿ ರೋಬೋಟಿಕ್ ಶಸ್ತ್ರಚಿಕಿತ್ಸೆ (Robotic Surgery) ನೆರವೇರಿಸಲಾಗಿದ್ದು, ದೇಶದ ವೈದ್ಯಕೀಯ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲು ಸಾಧಿಸಲಾಗಿದೆ. ದೇಶದ ಮೊದಲ ಸರ್ಜಿಕಲ್ ರೋಬೋಟಿಕ್ ಸಿಸ್ಟಂ (Surgical Robotic System) ಅಭಿವೃದ್ಧಿಪಡಿಸಿರುವ ಎಸ್ಎಸ್ ಇನ್ನೊವೇಷನ್ಸ್ನ (SS Innovations) ‘ಎಸ್‌ಎಸ್‌ಐ ಮಂತ್ರ (SSI Mantra)’ ಶಸ್ತ್ರಚಿಕಿತ್ಸೆ ನೆರವೇರಿಸಿದೆ. ಕಡಿಮೆ ವೆಚ್ಚದಲ್ಲಿ ಜನಸಾಮಾನ್ಯರಿಗೂ ಶಸ್ತ್ರಚಿಕಿತ್ಸೆ ಸೌಲಭ್ಯ ದೊರೆಯುವಂತಾಗಬೇಕು ಎಂಬ ಉದ್ದೇಶದೊಂದಿಗೆ ಎಸ್ಎಸ್ ಇನ್ನೊವೇಷನ್ಸ್ ಈ ರೋಬೋಟಿಕ್ ಸಿಸ್ಟಂ ಅಭಿವೃದ್ಧಿಪಡಿಸಿದೆ.
ಹೈದರಾಬಾದ್ನ ಪ್ರೀತಿ ಯುರಾಲಜಿ ಆ್ಯಂಡ್ ಕಿಡ್ನಿ ಹಾಸ್ಪಿಟಲ್ಸ್ನ ಎಂಡಿಯೂ ಆಗಿರುವ ಹಿರಿಯ ಯುರಾಲಜಿಸ್ಟ್ (ಮೂತ್ರಶಾಸ್ತ್ರಜ್ಞ) ಡಾ. ಚಂದ್ರಮೋಹನ್ ವಡ್ಡಿ ಮೇಲುಸ್ತುವಾರಿಯಲ್ಲಿ ಎಸ್‌ಎಸ್‌ಐ ಮಂತ್ರ ಸರ್ಜಿಕಲ್ ರೋಬೋಟಿಕ್ ಸಿಸ್ಟಂ ಬಳಸಿಕೊಂಡು ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.
ಈ ಶಸ್ತ್ರಚಿಕಿತ್ಸೆಯು ಮಕ್ಕಳ ರೊಬೋಟಿಕ್ ಶಸ್ತ್ರಚಿಕಿತ್ಸೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ ಮತ್ತು ಎಸ್‌ಎಸ್‌ಐ ಮಂತ್ರಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ಪ್ರೀತಿ ಯುರಾಲಜಿ ಆ್ಯಂಡ್ ಕಿಡ್ನಿ ಹಾಸ್ಪಿಟಲ್ಸ್ ತಿಳಿಸಿದೆ.
ಬೀದರ್ನ ಒಂದು ವರ್ಷದ ಮಗು ಎಡ ಕಿಡ್ನಿಯಲ್ಲಿ ಊತ ಮತ್ತು ಬ್ಲಾಕ್ ಸಮಸ್ಯೆಯನ್ನು ಎದುರಿಸುತ್ತಿತ್ತು. ಹೀಗಾಗಿ ಮಗುವಿನ ಪಾಲಕರು ಪ್ರೀತಿ ಯುರಾಲಜಿ ಆ್ಯಂಡ್ ಕಿಡ್ನಿ ಹಾಸ್ಪಿಟಲ್ಸ್ಗೆ ಕರೆತಂದಿದ್ದರು. ಮೂತ್ರಪಿಂಡದಲ್ಲಿ ತೀವ್ರವಾದ ಅಡಚಣೆ ಇರುವುದು ನ್ಯೂಕ್ಲಿಯರ್ ಸ್ಕ್ಯಾನಿಂಗ್ನಲ್ಲಿಯೂ ದೃಢಪಟ್ಟ ಕಾರಣ ಶಸ್ತ್ರಚಿಕಿತ್ಸೆ ಅನಿವಾರ್ಯ ಎಂದೇ ವೈದ್ಯರು ಹೇಳಿದ್ದರು. ಇದನ್ನು ತೆರೆದ ಶಸ್ತ್ರಚಿಕಿತ್ಸೆ, ಲ್ಯಾಪ್ರೊಸ್ಕೋಪಿಕ್ ಅಥವಾ ರೊಬೋಟಿಕ್ ವಿಧಾನದಿಂದ ಮಾಡಬಹುದಾಗಿತ್ತು. ನಂತರ ರೊಬೋಟಿಕ್ ವಿಧಾನದಿಂದ ಮಾಡಲು ವೈದ್ಯರು ನಿರ್ಧರಿಸಿದರು.
One-year-old from Bidar became India’s youngest patient to undergo robotic surgery. Surgery was carried out with Made India surgical robot, SSI Mantra
Dr Sudhir Srivastava, Founder, Chairman & CEO, SS Innovations shares insights🏥#TheBreakfastClub @toyasingh @swastikadas95 pic.twitter.com/5m9aDa5AMK
— News18 (@CNNnews18) May 2, 2024
ಇದೀಗ ದೇಶೀಯ ತಂತ್ರಜ್ಞಾನದಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾದ ಅತ್ಯಂತ ಕಿರಿಯ ರೋಗಿ ಎಂಬ ಹೆಗ್ಗಳಿಕೆಯೂ ಬೀದರ್ನ ಮಗುವಿನದ್ದಾಗಿದೆ. ಮಗುವಿಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ ಬಗ್ಗೆ ಹಾಗೂ ನೂತನ ತಂತ್ರಜ್ಞಾನದ ಕುರಿತು ಸರ್ಜಿಕಲ್ ರೋಬೋಟಿಕ್ ಸಿಸ್ಟಂ ಅಭಿವೃದ್ಧಿಪಡಿಸಿರುವ ಎಸ್ಎಸ್ ಇನ್ನೊವೇಷನ್ಸ್ನ ಸ್ಥಾಪಕ, ಅಧ್ಯಕ್ಷ, ಸಿಇಒ ಡಾ. ಸುಧೀರ್ ಶ್ರೀವಾಸ್ತವ ಅವರ ಒಳನೋಟಕ್ಕೆ ಸಂಬಂಧಿಸಿದ ವಿಡಿಯೋವನ್ನು ‘ಸಿಎನ್ಎನ್ ನ್ಯೂಸ್18’ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪ್ರಕಟಿಸಿದೆ.
ಇದನ್ನೂ ಓದಿ: ಭೇದಿ, ಅತಿಸಾರದಂತಹ ಸಮಸ್ಯೆ ಈ ರೋಗದ ಲಕ್ಷಣವಾಗಿರಬಹುದು ಎಚ್ಚರ!
‘ಎಲ್ಲಾ ರೀತಿಯಲ್ಲೂ ತಪಾಸಣೆ ಮಾಡಿದ ನಂತರ, ಪೋಷಕರ ಒಪ್ಪಿಗೆಯೊಂದಿಗೆ ನಾವು ಮೇಡ್ ಇನ್ ಇಂಡಿಯಾ ಸರ್ಜಿಕಲ್ ರೊಬೊಟಿಕ್ ಸಿಸ್ಟಮ್ – ಎಸ್‌ಎಸ್‌ಐ ಮಂತ್ರದೊಂದಿಗೆ ರೋಬೋಟಿಕ್ ಪೈಲೋಪ್ಲ್ಯಾಸ್ಟಿ ಮಾಡಿದ್ದೇವೆ. ಈ ವ್ಯವಸ್ಥೆಯು ಅತ್ಯಂತ ಸ್ಪಷ್ಟವಾದ 3D 4K ಚಿತ್ರಣವನ್ನು ಒದಗಿಸುತ್ತದೆ. ಈ ಅತ್ಯಂತ ನಿರೀಕ್ಷಿತ ಯಶಸ್ವಿ ಶಸ್ತ್ರಚಿಕಿತ್ಸೆಯು ಭಾರತೀಯ ವೈದ್ಯಕೀಯ ಶಸ್ತ್ರಚಿಕಿತ್ಸೆಯಲ್ಲಿ ಹೊಸ ಯುಗದ ಉದಯವನ್ನು ಸೂಚಿಸುತ್ತದೆ. ಕಾರ್ಯಾಚರಣೆಯ ಯಶಸ್ವಿ ಫಲಿತಾಂಶವು ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ದೇಶದಲ್ಲಿ ಕ್ರಾಂತಿಯನ್ನುಂಟುಮಾಡಲು ಸಾಧ್ಯವಿದೆ ಎಂಬುದನ್ನು ಒತ್ತಿಹೇಳಿದೆ ಎಂದು ಡಾ. ಚಂದ್ರಮೋಹನ್ ವಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:02 am, Thu, 2 May 24