ಜಮ್ಮು: ಜಮ್ಮು-ಕಾಶ್ಮೀರದ ಮಾತಾ ವೈಷ್ಣೋದೇವಿ ಮಂದಿರದಲ್ಲಿ ಕಾಲ್ತುಳಿತ ಉಂಟಾಗಿದ್ದು, 12 ಭಕ್ತರು ಮೃತಪಟ್ಟಿದ್ದಾರೆ. ಸ್ಥಳೀಯ ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ (Mata Vaishno Devi Narayana Superspeciality hospital) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಸ ವರ್ಷಾಚಣೆಗೆಂದು ಭಕ್ತರು ಭಾರೀ ಸಂಖ್ಯೆಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಜಮಾವಣೆಗೊಂಡಿದ್ದರು. ಮಧ್ಯರಾತ್ರಿ ದಾಟುತ್ತಿದ್ದಂತೆ ಜನ ವಿಪರೀತ ಸಂಖ್ಯೆಯಲ್ಲಿ ಮಂದಿರದತ್ತ ನುಗ್ಗಿ ಬಂದಾಗ ಈ ಕಾಲ್ತುಳಿತ ಸಂಭವಿಸಿದೆ.
ಕಾಲ್ತುಳಿತದಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರುವ ಸಂಭವವಿದೆ. ಜಮ್ಮು ಕಾಶ್ಮೀರದಲ್ಲಿರುವ ತ್ರಿಕೂಟ ಬೆಟ್ಟಗಳಲ್ಲಿ ಮಾತಾ ವೈಷ್ಣೋದೇವಿ ಮಂದಿರವಿದ್ದು (Mata Vaishno Devi shrine atop Trikuta hills) ಅಲ್ಲಿ ಈ ಅವಘಡ ಸಂಭವಿಸಿದೆ.
ಜಮ್ಮು-ಕಾಶ್ಮೀರ ಸರ್ಕಾರವು ವೈಷ್ಣೋದೇವಿ ದೇವಾಲಯದಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರಾರ್ಥವಾಗಿ ತಲಾ 10 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದೆ. ಜೊತೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ಇನ್ನು ಗಾಯಾಳುಗಳಿಗೆ ಜಮ್ಮು-ಕಾಶ್ಮೀರ ಸರ್ಕಾರದಿಂದ ₹ 2 ಲಕ್ಷ ರೂಪಾಯಿ ಮತ್ತು PMNRFನಿಂದ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಪ್ರಕಟಿಸಲಾಗಿದೆ.
ಒಂದು ಮಾಹಿತಿಯ ಪ್ರಕಾರ ವೈಷ್ಣೋದೇವಿ ಪುಣ್ಯಕ್ಷೇತ್ರದಲ್ಲಿ ಮಾತಾ ವೈಷ್ಣೋದೇವಿ ಭವನದ ಬಳಿ ಬೆಳಗಿನ ಜಾವ 2.45ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಭವನದಲ್ಲಿ ಜಮಾಯಿಸಿದ್ದ ಜನರ ನಡುವೆ ಗಲಾಟೆ ಶುರುವಾಗಿದೆ. ಮಾತಿಗೆ ಮಾತು ಬೆಳೆದು ತಳ್ಳಾಟ ಜೋರಾಗಿದೆ. ಮುಂದೆ ಅದು ಕಾಲ್ತುಳಿತ ಸಂಭವಿಸಲು ಕಾರಣವಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅತೀವ ದುಃಖ ವ್ಯಕ್ತಪಡಿಸಿದ್ದು, ಟ್ವೀಟ್ ಮಾಡಿದ್ದಾರೆ
ಜಮ್ಮು-ಕಾಶ್ಮೀರದ ವೈಷ್ಣೋದೇವಿ ದೇಗುಲದಲ್ಲಿ ಕಾಲ್ತುಳಿತದಲ್ಲಿ ಭಕ್ತರ ಸಾವಿನ ಸುದ್ದಿ ಕೇಳಿ ಅತೀವ ದುಃಖವಾಗಿದೆ ಎಂದು ಮೃತರಿಗೆ ಸಂತಾಪ ಸೂಚಿಸಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.
Extremely saddened by the loss of lives due to a stampede at Mata Vaishno Devi Bhawan. Condolences to the bereaved families. May the injured recover soon. Spoke to JK LG Shri @manojsinha_ Ji, Ministers Shri @DrJitendraSingh Ji, @nityanandraibjp Ji and took stock of the situation.
— Narendra Modi (@narendramodi) January 1, 2022
Injuries reported in a stampede at Mata Vaishno Devi Bhawan in Katra. Rescue operation underway: Police Control Room, Reasi pic.twitter.com/ex6vumreAF
— ANI (@ANI) January 1, 2022
Published On - 6:51 am, Sat, 1 January 22