ಹರ್ಯಾಣದ ನುಹ್‌ನಲ್ಲಿ ಹಿಂದೂ ಸಂಘಟನೆ ಆಯೋಜಿಸಿದ ಯಾತ್ರೆ ವೇಳೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ
ವರದಿಗಳ ಪ್ರಕಾರ, ನುಹ್ ಜಿಲ್ಲೆಯ ನಂದ್ ಗ್ರಾಮದ ಬಳಿ ಹಿಂದೂ ಸಂಘಟನೆಯ ಕಾರ್ಯಕರ್ತರು ನಡೆಸುತ್ತಿದ್ದ ರ್ಯಾಲಿಯ ಮೇಲೆ ಜನರ ಗುಂಪೊಂದು ಕಲ್ಲು ತೂರಾಟ ಮಾಡಿದೆ
ದೆಹಲಿ ಜುಲೈ 31: ಹರ್ಯಾಣದ (Haryana) ಮೇವಾತ್ ಪ್ರದೇಶದಲ್ಲಿ (Mewat region) ಸೋಮವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಕಲ್ಲು ತೂರಾಟ ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ವರದಿಗಳ ಪ್ರಕಾರ, ನುಹ್ ಜಿಲ್ಲೆಯ ನಂದ್ ಗ್ರಾಮದ ಬಳಿ ಹಿಂದೂ ಸಂಘಟನೆಯ ಕಾರ್ಯಕರ್ತರು ನಡೆಸುತ್ತಿದ್ದ ರ್ಯಾಲಿಯ ಮೇಲೆ ಜನರ ಗುಂಪೊಂದು ಕಲ್ಲು ತೂರಾಟ ಮಾಡಿದೆ. ಗೋರಕ್ಷಕ ಮತ್ತು ಭಿವಾನಿ ಸಾವಿನ ಪ್ರಕರಣದ(Bhiwani deaths case) ಆರೋಪಿ ಮೋನು ಮಾನೇಸರ್ ಮೇವಾತ್‌ಗೆ ಭೇಟಿ ನೀಡಿದ್ದರು ಎಂಬ ವರದಿಗಳ ಮೇಲೆ ಹಿಂಸಾಚಾರ ಭುಗಿಲೆದ್ದಿದೆ.
ಈ ವರ್ಷದ ಫೆಬ್ರವರಿಯಲ್ಲಿ ನಾಸಿರ್ ಮತ್ತು ಜುನೈದ್ ಸಾವಿನ ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಮೋನು ಮಾನೇಸರ್ ಹೆಸರನ್ನು ಉಲ್ಲೇಖಿಸಲಾಗಿದೆ. ಹರ್ಯಾಣದ ಭಿವಾನಿ ಜಿಲ್ಲೆಯ ಬೊಲೆರೊದಲ್ಲಿ ನಾಸಿರ್ ಮತ್ತು ಜುನೈದ್ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಜರಂಗದಳದ ಸದಸ್ಯರು ಮಾಡುವ ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮೋನು ಮಾನೇಸರ್ ಜನರಿಗೆ ಮನವಿ ಮಾಡಿದ್ದರು. ಆದರೆ, ಈ ಬಗ್ಗೆ ಆ ಪ್ರದೇಶದ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸೋಮವಾರ, ಯಾತ್ರೆಯನ್ನು ಆರಂಭಗೊಂಡಾಗ ಘರ್ಷಣೆಯುಂಟಾಗಿದ್ದು, ಕಲ್ಲು ತೂರಾಟದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
VIDEO | Several vehicles torched after clashes broke out between two groups in Haryana’s Mewat earlier today pic.twitter.com/fSX8bxxwYM
— Press Trust of India (@PTI_News) July 31, 2023
ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಕಲ್ಲು ತೂರಾಟದ ಘಟನೆಯನ್ನು ಖಚಿತಪಡಿಸಿದ್ದಾರೆ. ಪೊಲೀಸರಿಂದ ಸೂಕ್ತ ಅನುಮತಿ ಪಡೆದ ನಂತರ ವಿಶ್ವ ಹಿಂದೂ ಪರಿಷತ್ ಸದಸ್ಯರು ಮೇವಾತ್‌ನಲ್ಲಿ ಯಾತ್ರೆ ಕೈಗೊಂಡರು. ಆದರೆ, ಯಾತ್ರೆ ನಂದ ಗ್ರಾಮಕ್ಕೆ ತಲುಪಿದಾಗ ಇತರ ಸಮುದಾಯದ ಜನರು ಕಲ್ಲು ತೂರಾಟ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಎಲ್ಲ ಕಡೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎನ್ನುವ ಮೂಲಕ ಮಣಿಪುರದಲ್ಲಿನ ಘಟನೆ ಸಮರ್ಥಿಸುವುದು ಸರಿಯಲ್ಲ: ಸುಪ್ರೀಂಕೋರ್ಟ್
ಸಮೀಪದ ಜಿಲ್ಲೆಗಳಿಂದ ಪೊಲೀಸ್ ತಂಡಗಳನ್ನು ಮೇವಾತ್‌ಗೆ ನಿಯೋಜಿಸಲಾಗುತ್ತಿದೆ ಎಂದು ಹೇಳಿದ ಅವರು, ರಸ್ತೆಗಳನ್ನು ನಿರ್ಬಂಧಿಸಿರುವ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿರುವುದಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಜನರಲ್ಲಿ ಮನವಿ ಮಾಡಿದ್ದಾರೆ. ಏತನ್ಮಧ್ಯೆ, ಹರ್ಯಾಣ ನುಹ್ ಜಿಲ್ಲೆಯಲ್ಲಿ ಹಿಂಸಾಚಾರದಿಂದಾಗಿ ಆಗಸ್ಟ್ 2 ರವರೆಗೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:43 pm, Mon, 31 July 23