ರಾಂಚಿ: ಜಾರ್ಖಂಡ್‌ನ ದುಮ್ಕಾದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ (Rape) ನಡೆಸಿ, ನೇಣು ಹಾಕಿ ಕೊಲೆ (Murder) ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ (Hemant Soren) ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಇದೇನೂ ದೊಡ್ಡ ವಿಷಯವಲ್ಲ, ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಸಿಎಂ ಹೇಮಂತ್ ಸೊರೇನ್ ಹೇಳಿರುವುದಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
ದುಮ್ಕಾದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಹೇಮಂತ್ ಸೊರೇನ್, ಈ ರೀತಿಯ ಘಟನೆಗಳು ಎಲ್ಲ ಕಡೆಯೂ ನಡೆಯುತ್ತಲೇ ಇರುತ್ತವೆ. ಈ ರೀತಿ ಯಾವ ರಾಜ್ಯದಲ್ಲಿ ಆಗಿಲ್ಲ?ಇಂತಹ ಘಟನೆಗಳನ್ನು ಮೊದಲೇ ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Big News: ಜಾರ್ಖಂಡ್ ಬಿಕ್ಕಟ್ಟಿನ ನಡುವೆ ಇಂದು ವಿಶ್ವಾಸಮತ ಯಾಚನೆ; ಸಿಎಂ ಹೇಮಂತ್ ಸೊರೇನ್ ಭವಿಷ್ಯ ನಿರ್ಧಾರ
ಶುಕ್ರವಾರ ಜಾರ್ಖಂಡ್‌ನ ದುಮ್ಕಾದಲ್ಲಿ 14 ವರ್ಷದ ಬುಡಕಟ್ಟು ಬಾಲಕಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಶುಕ್ರವಾರ ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಿ, ಕೊಂದು ಮರಕ್ಕೆ ನೇಣು ಹಾಕಲಾಗಿದೆ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿ ದೂರು ನೀಡಿದ್ದರು. ಮದುವೆಯ ನೆಪದಲ್ಲಿ ಬಾಲಕಿಯ ಮೇಲೆ ವ್ಯಕ್ತಿಯೊಬ್ಬರು ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದರು.
“ದುಮ್ಕಾದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಮೃತ ಬಾಲಕಿ ಅಪ್ರಾಪ್ತ ವಯಸ್ಸಿನ ಬಾಲಕಿಯಾಗಿದ್ದಾಳೆ. ಆಕೆ ಬುಡಕಟ್ಟು ಜನಾಂಗದ ಹುಡುಗಿ. ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಂದ ಆರೋಪಿಯನ್ನು ಅರ್ಮಾನ್ ಅನ್ಸಾರಿ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಐಪಿಸಿ, ಎಸ್‌ಸಿ ಎಸ್‌ಟಿ ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ದುಮ್ಕಾ ಎಸ್ಪಿ ತಿಳಿಸಿದ್ದಾರೆ.
ಇದನ್ನೂ ಓದಿ: Breaking: ಜಾರ್ಖಂಡ್ ಮುಖ್ಯಮಂತ್ರಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಚುನಾವಣಾ ಆಯೋಗ
ಮತ್ತೊಂದೆಡೆ ಬಿಜೆಪಿ ಈ ಘಟನೆಗೆ ಸಂಬಂಧಿಸಿದಂತೆ ಜಾರ್ಖಂಡ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕಳೆದ ವಾರ ಹುಡುಗಿಯೊಬ್ಬಳನ್ನು ಸುಟ್ಟು ಹಾಕಲಾಯಿತು. ಈಗ ಬುಡಕಟ್ಟು ಹುಡುಗಿಯನ್ನು ಮರಕ್ಕೆ ನೇಣು ಹಾಕಲಾಗಿದೆ. ಆ ಬಾಲಕಿ ಗರ್ಭಿಣಿಯಾಗಿದ್ದಳು. ಅಂದರೆ, ಆಕೆಯ ಮೇಲೆ ಈ ಮೊದಲು ಕೂಡ ಅತ್ಯಾಚಾರ ನಡೆಸಲಾಗಿತ್ತು. ಆಕೆಯ ಸಾವಿಗೆ ಸರ್ಕಾರವೇ ನೇರ ಹೊಣೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವಂತೆ ಕಾಣುತ್ತಿದೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಟೀಕಿಸಿದ್ದಾರೆ.
Published On - 11:30 am, Mon, 5 September 22