ಸರ್ಕಾರದ ಪರ ಮಾತಾಡಿದ ನಟ-ಸಂಸದ ಸನ್ನಿ ದೇವಲ್​​ಗೆ ವೈ-ಶ್ರೇಣಿ ಭದ್ರತೆ

ಸರ್ಕಾರದ ಹೊಸ ಕಾಯ್ದೆಗಳು ರೈತರನ್ನು ಕೆರಳಿಸಿದ್ದು ಮೂರು ವಾರಗಳಿಂದ ಅವರು ದೆಹಲಿ ಹೊರವಲಯದಲ್ಲಿ ಭಾರಿ ಪ್ರಮಾಣದ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬಿನ ಗುರುದಾಸಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ 64 ವರ್ಷ ವಯಸ್ಸಿನ ಸನ್ನಿ, ಟ್ವೀಟ್ ಮಾಡಿ ಸರ್ಕಾರದ ಕ್ರಮವನ್ನು ಬೆಂಬಲಿಸಿದ್ದರು.

  • TV9 Web Team
  • Published On - 21:42 PM, 16 Dec 2020
ಸರ್ಕಾರದ ಪರ ಮಾತಾಡಿದ ನಟ-ಸಂಸದ ಸನ್ನಿ ದೇವಲ್​​ಗೆ ವೈ-ಶ್ರೇಣಿ ಭದ್ರತೆ
ಬಿಜೆಪಿ ಸಂಸದ ಸನ್ನಿ ಡಿಯೋಲ್

ಚಂಡೀಗಡ: ನೂತನ ಕೃಷಿ ಕಾನೂನುಗಳ ಪರ ಮಾತಾಡಿ ಉತ್ತರ ಭಾರತದ ರೈತರ ಕೋಪಕ್ಕೆ ಗುರಿಯಾಗಿರುವ ಬಾಲಿವುಡ್ ನಟ ಮತ್ತು ಬಿಜಿಪಿ ಸಂಸದ ಸನ್ನಿ ದೇವಲ್ ಅವರಿಗೆ ನೀಡಿದ್ದ ಭದ್ರತೆಯನ್ನು ಕೇಂದ್ರ ಸರ್ಕಾರದ ವೈ-ಕೆಟೆಗಿರಿಗೆ ಹೆಚ್ಚಿಸಿದೆ. ಸರ್ಕಾರದ ಹೊಸ ಕಾಯ್ದೆಗಳು ರೈತರನ್ನು ಕೆರಳಿಸಿದ್ದು ಮೂರು ವಾರಗಳಿಂದ ಅವರು ದೆಹಲಿ ಹೊರವಲಯದಲ್ಲಿ ಭಾರಿ ಪ್ರಮಾಣದ ಪ್ರತಿಭಟನೆ ನಡೆಸುತ್ತಿದ್ದಾರೆ.

ಪಂಜಾಬಿನ ಗುರುದಾಸಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ 64 ವರ್ಷ ವಯಸ್ಸಿನ ಸನ್ನಿ, ಟ್ವೀಟ್ ಮಾಡಿ ಸರ್ಕಾರದ ಕ್ರಮವನ್ನು ಬೆಂಬಲಿಸಿದ್ದರು.

‘ರೈತರು ನಡೆಸುತ್ತಿರುವ ಮುಷ್ಕರವನ್ನು ಬಹಳ ಜನರು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ತೊಂದರೆ ಸೃಷ್ಟಿಸುತ್ತಿರುವುದು ನನಗೆ ಗೊತ್ತಿದೆ. ಅವರಿಗೆ ತಮ್ಮ ಸ್ವಾರ್ಥಸಾಧನೆಯ ಯೋಚನೆಯಿದೆಯೇ ಹೊರತು ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ನಾನು ಯಾವತ್ತಿಗೂ ಪಕ್ಷ ಮತ್ತು ರೈತರೊಂದಿಗಿದ್ದೇನೆ. ನಮ್ಮ ಸರ್ಕಾರ ಹಗಲಿರುಳು ರೈತರ ಹಿತಾಸಕ್ತಿಗಳ ಕುರಿತೇ ಯೋಚಿಸುತ್ತದೆ. ರೈತರೊಂದಿಗೆ ಮಾತುಕತೆ ನಡೆಸಿ ಆದಷ್ಟು ಬೇಗ ಸರ್ಕಾರ ಸಮಸ್ಯೆಯನ್ನು ಇತ್ಯರ್ಥಗೊಳಿಸುತ್ತದೆಂಬ ವಿಶ್ವಾಸ ನನಗಿದೆ’ ಎಂದು ಸನ್ನಿ ಟ್ವೀಟ್ ಮಾಡಿದ್ದರು.

ಧರ್ಮೇಂದ್ರ ಮತ್ತು ಹೇಮಾ ಮಾಲಿನಿ

ಸನ್ನಿ ಅವರ ಟ್ವೀಟ್​ ನಂತರ ಅವರ ತಂದೆ, ಲೆಜೆಂಡರಿ ಬಾಲಿವುಡ್ ನಟ ಮತ್ತು 2004 ರಿಂದ 2009 ರವರೆಗೆ ಬಿಜೆಪಿಯ ಸಂಸದರಾಗಿದ್ದ ಧರ್ಮೇಂದ್ರ, ‘ರೈತರ ಅನುಭವಿಸುತ್ತಿರುವ ತೊಂದರೆ ನನ್ನಲ್ಲಿ ತೀವ್ರ ಕಳವಳವನ್ನುಂಟು ಮಾಡಿವೆ’ ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಮುಂಚಿನ ಟ್ವೀಟ್​ನಲ್ಲಿ ಧರ್ಮೇಂದ್ರ, ರೈತರ ಪರ ವಹಿಸಿ ಮಾತಾಡುತ್ತಾ, ಸರ್ಕಾರ ಆದಷ್ಟು ಬೇಗ ಸಮಸ್ಯೆಯನ್ನು ಇತ್ಯರ್ಥಗೊಳಿಸಬೇಕೆಂದು ಹೇಳಿದ್ದರು. ಆದರೆ ಅದು ಟ್ರೋಲ್ ಆಗಲಾರಂಭಿಸಿದ ಕೂಡಲೇ ಡಿಲೀಟ್ ಮಾಡಿದ್ದರು. ಅವರ ತಾರಾಪತ್ನಿ ಮತ್ತು ಬಿಜೆಪಿ ಸಂಸದೆಯೂ ಆಗಿರುವ ಹೇಮಾ ಮಾಲಿನಿ ಸದರಿ ವಿಷಯದ ಬಗ್ಗೆ ಇದುವರೆಗೆ ಮೌನ ತಳೆದಿದ್ದಾರೆ.

ದೆಹಲಿ ಹೊರಭಾಗದಲ್ಲಿ ಮುಷ್ಕರ ನಿರತ ರೈತರು

ನೂತನ ಕೃಷಿ ಕಾಯ್ದೆಗಳು ಮಾರಕವಾಗಿವೆ, ಕಾರ್ಪೊರೇಟ್​ಗಳ ಕಪಿಮುಷ್ಟಿಗೆ ಸಿಕ್ಕು ಶೋಷಣೆಗೊಳಬೇಕಾಗುತ್ತದೆ ಎಂದು ವಾದಿಸುತ್ತಿರುವ ರೈತರು, ಮೂರು ವಾರಗಳಿಂದ ಅಹೋರಾತ್ರಿ ಮುಷ್ಕರ ನಡೆಸುತ್ತಿದ್ದಾರೆ.