ನೂತನ ಸಂಸತ್ ಭವನದ ಶಿಲಾನ್ಯಾಸಕ್ಕೆ ಅಸ್ತು ಎಂದ ಸುಪ್ರೀಂಕೋರ್ಟ್
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸೋಮವಾರ ನಡೆಸಿದ ವಿಚಾರಣೆಯ ವೇಳೆ ಈ ಯೋಜನೆಗೆ ಪರಿಸರ ಇಲಾಖೆಯ ಅನುಮತಿ ಸೇರಿದಂತೆ ಇನ್ನಿತರ ಪ್ರಶ್ನೆಗಳನ್ನು ಆಧಾರವಾಗಿಟ್ಟುಕೊಂಡು 5 ನಿಮಿಷಗಳ ಕಾಲ ನೂತನ ಸಂಸತ್ ಭವನದ ನಿರ್ಮಾಣದ ಕುರಿತು ಸರ್ಕಾರದ ದೃಷ್ಟಿಕೋನವನ್ನು ತಿಳಿಸುವಂತೆ ನ್ಯಾಯಪೀಠ ಮೆಹ್ತಾ ಅವರನ್ನು ಕೇಳಿತು. ಇದರ ಜೊತೆಗೆ ಕೇಂದ್ರ ಸರ್ಕಾರ ಅಗತ್ಯ ದಾಖಲೆಗಳೊಂದಿಗೆ ಮುಂದುವರಿಯಬಹುದು ಎಂದು ನ್ಯಾಯಾಲಯ ತಿಳಿಸಿದೆ.
ದೆಹಲಿ: ಸಂಸತ್ತಿನ ನೂತನ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲು ಸುಪ್ರೀಂಕೋರ್ಟ್ ಸೋಮವಾರ ಅನುಮತಿ ನೀಡಿದೆ. ಈ ಕುರಿತು ಬಾಕಿ ಇರುವ ದಾವೆಗಳ ವಿಚಾರಣೆ ಮುಕ್ತಾಯವಾವವರೆಗೂ ಯಾವುದೇ ರೀತಿಯ ನಿರ್ಮಾಣ ಅಥವಾ ತೆರವು ಕೆಲಸಗಳು ನಡೆಸುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದ ನಂತರ ಕೇಂದ್ರ ಸರ್ಕಾರದ ವಿಸ್ಟಾ ಯೋಜನೆಯ ಅಡಿಯಲ್ಲಿ ಸಂಸತ್ನ ನೂತನ ಭವನದ ಶಿಲಾನ್ಯಾಸಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿತು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸದ್ಯಕ್ಕೆ ಶಂಕುಸ್ಥಾಪನೆ ಸಮಾರಂಭ ಮಾತ್ರ ನಡೆಯಲ್ಲಿದೆ. ಯಾವುದೇ ನಿರ್ಮಾಣ, ತೆರವು ಮತ್ತು ಮರಗಳನ್ನು ಕಡಿತ ಮಾಡುವುದಿಲ್ಲ ಎಂದು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
ನೂತನ ಸಂಸತ್ ಭವನ ನಿರ್ಮಾಣ ಕುರಿತು ಪರಿಸರ ಇಲಾಖೆಯ ಅನುಮತಿ ವಿಚಾರವೂ ಸೇರಿದಂತೆ ಸರ್ಕಾರದ ದೃಷ್ಟಿಕೋನವನ್ನು ತಿಳಿಸುವಂತೆ ಮೆಹ್ತಾ ಅವರನ್ನು ನ್ಯಾಯಪೀಠ ಕೇಳಿತು. ಕೋರ್ಟ್ ಕೇಳಿದ ಎಲ್ಲಾ ಪ್ರಶ್ನೆಗೂ ಮೇಹ್ತಾ ಉತ್ತರ ನೀಡಿದ್ದು, ಸಂಸತ್ತಿನ ನೂತನ ಭವನದ ನಿರ್ಮಾಣಕ್ಕೆ ತರಾತುರಿಯಲ್ಲಿ ಕ್ರಮಗಳನ್ನು ಕೈಗೊಂಡಿಲ್ಲ. ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಡಿ.10 ರಂದು ಸಂಸತ್ತಿನ ಹೊಸ ಭವನಕ್ಕೆ ಶಿಲಾನ್ಯಾಸ ಮಾಡಲಿದ್ದಾರೆ. ಹೊಸ ಕಟ್ಟಡವು 64,500 ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು, ₹ 971 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ 2000 ಜನರು ನೇರವಾಗಿ ಮತ್ತು 9000 ಸಾವಿರ ಜನರು ಪರೋಕ್ಷವಾಗಿ ಭಾಗಿಯಾಗಲಿದ್ದಾರೆ. ಶಿಲಾನ್ಯಾಸ ಕಾರ್ಯಕ್ರಮಕ್ಕೆ ಎಲ್ಲಾ ರಾಜಕೀಯ ಪಕ್ಷಗಳಿಗೂ ಆಹ್ವಾನ ನೀಡಲಾಗಿದ್ದು, ಕೊರೊನಾ ಸಂಬಂಧಿತ ಮಾರ್ಗಸೂಚಿಗಳ ಆಧಾರದಲ್ಲಿ ಮಧ್ಯಾಹ್ನ 1 ಗಂಟೆಗೆ ಶಿಲಾನ್ಯಾಸ ಮಾಡಲಾಗುತ್ತದೆ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದ್ದರು.
Published On - 5:36 pm, Mon, 7 December 20