ದೆಹಲಿ, ಜು.28: ಭಾರತದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (DY Chandrachud) ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಅವರು ಇಂದು ಯಾವುದೇ ಪ್ರಕರಣದ ಬಗ್ಗೆ ವಿಚಾರಣೆ ನಡೆಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ನಿಂದ ಅಧಿಕೃತ ಪತ್ರವೊಂದನ್ನು ಹೊರಡಿಸಲಾಗಿದೆ. ಈ ಪತ್ರದಲ್ಲಿ ತಿಳಿಸಿರುವಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು 28.7.2023ರಂದು ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವುದಿಲ್ಲ. ಮುಖ್ಯ ನ್ಯಾಯಮೂರ್ತಿ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠದ ವ್ಯಾಪ್ತಿಗೆ ಬರುವ ಯಾವುದೇ ಪ್ರಕರಣದ ಬಗ್ಗೆ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಿಲ್ಲ. ಇಂದು ನಡೆಯಬೇಕಿದ್ದ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರು ಈಗ ಏಕಸದಸ್ಯ ಪೀಠದ ವಿಚಾರಣೆಯನ್ನು ಮಾತ್ರ ಕೈಗೆತ್ತಿಕೊಳ್ಳಲಿದ್ದಾರೆ. ಅಂದರೆ 28.07.2023ರಂದು ನ್ಯಾಯಾಲಯದ 10ನೇ ಕೊಠಡಿಯಲ್ಲಿ 11.30ಗೆ ವರ್ಗಾವಣೆ ಅರ್ಜಿಗಳನ್ನು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ವೇತನ, ಸರ್ಕಾರಿ ಸೌಲಭ್ಯಗಳೇನು?
1. ಮಣಿಪುರ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದ ಮತ್ತು ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವೈರಲ್ ವೀಡಿಯೊದ ಪ್ರಕರಣದ ಕುರಿತು ವಿಚಾರಣೆ ನಡೆಸಬೇಕಿತ್ತು.
2. ಮನಿ ಲಾಂಡರಿಂಗ್ ಪ್ರಕರಣದಲ್ಲಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ರುಜಿರಾ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಬೇಕಿತ್ತು.
3. ಬೇರೆ ಬೇರೆ ಹತ್ಯೆ ಪ್ರಕರಣಗಳ ಬಗ್ಗೆ ಇಂದು ವಿಚಾರಣೆ ನಡೆಸಬೇಕಿತ್ತು. ಅದರಲ್ಲಿ ಒಂದು ಕುಖ್ಯಾತ ನಿಥಾರಿ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮೊನೀಂದರ್ ಸಿಂಗ್ ಪಂಧೇರ್ ಅವರ ಮನವಿಯನ್ನು ನ್ಯಾಯಾಲಯವು ವಿಚಾರಣೆಗೆ ನಿಗದಿಪಡಿಸಿತ್ತು.
4. ಇನ್ನೂ ಹಲವು ಪ್ರಮುಖ ಪ್ರಕರಣದ ಕುರಿತು ವಿಚಾರಣೆ ಮತ್ತು ಆದೇಶಗಳನ್ನು ನೀಡಬೇಕಿತ್ತು ಎಂದು ಹೇಳಲಾಗಿದೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ