ದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಏಪ್ರಿಲ್ನಲ್ಲಿ ನಿವೃತ್ತಿಯಾಗಲಿದ್ದು, ಅವರ ನಂತರ ಸಿಜೆಐ ಸ್ಥಾನವನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ. ಈ ಮಧ್ಯೆ ಎಸ್. ಎ.ಬೊಬ್ಡೆ ತಮ್ಮ ಉತ್ತರಾಧಿಕಾರಿಯನ್ನಾಗಿ ಎನ್. ವಿ.ರಮಣ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಬೋಬ್ಡೆ 2019ರ ನವೆಂಬರ್ 18ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಏಪ್ರಿಲ್ 23ರಂದು ನಿವೃತ್ತರಾಗಲಿದ್ದಾರೆ. ನಿಮ್ಮ ಉತ್ತರಾಧಿಕಾರಿಯನ್ನಾಗಿ ಯಾರ ಹೆಸರನ್ನು ಹೇಳುತ್ತೀರಿ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿದ ಬೋಬ್ಡೆ ಎನ್ವಿ ರಮಣ ಹೆಸರನ್ನೇ ಸ್ಪಷ್ಟಪಡಿಸಿದ್ದಾರೆ.
ಮುಂದಿನ ಸಿಜೆಐ ಹುದ್ದೆಗೆ ನ್ಯಾಯಮೂರ್ತಿ ರಮಣ (64) ಅವರ ಹೆಸರೇ ಬಲವಾಗಿ ಕೇಳಿಬರುತ್ತಿದ್ದು, ಇವರು ಮೂಲತಃ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯವರು. 1983ರ ಫೆಬ್ರವರಿ 10ರಿಂದ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು. 2000 ರ ಜೂನ್ 27ರಿಂದ-2013ರ ಸೆಪ್ಟೆಂಬರ್ 1ರವರೆಗೆ ಆಂಧ್ರಪ್ರದೇಶ ಹೈಕೋರ್ಟ್ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದ ರಮಣ ಅವರನ್ನು, 2013ರ ಸೆಪ್ಟೆಂಬರ್ 2ರಂದು ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಯಿತು. 2014ರ ಫೆಬ್ರವರಿ 16ರವರೆಗೆ ಇದೇ ಹುದ್ದೆಯಲ್ಲಿ ಮುಂದುವರಿದರು. ಈ ಮಧ್ಯೆ 2013ರ ಮಾರ್ಚ್ 10ರಿಂದ ಮೇ 20ರವರೆಗೆ ಆಂಧ್ರಪ್ರದೇಶ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿ ಹುದ್ದೆಯನ್ನೂ ಎನ್.ವಿ.ರಮಣ ಅವರೇ ನಿಭಾಯಿಸಿದ್ದರು.
ಅದಾದ ಬಳಿಕ 2014ರ ಫೆಬ್ರವರಿ 17ರಂದು ಸುಪ್ರಿಂಕೋರ್ಟ್ ಜಡ್ಜ್ ಆಗಿ ನೇಮಕಗೊಂಡಿದ್ದಾರೆ. 2022ರ ಆಗಸ್ಟ್ 22ಕ್ಕೆ ನಿವೃತ್ತಿಯಾಗಲಿದ್ದಾರೆ. ಇವರೀಗ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದರೆ ಒಂದು ವರ್ಷದವರೆಗೆ ಹುದ್ದೆಯಲ್ಲಿ ಮುಂದುವರಿಯಬಹುದಾಗಿದೆ. ಇನ್ನು ಬೋಬ್ಡೆಯವರ ನಂತರ ಇರುವ ಅತ್ಯಂತ ಹಿರಿಯ ನ್ಯಾಯಮೂರ್ತಿಗಳೂ ಎನ್.ವಿ.ರಮಣ ಅವರೇ ಆಗಿದ್ದಾರೆ.
ವಿವಾದಕ್ಕೂ ಒಳಪಟ್ಟಿದ್ದರು
ಕಳೆದವರ್ಷ ಅಕ್ಟೋಬರ್ನಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಮತ್ತು ಎನ್.ವಿ.ರಮಣ ಮಧ್ಯೆ ವಿವಾದವೊಂದು ಎದ್ದಿತ್ತು. ಜಗನ್ ಮೋಹನ್ ರೆಡ್ಡಿಯವರು ರಮಣ ವಿರುದ್ಧ ಗಂಭೀರ ಆರೋಪ ಮಾಡಿ, ಸಿಜೆಐ ಬೋಬ್ಡೆಯವರಿಗೆ ಪತ್ರ ಬರೆದಿದ್ದರು. ನ್ಯಾ. ರಮಣ ಅವರು ಆಂಧ್ರಪ್ರದೇಶ ಹೈಕೋರ್ಟ್ನ ಕಾರ್ಯದಲ್ಲಿ, ಇಲ್ಲಿನ ನ್ಯಾಯಮೂರ್ತಿಗಳ ಸಭೆಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ತಮ್ಮ ಮೇಲಿನ ಆರೋಪಕ್ಕೆ ರಮಣ ಅವರು ಶಾಂತವಾಗಿಯೇ ಪ್ರತಿಕ್ರಿಯೆ ನೀಡಿದ್ದರು. ಎಲ್ಲ ಒತ್ತಡಗಳು, ಅಡೆತಡೆಗಳನ್ನು ಧೈರ್ಯವಾಗಿ ಎದುರಿಸುವ ಸ್ವಭಾವವನ್ನು ಪ್ರತಿ ನ್ಯಾಯಾಧೀಶರೂ ಅಳವಡಿಸಿಕೊಳ್ಳುವುದು ತುಂಬ ಮುಖ್ಯ ಎಂದಿದ್ದರು.