ನವದೆಹಲಿ: ಕರ್ನಾಟಕ, ಕೊಲ್ಕತ್ತಾ, ಪಂಜಾಬ್, ಕೇರಳ ಸೇರಿದಂತೆ ಭಾರತದ 12 ರಾಜ್ಯಗಳ ಹೈಕೋರ್ಟ್‌ಗಳಿಗೆ 68 ನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ .ವಿ ರಮಣ ನೇತೃತ್ವದ ಕೊಲಿಜಿಯಂ ಶಿಫಾರಸು ಮಾಡಿತ್ತು. ಇದೇ ಮೊದಲ ಬಾರಿಗೆ ದಾಖಲೆಯ ಪ್ರಮಾಣದ ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡಲಾಗಿದೆ. ಈ ಬಗ್ಗೆ ಇಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದ ವೇದಿಕೆ ಮೇಲೂ ಪುನರುಚ್ಛಾರ ಮಾಡಿದ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ, ನಾವು ನೀಡಿರುವ ಶಿಫಾರಸುಗಳನ್ನು ಶೀಘ್ರದಲ್ಲೇ ಕೇಂದ್ರ ಸರ್ಕಾರ ಜಾರಿಗೆ ತರಲಿದೆ ಎಂಬ ವಿಶ್ವಾಸವಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕದ ಸಂದರ್ಭದಲ್ಲೇ 68 ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯನ್ನು ಕೂಡ ಪೂರ್ಣಗೊಳಿಸುವ ವಿಶ್ವಾಸವಿದೆ. ಇದೇ ವೇದಿಕೆಯಲ್ಲಿ ಕೇಂದ್ರ ಕಾನೂನು ಸಚಿವ ಕಿರೆಣ್ ರಿಜಿಜು ಕೂಡ ಇದ್ದಾರೆ. ಅವರು ಈ ಕುರಿತು ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಬಹಳ ಕಿರಿಯ ಮತ್ತು ಪ್ರತಿಭಾವಂತ ಕಾನೂನು ಸಚಿವರಿದ್ದಾರೆ. ಅವರ ಮುಂದಾಳತ್ವದಲ್ಲಿ ಕೆಲಸಗಳು ಅತ್ಯಂತ ತ್ವರಿತಗತಿಯಲ್ಲಿ ಆಗಲಿದೆ ಎಂಬ ನಿರೀಕ್ಷೆಯಿದೆ. ನಾನು ಮೊದಲು ಕಾನೂನು ಸಚಿವ ಕಿರೆಣ್ ರಿಜಿಜು ಅವರನ್ನು ಭೇಟಿಯಾದಾಗ ಅವರು ಕಾಲೇಜು ವಿದ್ಯಾರ್ಥಿ ಎಂದುಕೊಂಡಿದ್ದೆ. ಅವರು ನೋಡಲು ಇನ್ನೂ ವಿದ್ಯಾರ್ಥಿಯಂತೇ ಇದ್ದಾರೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ತಮಾಷೆ ಮಾಡಿದ್ದಾರೆ.
ಕರ್ನಾಟಕ, ಅಲಹಾಬಾದ್, ರಾಜಸ್ಥಾನ, ಕೊಲ್ಕತ್ತಾ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಮದ್ರಾಸ್, ಮಧ್ಯಪ್ರದೇಶ, ಪಂಜಾಬ್ ಮತ್ತು ಹರಿಯಾಣ, ಕೇರಳ, ಛತ್ತಿಸ್ಗಢ ಮತ್ತು ಅಸ್ಸಾಂ ಹೈಕೋರ್ಟ್ ಗಳಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ಶಿಫಾರಸು ಮಾಡಲಾಗಿದೆ.
ಆಗಸ್ಟ್ 25 ಮತ್ತು ಸೆಪ್ಟೆಂಬರ್ 1 ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ಮೂರು ಜನರ ಕೊಲಿಜಿಯಂ ಏಕಕಾಲದಲ್ಲಿ 68 ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡಿತ್ತು. ಈ 68 ನ್ಯಾಯಮೂರ್ತಿಗಳ ಪೈಕಿ 10 ಮಹಿಳಾ ನ್ಯಾಯಮೂರ್ತಿಗಳ ಹೆಸರನ್ನು ಕೂಡ ಶಿಫಾರಸು ಮಾಡಲಾಗಿತ್ತು. ಇದರಲ್ಲಿ ಬಾರ್ ಅಸೋಸಿಯೇಷನ್ನಿಂದ ಬಂದ 44 ಹೆಸರುಗಳು, ನ್ಯಾಯಾಂಗ ಸೇವೆಯಿಂದ ಬಂದ 24 ಹೆಸರುಗಳಿದ್ದವು.
ಭಾರತದಲ್ಲಿ ಇದೇ ಮೊದಲ ಬಾರಿಗೆ ಏಕಕಾಲಕ್ಕೆ ದಾಖಲೆಯ 68 ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡಲಾಗಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ. ರಮಣ, ನ್ಯಾಯಮೂರ್ತಿ ಯು.ಯು. ಲಲಿತ್ ಮತ್ತು ನ್ಯಾಯಮೂರ್ತಿ ಎ.ಎಂ ಖಾನ್ವಿಲ್ಕರ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಕೊಲಿಜಿಯಂ ಭಾರತದ 12 ಹೈಕೋರ್ಟ್‌ಗಳಿಗೆ 68 ನ್ಯಾಯಮೂರ್ತಿಗಳ ಹೆಸರನ್ನು ಶಿಫಾರಸು ಮಾಡಿದೆ. ಹೈಕೋರ್ಟ್ಗಳಲ್ಲಿ ಸುಮಾರು 60 ಲಕ್ಷ ಕೇಸುಗಳ ವಿಚಾರಣೆ ಬಾಕಿ ಉಳಿದಿರುವುದರಿಂದ ತ್ವರಿತವಾಗಿ ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡಲಾಗಿದೆ.
ಇದನ್ನೂ ಓದಿ: ಇತಿಹಾಸದಲ್ಲೇ ಮೊದಲು: ಸುಪ್ರೀಂಕೋರ್ಟ್ಗೆ ನೇಮಕವಾದ 9 ನ್ಯಾಯಮೂರ್ತಿಗಳಿಂದ ಒಟ್ಟಿಗೇ ಪ್ರಮಾಣವಚನ ಸ್ವೀಕಾರ
ಸುಪ್ರೀಂಕೋರ್ಟ್ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರಾ ಕರ್ನಾಟಕ ಮೂಲದ ನ್ಯಾ. ಬಿ.ವಿ.ನಾಗರತ್ನ?
(Supreme Court Collegium clears 68 Judges name for 12 High Courts CJI NV Ramana requests Law Minister)