
ನವದೆಹಲಿ, ಅಕ್ಟೋಬರ್ 13: ಕಳೆದ ತಿಂಗಳು ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ (Actor Vijay) ಅವರ ರಾಜಕೀಯ ಸಮಾವೇಶದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಘಟನೆಯ ತನಿಖೆಯನ್ನು ಸಿಬಿಐ ನಡೆಸಲಿದೆ. ಈ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ಸುಪ್ರೀಂಕೋರ್ಟ್ (Supreme Court) ಸೋಮವಾರ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎನ್.ವಿ. ಅಂಜಾರಿಯಾ ಅವರಿಬ್ಬರ ಸರ್ವೋಚ್ಚ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಇದೇ ವೇಳೆ, ಸುಪ್ರೀಂಕೋರ್ಟ್ ಈ ಪ್ರಕರಣದ ಮೇಲ್ವಿಚಾರಣೆ ನಡೆಸಲು ಮೂರು ಸದಸ್ಯರ ಮಂಡಳಿಯನ್ನು ರಚಿಸಿದೆ. ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರಿಗೆ ಈ ಮಂಡಳಿಯ ನೇತೃತ್ವ ವಹಿಸಲಾಗಿದೆ. ಈ ಪ್ರಕರಣದಲ್ಲಿ ಸಿಬಿಐ ತನಿಖೆಯ ಮೇಲೆ ನಿಗಾ ಇಡುವಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ನ್ಯಾ| ರಸ್ತೋಗಿ ಅವರಿಗೆ ಕೋರ್ಟ್ ಮನವಿ ಮಾಡಿದೆ.
ಇದನ್ನೂ ಓದಿ: ‘ಮಗಳು ಮಧ್ಯರಾತ್ರಿ ನಂತರ ಆಚೆ ಹೋಗಿದ್ದಲ್ಲ, ಸಿಎಂ ಮಮತಾ ಹೇಳಿದ್ದು ಸುಳ್ಳು’- ಅತ್ಯಾಚಾರ ಸಂತ್ರಸ್ತೆಯ ತಂದೆ ಹೇಳಿಕೆ
ಸೆಪ್ಟೆಂಬರ್ 27ರಂದು ಸ್ಟಾರ್ ನಟ ವಿಜಯ್ ಅವರು ತಮ್ಮ ಹೊಸ ರಾಜಕೀಯ ಪಕ್ಷದ ಸಮಾವೇಶವನ್ನು ಕರೂರಿನಲ್ಲಿ ಆಯೋಜಿಸಿದ್ದರು. 10,000 ಜನರು ಬರುವ ನಿರೀಕ್ಷೆ ಇತ್ತು. ಆದರೆ, 27,000 ಜನರು ಸೇರಿದ್ದರು. ಈ ವೇಳೆ ನೂಕುನುಗ್ಗಲು ಹೆಚ್ಚಾಗಿ, ಕಾಲ್ತುಳಿತ ಸಂಭವಿಸಿ 41 ಮಂದಿ ಬಲಿಯಾಗಿದ್ದರು.
ನಟ ವಿಜಯ್ ತಡವಾಗಿ ಬಂದಿದ್ದೇ ಕಾಲ್ತುಳಿತಕ್ಕೆ ಕಾರಣ ಎನ್ನುವುದು ಪೊಲೀಸರ ಮತ್ತು ತಮಿಳುನಾಡು ಸರ್ಕಾರದ ವಾದ. ಆದರೆ, ನಟ ವಿಜಯ್ ಹಾಗೂ ಇತರರು ಈ ಘಟನೆಯನ್ನು ಸ್ವತಂತ್ರ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸುತ್ತಾ ಬಂದಿದ್ದರು. ಮದ್ರಾಸ್ ಹೈಕೋರ್ಟ್ನಿಂದ ಎಸ್ಐಟಿ ತನಿಖೆಗೆ ನೀಡಲಾಗಿದ್ದ ನಿರ್ದೇಶನವನ್ನು ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷ ಆಕ್ಷೇಪಿಸಿತ್ತು.
ಇದನ್ನೂ ಓದಿ: ಬಿಹಾರ ಚುನಾವಣೆ: ಸಮಾನ ಕ್ಷೇತ್ರಗಳಲ್ಲಿ ಬಿಜೆಪಿ – ಜೆಡಿಯು ಸ್ಪರ್ಧೆ
ಈ ಎಲ್ಲಾ ಅರ್ಜಿಗಳನ್ನು ಆಲಿಸಿದ ಸುಪ್ರೀಂಕೋರ್ಟ್ ಇದೀಗ ತನಿಖೆಯನ್ನು ಸಿಬಿಐ ವಹಿಸಿ ಆದೇಶ ಹೊರಡಿಸಿದೆ. ಕಾಲ್ತುಳಿತಕ್ಕೆ ನಿಜವಾದ ಕಾರಣ ಏನು ಎಂಬುದು ತನಿಖೆಯಿಂದ ಬೆಳಕಿಗೆ ಬರುವ ನಿರೀಕ್ಷೆ ಇದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:55 pm, Mon, 13 October 25