ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಎನ್.ವಿ.ರಮಣ ವಿರುದ್ಧ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ನೀಡಿದ್ದ ದೂರಿನ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಈ ಹಿಂದೆ ಆಂಧ್ರಪ್ರದೇಶ ಹೈಕೋರ್ಟ್ನ ಮುಖ್ಯ ನಾಯಮೂರ್ತಿಯೂ ಆಗಿದ್ದ ರಮಣ ಅವರು, ಈಗ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿದ್ದಾರೆ. ಆದರೆ ಈಗಲೂ ಆಂಧ್ರಪ್ರದೇಶ ಸರ್ಕಾರವನ್ನು ಅಸ್ಥಿರಗೊಳಿಸಲು, ಇಲ್ಲಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಜಗನ್ ರೆಡ್ಡಿ ದೂರಿನಲ್ಲಿ ತಿಳಿಸಿದ್ದರು. ಇದು ಅಮಾರವತಿ ಭೂ ಹಗರಣಕ್ಕೆ ಸಂಬಂಧ ಪ್ರಕರಣವಾಗಿತ್ತು. ಇದೀಗ ಅರ್ಜಿಯನ್ನು ವಜಾಗೊಳಿಸಿದ್ದಾಗಿ ಸುಪ್ರೀಂಕೋರ್ಟ್ ವೆಬ್ಸೈಟ್ನಲ್ಲಿ ಪ್ರಕಟವಾಗಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರ ದೂರಿನ ಬಗ್ಗೆ ಗೌಪ್ಯ ವಿಚಾರಣೆ ನಡೆಸಲಾಗಿದೆ. ಇಲ್ಲಿ ನಡೆದ ವಿಚಾರಣೆಗಳನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಲು ಸಾಧ್ಯವಿಲ್ಲ. ಅರ್ಜಿಯಲ್ಲಿ ಉಲ್ಲೇಖವಾದ ವಿಚಾರಗಳ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಲಾಗಿದೆ. ಈ ಬಳಿಕವಷ್ಟೇ ದೂರಿನ ಅರ್ಜಿ ವಜಾಗೊಳಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಏನಿದು ದೂರು? ಪ್ರಕರಣ?
ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ನಡೆದಿದೆ ಎಂದು ಆರೋಪಿಸಲಾದ ಅಮರಾವತಿ ಭೂ ಹಗರಣದ ಪ್ರಕರಣ ವಿಚಾರಣೆ ಆಂಧ್ರಪ್ರದೇಶದ ಹೈಕೋರ್ಟ್ ಮೆಟ್ಟಿಲೇರಿದೆ. ಆದರೆ ಇದರ ವಿಚಾರಣೆ ಸರಿಯಾಗಿ ಆಗುತ್ತಿಲ್ಲ ಎಂಬುದು ಈಗಿನ ಸಿಎಂ ಜಗನ್ ಅವರ ಆರೋಪ. ಎನ್.ವಿ.ರಮಣ ಅವರು ಚಂದ್ರಬಾಬು ನಾಯ್ಡು ಅವರಿಗೆ ಆಪ್ತರಾಗಿದ್ದು, ಅಮರಾವತಿ ಭೂಹಗರಣ ವಿಚಾರಣೆ ಪಾರದರ್ಶಕವಾಗಿ ನಡೆಯಲು ಬಿಡುತ್ತಿಲ್ಲ. ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಯಾಗಿದ್ದುಕೊಂಡು, ಆಂಧ್ರಪ್ರದೇಶ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಹೈಕೋರ್ಟ್ ನ್ಯಾಯಾಧೀಶರುಗಳ ಸಭೆಗಳ ಮೇಲೆ ಕೂಡ ಪ್ರಭಾವ ಬೀರುತ್ತಿದ್ದಾರೆ. ಈ ಮೂಲಕ ತಮಗೆ ಬೇಕಾದಂತೆ ಜಡ್ಜ್ಮೆಂಟ್ಗಳನ್ನು ಹೊರಗೆ ತರುತ್ತಿದ್ದಾರೆ ಎಂದು ಆರೋಪಿಸಿ ಜಗನ್ 2020 ರ ಆಕ್ಟೋಬರ್ 6ರಂದು ಸಿಜೆಐ ಬೋಬ್ಡೆ ಅವರಿಗೆ ಪತ್ರ ಬರೆದಿದ್ದರು. ಹೀಗೆ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಯೊಬ್ಬರ ವಿರುದ್ಧ ಸಿಎಂ, ಮುಖ್ಯನ್ಯಾಯಮೂರ್ತಿಗೆ ಪತ್ರ ಬರೆದಿದ್ದು, ದೇಶದ ನ್ಯಾಯಾಂಗ ಇತಿಹಾಸದಲ್ಲೇ ಮಹತ್ವದ ಬೆಳವಣಿಗೆಯಾಗಿತ್ತು.
ಸುಪ್ರೀಂಕೋರ್ಟ್ನ ಮುಂದಿನ ಸಿಜೆಐ ರಮಣ?
ಇನ್ನು ಎನ್.ವಿ.ರಮಣ ಸುಪ್ರೀಂಕೋರ್ಟ್ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗುವ ಸಾಧ್ಯತೆ ದಟ್ಟವಾಗಿದೆ. ಏಪ್ರಿಲ್ 30ರಂದು ಬೋಬ್ಡೆ ನಿವೃತ್ತರಾಗಲಿದ್ದು, ತಮ್ಮ ಉತ್ತರಾಧಿಕಾರಿಯಾಗಿ ಎನ್.ವಿ.ರಮಣ ಅವರ ಹೆಸರನ್ನೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಇನ್ನು ಸುಪ್ರೀಂಕೋರ್ಟ್ನಲ್ಲಿ ಬೋಬ್ಡೆಯವರನ್ನು ಹೊರತುಪಡಿಸಿದರೆ ಹಿರಿಯ ನ್ಯಾಯಮೂರ್ತಿಯಾಗಿ ಇದ್ದವರೇ ಎನ್.ವಿ.ರಮಣ. ಇದೀಗ ಜಗನ್ ಮಾಡಿದ್ದ ಆರೋಪದಿಂದಲೂ ಅವರಿಗೆ ಕ್ಲೀನ್ಚಿಟ್ ಸಿಕ್ಕಂತಾಗಿದೆ.