ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್​ಮುಖ್ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಆದೇಶ

Supreme Court dismisses Anil Deshmukhs plea: ಬಾಂಬೆ ಹೈಕೋರ್ಟ್​ ನೀಡಿದ್ದ ತೀರ್ಪು ಪ್ರಶ್ನಿಸಿ ಅನಿಲ್ ದೇಶಮುಖ್ ಹಾಗೂ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ತಳ್ಳಿಹಾಕಿದೆ.

ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್​ಮುಖ್ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಆದೇಶ
ಅನಿಲ್ ದೇಶ್​ಮುಖ್ ಹಾಗೂ ಪರಮ್​ವೀರ್ ಸಿಂಗ್

Updated on: Apr 08, 2021 | 4:55 PM

ದೆಹಲಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ, ಎನ್​ಸಿಪಿ ನಾಯಕ ಅನಿಲ್ ದೇಶಮುಖ್ ವಿರುದ್ಧ ಸಿಬಿಐ (Central Bureau of Investigation – CBI) ತನಿಖೆ ನಡೆಸಲು ಸುಪ್ರೀಂಕೋರ್ಟ್​ ಗುರುವಾರ (ಏಪ್ರಿಲ್ 8) ಆದೇಶಿಸಿದೆ. ಈ ಸಂಬಂಧ ಬಾಂಬೆ ಹೈಕೋರ್ಟ್​ ನೀಡಿದ್ದ ತೀರ್ಪು ಪ್ರಶ್ನಿಸಿ ಅನಿಲ್ ದೇಶಮುಖ್ ಹಾಗೂ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ತಳ್ಳಿಹಾಕಿದೆ.

ಈ ಪ್ರಕರಣದಲ್ಲಿ ಶಾಮೀಲಾಗಿರುವ ವ್ಯಕ್ತಿಗಳ ವಿರುದ್ಧ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಬೇಕಿದೆ. ಹೈಕೋರ್ಟ್​ ಪ್ರಾಥಮಿಕ ತನಿಖೆ ನಡೆಸಬೇಕು ಎಂದು ಸೂಚಿಸಿತ್ತು. ಹೈಕೋರ್ಟ್​ ಆದೇಶದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂಕೋರ್ಟ್​ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ಮುಂಬೈ ನಗರದ ಪೊಲೀಸ್ ಆಯುಕ್ತರಾಗಿದ್ದ ಪರಮ್​ವೀರ್ ಸಿಂಗ್ ಹಿಂದಿನ ಗೃಹ ಸಚಿವ ಅನಿಲ್​ ದೇಶಮುಖ್ ವಿರುದ್ಧ ಪತ್ರವೊಂದನ್ನು ಬರೆದಿದ್ದರು. ತಿಂಗಳಿಗೆ ₹ 100 ಕೋಟಿ ಲಂಚ ವಸೂಲಿ ಮಾಡಲು ಸಚಿನ್ ವಾಜೆಗೆ ಅನಿಲ್ ದೇಶಮುಖ್ ಸೂಚಿಸಿದ್ದರು ಎಂದು ಪರಮ್​ವೀರ್​ ಸಿಂಗ್ ಆರೋಪಿಸಿದ್ದರು. ಈ ಪ್ರಕರಣವನ್ನು ವಿಚಾರಣೆ ನಡೆಸುವಂತೆ ಬಾಂಬೆ ಹೈಕೋರ್ಟ್​ಗೆ ಸುಪ್ರೀಂಕೋರ್ಟ್​ ಸೂಚಿಸಿತ್ತು.

ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್​ 15 ದಿನಗಳಲ್ಲಿ ಪ್ರಾಥಮಿಕ ವಿಚಾರಣೆ ನಡೆಸವಂತೆ ಸಿಬಿಐಗೆ ನಿರ್ದೇಶನ ನೀಡಿತ್ತು. ಬಾಂಬೆ ಹೈಕೋರ್ಟ್​ ಆದೇಶ ಪ್ರಶ್ನಿಸಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್​ ದೇಶಮುಖ್ ಮತ್ತು ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿತ್ತು. ಇದೀಗ ಬಾಂಬೆ ಹೈಕೋರ್ಟ್​​ ಆದೇಶವನ್ನೇ ಸುಪ್ರೀಂಕೋರ್ಟ್​ ಎತ್ತಿಹಿಡಿದಿದೆ. ಈ ಮೂಲಕ ಅನಿಲ್ ದೇಶಮುಖ್​ಗೆ ಮತ್ತು ಅವರನ್ನು ರಕ್ಷಿಸಲು ಹಿಂಬಾಗಿಲ ಪ್ರಯತ್ನ ನಡೆಸಿದ ಎನ್​ಸಿಪಿಗೆ ಹಿನ್ನಡೆ ಆದಂತೆ ಆಗಿದೆ.

ಮುಂಬೈ ಪೊಲೀಸ್ ಆಯುಕ್ತರ ಸ್ಥಾನದಿಂದ ತಮ್ಮನ್ನು ಪದಚ್ಯುತಿಗೊಳಿಸಿದ ಮೂರು ದಿನಗಳ ನಂತರ, ಅಂದರೆ ಮಾರ್ಚ್​ 20ರಂದು ಐಪಿಎಸ್ ಅಧಿಕಾರಿ ಪರಮ್​ವೀರ್ ಸಿಂಗ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದು ಗೃಹ ಸಚಿವರ ವಿರುದ್ಧ ಲಂಚಗುಳಿತನದ ಆರೋಪ ಮಾಡಿದ್ದರು. ಮುಕೇಶ್ ಅಂಬಾನಿ ಮನೆಯೆದರು ಸ್ಫೋಟಕ ತುಂಬಿದ ಕಾರು ಪತ್ತೆಯಾದ ನಂತರದ ನಾಟಕೀಯ ಬೆಳವಣಿಗೆಗಳಲ್ಲಿ ಇದು ಪ್ರಮುಖ ತಿರುವು ಎನಿಸಿದೆ.

(Supreme Court dismisses Anil Deshmukhs plea challenging Bombay High Court order on CBI probe)

ಇದನ್ನೂ ಓದಿ: ವ್ಯಕ್ತಿ ವ್ಯಕ್ತಿತ್ವ: ಹಿಂದೂ ಮುಸ್ಲಿಂ ಸಾಮರಸ್ಯ, ಸೈಬರ್ ಕ್ರೈಂ ಪತ್ತೆಹಚ್ಚುವಲ್ಲಿ ಏಷ್ಯಾಕ್ಕೇ ಪ್ರಥಮ; ಸಚಿನ್ ವಾಜೆಯ ವೈವಿಧ್ಯಮಯ ವ್ಯಕ್ತಿತ್ವ

ಇದನ್ನೂ ಓದಿ: ವಿಶ್ಲೇಷಣೆ | ಮುಂಬೈ ಪೊಲೀಸ್ ಕಮಿಷನರ್​ ಹುದ್ದೆಗೆ ಹೇಮಂತ್ ನಗರಾಳೆ ನೇಮಕದ ಮೂಲಕ ಮಹಾರಾಷ್ಟ್ರ ಸರ್ಕಾರ ಏನು ಸಾಧಿಸಲು ಹೊರಟಿದೆ?

Published On - 4:40 pm, Thu, 8 April 21