ಭಾರತದಲ್ಲಿ ಕೊರೊನಾವೈರಸ್ 2ನೇ ಅಲೆ: ಮಾರ್ಚ್ ತಿಂಗಳಲ್ಲಿ 79,000 ಕ್ಕಿಂತಲೂ ಹೆಚ್ಚು ಮಕ್ಕಳಿಗೆ ಕೊವಿಡ್

Coronavirus Second Wave: ಮಹಾರಾಷ್ಟ್ರ, ಛತ್ತೀಸಗಡ, ಕರ್ನಾಟಕ, ಉತ್ತರಪ್ರದೇಶ ಮತ್ತು ದೆಹಲಿಯಲ್ಲಿ ಮಾರ್ಚ್1- ಏಪ್ರಿಲ್ 4ರ ಅವಧಿಯಲ್ಲಿ 79,688 ಮಕ್ಕಳಿಗೆ ಕೊವಿಡ್ ತಗಲಿದೆ.

  • TV9 Web Team
  • Published On - 13:25 PM, 8 Apr 2021
ಭಾರತದಲ್ಲಿ ಕೊರೊನಾವೈರಸ್ 2ನೇ ಅಲೆ: ಮಾರ್ಚ್ ತಿಂಗಳಲ್ಲಿ 79,000 ಕ್ಕಿಂತಲೂ ಹೆಚ್ಚು ಮಕ್ಕಳಿಗೆ ಕೊವಿಡ್
ಪುಟ್ಟ ಬಾಲಕಿಯ ದೇಹದ ಉಷ್ಣತೆ ಪರೀಕ್ಷಿಸುತ್ತಿರುವುದು (ಸಂಗ್ರಹ ಚಿತ್ರ)

ದೆಹಲಿ: ಭಾರತದಲ್ಲಿ ಕೊವಿಡ್ 2ನೇ ಅಲೆಯ ಮಕ್ಕಳ ಮೇಲೆ ಭಾರೀ ಪರಿಣಾಮ ಬೀರಿದೆ. ಮಹಾರಾಷ್ಟ್ರ, ಛತ್ತೀಸಗಡ, ಕರ್ನಾಟಕ, ಉತ್ತರಪ್ರದೇಶ ಮತ್ತು ದೆಹಲಿಯಲ್ಲಿ ಮಾರ್ಚ್ 1- ಏಪ್ರಿಲ್ 4ರ ಅವಧಿಯಲ್ಲಿ 79,688 ಮಕ್ಕಳಿಗೆ ಕೊವಿಡ್ ತಗಲಿದೆ ಎಂದು ಎನ್​ಡಿಟಿವಿ ವರದಿ ಮಾಡಿದೆ. ವರದಿ ಪ್ರಕಾರ ಮಹಾರಾಷ್ಟ್ರಗಲ್ಲಿ ಇದೇ ಅವಧಿಯಲ್ಲಿ 60,684ಮಕ್ಕಳು ಸೋಂಕಿತರಾಗಿದ್ದಾರೆ. ಈ ಪೈಕಿ 9,882 ಮಕ್ಕಳು ಐದು ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಛತ್ತೀಸಗಡದಲ್ಲಿ 5,940 ಮಕ್ಕಳಿಗೆ ಕೊವಿಡ್ ತಗುಲಿದ್ದು ಇದರಲ್ಲಿ 922 ಮಕ್ಕಳು ಐದು ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ.

ಕರ್ನಾಟಕದಲ್ಲಿ 7,327 ಮಕ್ಕಳಿಗೆ ಕೊವಿಡ್ ದೃಢಪಟ್ಟಿದ್ದು ಈ ಪೈಕಿ 871 ಮಕ್ಕಳು ಐದು ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ 3,004 ಮಕ್ಕಳು ಸೋಂಕಿತರಾಗಿದ್ದು ಐದು ವರ್ಷಕ್ಕಿಂತ ಕೆಳಗಿನ 471 ಮಕ್ಕಳಿಗೆ ಸೋಂಕು ತಗುಲಿದೆ. ದೆಹಲಿಯಲ್ಲಿಯೂ 2,733 ಮಕ್ಕಳು ಸೋಂಕಿತರಾಗಿದ್ದು 441 ಮಕ್ಕಳು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.

ಕೊರೊನಾ ವೈರಸ್ ಸೋಂಕು ತಗುಲಿದರೆ ಮಕ್ಕಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಬಹುತೇಕ ಮಕ್ಕಳು ಆಸ್ಪತ್ರೆಯಲ್ಲಿ ದಾಖಲಾಗುವ ಅಗತ್ಯ ಇರುವುದಿಲ್ಲ. ರೋಗದಿಂದ ಸಾಯುವ ಮಕ್ಕಳ ಸಂಖ್ಯೆ ತುಂಬಾ ಕಡಿಮೆ ಆಗಿರುತ್ತದೆ. ಮಕ್ಕಳಿಗೆ ಈ ರೋಗ ಹರಡುತ್ತಿದ್ದರೂ, ಮಕ್ಕಳು ರೋಗ ವಾಹಕರಾಗಿದ್ದು ಕಡಿಮೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ. ಕೊರೊನಾವೈರಸ್ ಮೊದಲ ಅಲೆಗಿಂತ ಈ ಬಾರಿ ಮಕ್ಕಳಲ್ಲಿ ಹೆಚ್ಚು ರೋಗ ಲಕ್ಷಣಗಳು ಕಾಣಿಸುತ್ತಿದೆ ಎಂದು ಮುಂಬೈಯ ಕೊಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಯ ಮಕ್ಕಳ ತಜ್ಞ ತನು ಸಿಂಘಾಲ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಹಲವಾರು ಮಕ್ಕಳಿಗೆ ಹೊಟ್ಟೆನೋವು ಮತ್ತು ಬೇಧಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದೂ ರೋಗ ಲಕ್ಷಣವಾಗಿದ್ದು, ಮೊದಲ ಅಲೆಯಲ್ಲಿ ಈ ರೀತಿ ಇರಲಿಲ್ಲ ಎಂದು ಮುಂಬೈಯ ಎಸ್ಆರ್​ಸಿಸಿ ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞೆ ಸೂನು ಉದಾನಿ ಹೇಳಿದ್ದಾರೆ.

ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಹೆಚ್ಚಳ
ಮಕ್ಕಳಿಗೆ ಹೇಗೆ ಸೋಂಕು ತಗಲುತ್ತದೆ ಎಂಬುದನ್ನು ಹೇಳುವುದು ಅಷ್ಟ. ಕೊರೊನಾವೈರಸ್ ಕಾಣಿಸಿಕೊಂಡ ಹೊತ್ತಲ್ಲಿಯೇ ಭಾರತ ಸೇರಿದಂತೆ ಇತರ ದೇಶಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದ್ದು. ಕೊರೊನಾ ಎಳೆ ವಯಸ್ಸಿನವರಿಗೆ ತಗಲುವ ಸಾಧ್ಯತೆ ಇಲ್ಲ ಎಂಬುದನ್ನು ಇದು ಸುಳ್ಳು ಎಂದು ಸಾಬೀತು ಪಡಿಸಿದೆ.

ಮೊದಲ ಅಲೆ ವೇಳೆ ಮಕ್ಕಳನ್ನು ಕೊವಿಡ್ ಪರೀಕ್ಷೆಗೊಳಪಡಿಸಿರಲಿಲ್ಲ. ಅವರಿಗೆ ಸಾಮಾನ್ಯವಾಗಿ ಸೌಮ್ಯವಾದ ರೋಗಲಕ್ಷಣಗಳು ಕಂಡು ಬಂದಿತ್ತು ಎಂದು ಮುಂಬೈ ಮೂಲದ ಮಕ್ಕಳ ತಜ್ಞ ಬಕುಲ್ ಪರೇಖ್ ಹೇಳಿದ್ದಾರೆ. ಕೊವಿಡ್-19 ರೋಗ ಬಾಧಿಸಿದ್ದ ಕುಟುಂಬಗಳ ಮಕ್ಕಳಿಗೆ ಮಾತ್ರ ನಾವು ಕೊರೊನಾ ಪರೀಕ್ಷೆ ಮಾಡಿಸಿದ್ದೆವು. ಕೆಲವು ಮಕ್ಕಳಿಗೆ ಮಾತ್ರ ರೋಗ ಲಕ್ಷಣಗಳು ಕಂಡು ಬಂದ್ದಿದ್ದು, ಅದು ಎರಡು ಮೂರು ದಿನ ಇತ್ತು ಎಂದಿದ್ದಾರೆ ಪರೇಖ್.

ಇದು ರೂಪಾಂತರಿ ವೈರಸ್ ಪ್ರಭಾವ? 
ಮಕ್ಕಳ ಮೇಲೆ ಹೊಸ ರೂಪಾಂತರಿ ವೈರಸ್​ನ ಪ್ರಭಾವ ಹೆಚ್ಚು ಇದೆ ಎಂದು ಪರೇಖ್ ಅಭಿಪ್ರಾಯಪಡುತ್ತಾರೆ. ಲಭ್ಯ ವೈದ್ಯಕೀಯ ಮಾಹಿತಿ ಪ್ರಕಾರ ಮಹಾರಾಷ್ಟ್ರದಲ್ಲಿ ಪತ್ತೆಯಾದ ಡಬಲ್ ಮ್ಯುಟೇಷನ್ (B1.617) ವೈರಸ್ ಇದಕ್ಕೆ ಕಾರಣ ಎಂದು ಪರೇಖ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಡಿಸೆಂಬರ್ ತಿಂಗಳಲ್ಲಿ ಬ್ರಿಟಿಷ್ ವಿಜ್ಞಾನಿಗಳು ಪ್ರಕಟಿಸಿದ ವರದಿಯ ಪ್ರಕಾರ ಭಾರತದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್ ನ ಹೊಸ ರೂಪಾಂತರಿಯು ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದಿತ್ತು. ನವಿ ಮುಂಬೈಯ ರಿಲಯನ್ಸ್ ಹಾಸ್ಪಿಟಲ್ ಮತ್ತು ಫೋರ್ಟಿಸ್ ಆಸ್ಪತ್ರೆಯ ಮಕ್ಕಳ ತಜ್ಞ ಸುಭಾಷ್ ರಾವ್ ಕೂಡಾ ಇದೇ ಅಭಿಪ್ರಾಯ ಹೊಂದಿದ್ದಾರೆ. ಕೊರೊನಾವೈರಸ್​ನ ಹೊಸ ರೂಪಾಂತರಿಯು ವಿಶೇಷವಾಗಿ ಮಕ್ಕಳಿಗೆ ಸೋಂಕು ತಗುಲಲು ಕಾರಣವಾಗುತ್ತದೆ ಎಂದು ಅವರು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಇದನ್ನೂ ಓದಿ:  Coronavirus India Update: ಭಾರತದಲ್ಲಿ ಒಂದೇ ದಿನ 1.26 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ; ಮಹಾರಾಷ್ಟ್ರದಲ್ಲಿ ಗರಿಷ್ಠ

(Coronavirus second wave Over 79,000 children tested positive since March in India)