ರಕ್ಷಣಾ ಸಿಬ್ಬಂದಿಗೆ ಏಕರೂಪ ಪಿಂಚಣಿ ನೀತಿಯ ಸರ್ಕಾರದ ನಿರ್ಧಾರಕ್ಕೆ ಸಂವಿಧಾನದ ತಡೆ ಇಲ್ಲ: ಸುಪ್ರೀಂಕೋರ್ಟ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 16, 2022 | 12:36 PM

ಏಕರೂಪ ಪಿಂಚಣಿ ಯೋಜನೆ (One Rank-One Pension - OROP) ಜಾರಿ ಕುರಿತು ತೀರ್ಮಾನ ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಯಾವುದೇ ಸಾಂವಿಧಾನಿಕ ಅಡೆತಡೆಯಿಲ್ಲ ಎಂದು ಸುಪ್ರೀಂಕೋರ್ಟ್​ ಹೇಳಿದೆ.

ರಕ್ಷಣಾ ಸಿಬ್ಬಂದಿಗೆ ಏಕರೂಪ ಪಿಂಚಣಿ ನೀತಿಯ ಸರ್ಕಾರದ ನಿರ್ಧಾರಕ್ಕೆ ಸಂವಿಧಾನದ ತಡೆ ಇಲ್ಲ: ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್​
Follow us on

ದೆಹಲಿ: ಸಶಸ್ತ್ರ ಪಡೆಗಳಲ್ಲಿ ಏಕರೂಪ ಪಿಂಚಣಿ ಯೋಜನೆ (One Rank-One Pension – OROP) ಜಾರಿ ಕುರಿತು ತೀರ್ಮಾನ ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಯಾವುದೇ ಸಾಂವಿಧಾನಿಕ ಅಡೆತಡೆಯಿಲ್ಲ ಎಂದು ಸುಪ್ರೀಂಕೋರ್ಟ್​ ಹೇಳಿದೆ. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಸೂರ್ಯಕಾಂತ ಮತ್ತು ವಿಕ್ರಮ್ ನಾಥ್ ಅವರಿದ್ದ ನ್ಯಾಯಪೀಠವು ಸರ್ಕಾರದ ನೀತಿ ನಿರೂಪಣೆಗಳ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲು ನ್ಯಾಯಲಯ ಇಚ್ಛಿಸುವುದಿಲ್ಲ ಎಂದು ಹೇಳಿತು.

ನ್ಯಾಯಾಲಯದ ಎದುರು ಪ್ರಕರಣದ ವಿಚಾರಣೆ ಬಾಕಿಯಿತ್ತು ಎನ್ನುವ ಕಾರಣಕ್ಕೆ ಪಿಂಚಣಿ ಯೋಜನೆಯಲ್ಲಿ ಮಾರ್ಪಾಟು ತರುವ ಚಟುವಟಿಕೆಗಳನ್ನು ಸರ್ಕಾರ ಬಾಕಿಯಿರಿಸಿತ್ತು. ಸರ್ಕಾರ ಶೀಘ್ರ ಸುಧಾರಣಾ ಕ್ರಮಗಳನ್ನು ಆರಂಭಿಸಬೇಕು. ಜುಲೈ 1, 2019ರಿಂದ ಪೂರ್ವಾನ್ವಯವಾಗುವಂತೆ ಬಾಕಿ ವೇತನ (ಅರಿಯರ್ಸ್​) ಪಾವತಿಸಬೇಕು. ಮುಂಗಡ ಪಾವತಿ ಪ್ರಕ್ರಿಯೆ ಮೂರು ತಿಂಗಳ ಒಳಗೆ ಮುಗಿಸಬೇಕು ಎಂದು ಕೋರ್ಟ್ ಹೇಳಿದೆ.

ನಿವೃತ್ತ ಸೈನಿಕರ ಒಕ್ಕೂಟವು ಈ ಸಂಬಂಧ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಇದೇ ವೇಳೆ ವಜಾ ಮಾಡಿತು. ಭಗತ್ ಸಿಂಗ್ ಕೋಶ್ಯಾರಿ ಸಮಿತಿ ಶಿಫಾರಸಿನಂತೆ ಪಿಂಚಣಿಯನ್ನು ಪ್ರತಿ ವರ್ಷವೂ ಪರಿಷ್ಕರಿಸಬೇಕು. ಈಗಿರುವಂತೆ ನಿಯಮಿತ ಪರಿಷ್ಕರಣೆ ವ್ಯವಸ್ಥೆ ಕೈಬಿಡಬೇಕು ಎಂದು ಅರ್ಜಿಯಲ್ಲಿ ನಿವೃತ್ತ ಸೈನಿಕರು ಕೋರಿದ್ದರು. ಕೇಂದ್ರ ಸರ್ಕಾರವು ನವೆಂಬರ್ 7, 2015ರಲ್ಲಿ ಹೊರಡಿಸಿದ್ದ ಅಧಿಸೂಚನೆಯ ಅನ್ವಯವೇ ಇನ್ನು ಮುಂದೆ ಸಶಸ್ತ್ರಪಡೆಗಳಲ್ಲಿ ಏಕರೂಪ ಪಿಂಚಣಿ ಯೋಜನೆಯನ್ನು ಜಾರಿ ಮಾಡಲು ತನ್ನ ಅಡ್ಡಿಯಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತು.

ಇದನ್ನೂ ಓದಿ: ಸಶಸ್ತ್ರ ಪಡೆಗಳ ಮುಖ್ಯಸ್ಥರ ಸಮಿತಿ ಅಧ್ಯಕ್ಷರಾಗಿ ಸೇನಾ ಮುಖ್ಯಸ್ಥ ಜನರಲ್ ನರವಾಣೆ ಅಧಿಕಾರ ಸ್ವೀಕಾರ

ಇದನ್ನೂ ಓದಿ: Hijab Verdict: ಹಿಜಾಬ್ ಪ್ರಕರಣ ಆದೇಶದ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ