ತಂದೆಯ ಅಂತ್ಯಕ್ರಿಯೆಗೆ ಜಾಗ ಬೇಕೆಂದು ಕೋರ್ಟ್​ ಮೆಟ್ಟಿಲೇರಿದ ಕ್ರಿಶ್ಚಿಯನ್ ವ್ಯಕ್ತಿ; ಛತ್ತೀಸ್‌ಗಢ ಸರ್ಕಾರಕ್ಕೆ ಸುಪ್ರೀಂ ತರಾಟೆ

|

Updated on: Jan 20, 2025 | 4:47 PM

ಛತ್ತೀಸ್‌ಗಢದ ಬಸ್ತಾರ್‌ನಲ್ಲಿರುವ ತಮ್ಮ ಗ್ರಾಮದ ಸ್ಮಶಾನದಲ್ಲಿ ಕ್ರಿಶ್ಚಿಯನ್ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಗ್ರಾಮದ ನಿವಾಸಿಗಳ ಗುಂಪೊಂದು ವಿರೋಧಿಸುತ್ತಿರುವುದರಿಂದ ಮೃತಪಟ್ಟ ವ್ಯಕ್ತಿಯ ಮಗ, ಪರಿಶಿಷ್ಟ ಜಾತಿ (SC) ಸಮುದಾಯದ ರೈತ ರಮೇಶ್ ಬಾಘೇಲ್ ತಮ್ಮ ತಂದೆಯ ಶವವನ್ನು 12 ದಿನಗಳಿಂದ ಶವಾಗಾರದಲ್ಲಿಟ್ಟಿದ್ದಾರೆ. ಛತ್ತೀಸ್‌ಗಢದ ಆ ವ್ಯಕ್ತಿ ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ಕಾನೂನು ಹೋರಾಟ ನಡೆಸಿದ್ದಾರೆ. 12 ದಿನಗಳಾದರೂ ವ್ಯಕ್ತಿಯೊಬ್ಬರಿಗೆ ತನ್ನ ತಂದೆಯ ಅಂತ್ಯಕ್ರಿಯೆ ನಡೆಸಲು ಜಾಗ ಸಿಗುತ್ತಿಲ್ಲವೆಂದರೆ ಏನರ್ಥ? ಎಂದು ಸುಪ್ರೀಂ ಕೋರ್ಟ್​ ಛತ್ತೀಸ್​ಗಢ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ತಂದೆಯ ಅಂತ್ಯಕ್ರಿಯೆಗೆ ಜಾಗ ಬೇಕೆಂದು ಕೋರ್ಟ್​ ಮೆಟ್ಟಿಲೇರಿದ ಕ್ರಿಶ್ಚಿಯನ್ ವ್ಯಕ್ತಿ; ಛತ್ತೀಸ್‌ಗಢ ಸರ್ಕಾರಕ್ಕೆ ಸುಪ್ರೀಂ ತರಾಟೆ
Supreme Court
Follow us on

ಬಸ್ತಾರ್: ಮೃತಪಟ್ಟಿರುವ ತನ್ನ ತಂದೆಯನ್ನು ಮಣ್ಣು ಮಾಡಿ, ಸಮಾಧಿ ನಿರ್ಮಿಸಲು ಜನರು ಅವಕಾಶ ನೀಡುತ್ತಿಲ್ಲ ಎಂದು ಛತ್ತೀಸ್​ಗಢದ ಬುಡಕಟ್ಟು ಕ್ರಿಶ್ಚಿಯನ್ ವ್ಯಕ್ತಿ ಆರೋಪಿಸಿದ್ದರು. ವಿಚಿತ್ರವೆಂದರೆ, ಈ ಘಟನೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಛತ್ತೀಸ್‌ಗಢ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆಯನ್ನು ಕೋರಿದೆ. ತನ್ನ ಕುಟುಂಬದ ಪಕ್ಕದಲ್ಲೇ ಸಮಾಧಿ ಮಾಡಬೇಕೆಂಬ ತಂದೆಯ ಕೊನೆಯ ಆಸೆ ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿರುವ ವ್ಯಕ್ತಿ ತಮ್ಮ ಗ್ರಾಮದಲ್ಲಿ ತಂದೆಯನ್ನು ಸಮಾಧಿ ಮಾಡದಂತೆ ತಡೆಹಿಡಿದಿದ್ದಾರೆ ಎಂದು ಆರೋಪಿಸಿದ್ದಾರೆ. ಛತ್ತೀಸ್‌ಗಢದ ವ್ಯಕ್ತಿ ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ಕಾನೂನು ಹೋರಾಟ ನಡೆಸಿದ್ದಾರೆ.

ಛತ್ತೀಸ್‌ಗಢ ಸರ್ಕಾರವನ್ನು ಸುಪ್ರೀಂ ಕೋರ್ಟ್ ಇಂದು ಟೀಕಿಸಿದೆ. ತಮ್ಮ ಗ್ರಾಮದ ನಿವಾಸಿಗಳ ಗುಂಪಿನ ವಿರೋಧದಿಂದಾಗಿ ಛತ್ತೀಸ್‌ಗಢದಲ್ಲಿರುವ ತಮ್ಮ ಗ್ರಾಮದ ಸ್ಮಶಾನದಲ್ಲಿ ಮೃತ ತಂದೆಯನ್ನು ಅಂತ್ಯಕ್ರಿಯೆ ಮಾಡಲು ಸಾಧ್ಯವಾಗದ ಕ್ರಿಶ್ಚಿಯನ್ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಕೋರಿದೆ. ಸುಪ್ರೀಂ ಕೋರ್ಟ್ ಕೂಡಲೇ ಈ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಛತ್ತೀಸ್‌ಗಢ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯದ ರೈತ ರಮೇಶ್ ಬಾಘೇಲ್, ತನ್ನ ತಂದೆಯ ಮರಣದ ನಂತರ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಅಂತ್ಯಕ್ರಿಯೆಗೆ ಜಾಗವಿಲ್ಲದೆ ತನ್ನ ತಂದೆಯ ಶವವನ್ನು 12 ದಿನಗಳಿಂದ ಶವಾಗಾರದಲ್ಲಿ ಇರಿಸಿದ್ದಾರೆ. ಬಾಘೇಲ್ ಅವರ ತಂದೆ ಸುಭಾಷ್ ವೃದ್ಧಾಪ್ಯದ ಕಾರಣದಿಂದಾಗಿ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾದರು. ಬಾಘೇಲ್ ಪ್ರಕಾರ, ಛಿಂದವಾಡಾ ಗ್ರಾಮವು ಬುಡಕಟ್ಟು ಜನಾಂಗದವರು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ವಿವಿಧ ಸಮುದಾಯಗಳಿಗೆ ಗ್ರಾಮ ಪಂಚಾಯತ್ ಬೇರೆ ಬೇರೆ ವಿಭಾಗಗಳಾಗಿ ವಿಂಗಡಿಸಿರುವ ಸ್ಮಶಾನವನ್ನು ಹೊಂದಿದೆ.

ಇದನ್ನೂ ಓದಿ: ಕೊಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಸಂಜಯ್ ರಾಯ್ ಅಪರಾಧಿ ಎಂದು ಸಾಬೀತು

ಆದರೆ, ಕೆಲವು ಗ್ರಾಮಸ್ಥರು ಕ್ರಿಶ್ಚಿಯನ್ ಆಗಿದ್ದ ಬಾಘೇಲ್ ಅವರ ತಂದೆಯ ಸಮಾಧಿ ನಿರ್ಮಿಸಲು ಆಕ್ಷೇಪ ವ್ಯಕ್ತಪಡಿಸಿದರು. ಬಾಘೇಲ್ ಮತ್ತು ಅವರ ಕುಟುಂಬವು ಗೊತ್ತುಪಡಿಸಿದ ಕ್ರಿಶ್ಚಿಯನ್ ಪ್ರದೇಶದಲ್ಲಿ ಅಂತ್ಯಕ್ರಿಯೆಯನ್ನು ಮುಂದುವರಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು. ಅವರ ಕುಟುಂಬವು ತಮ್ಮ ಖಾಸಗಿ ಭೂಮಿಯಲ್ಲಿ ಶವವನ್ನು ಹೂಳುವುದನ್ನು ಸಹ ನಿಷೇಧಿಸಿತ್ತು.


ಕ್ರಿಶ್ಚಿಯನ್ನರಿಗೆ ಪ್ರತ್ಯೇಕ ಸಮಾಧಿ ಸ್ಥಳಗಳಿಲ್ಲ ಎಂದು ಹೇಳುವ ಆ ಗ್ರಾಮದ ಸರಪಂಚ್ ನೀಡಿದ ಪ್ರಮಾಣಪತ್ರವನ್ನು ಆಧರಿಸಿದ ಹೈಕೋರ್ಟ್ ಬಾಘೇಲ್ ಅವರ ಕೋರಿಕೆಯನ್ನು ನಿರಾಕರಿಸಿತು. ಸಮಾಧಿ ಮಾಡಲು ಅವಕಾಶ ನೀಡುವುದು ಅಶಾಂತಿ ಮತ್ತು ಸಾರ್ವಜನಿಕ ಅಸಾಮರಸ್ಯವನ್ನು ಉಂಟುಮಾಡಬಹುದು ಎಂದು ನ್ಯಾಯಾಲಯವು ವಾದಿಸಿತು. ಈ ಹಿನ್ನೆಲೆಯಲ್ಲಿ ಜನವರಿ 9ರಂದು ಛತ್ತೀಸ್‌ಗಢ ಹೈಕೋರ್ಟ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಬಾಘೇಲ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರು. ತನ್ನ ಕುಟುಂಬಸ್ಥರ ಸಮಾಧಿ ಪಕ್ಕದಲ್ಲೇ ತನ್ನ ಸಮಾಧಿ ನಿರ್ಮಿಸಬೇಕೆಂಬುದು ನನ್ನ ತಂದೆಯ ಕೊನೆಯ ಆಸೆಯಾಗಿತ್ತು. ಆದರೆ, ಊರಿನ ಜನರು ನಮಗೆ ಇಲ್ಲಿ ಸಮಾಧಿ ನಿರ್ಮಿಸದಂತೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗೆ, ಸಮಾಧಿಗೆ ಜಾಗವಿಲ್ಲವೆಂದು ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್​ ಮೊರೆಹೋದ ಪ್ರಕರಣ ಇದೇ ಮೊದಲು.

ಜನವರಿ 7ರಿಂದ ಜಗದಲ್‌ಪುರದ ಜಿಲ್ಲಾ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಶವವನ್ನು ಇಟ್ಟಿರುವ ಬಗ್ಗೆ ನ್ಯಾಯಮೂರ್ತಿಗಳಾದ ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಆಘಾತ ವ್ಯಕ್ತಪಡಿಸಿತು. ಅಂದಿನಿಂದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗೊತ್ತಾದ ಬಳಿಕ ಈ ಬಗ್ಗೆ ಸುಪ್ರೀಂ ಕೋರ್ಟ್ ಛತ್ತೀಸ್​ಗಢ ಸರ್ಕಾರವನ್ನು ಟೀಕಿಸಿದೆ.

ಇದನ್ನೂ ಓದಿ: ಕೇರಳದ ಶರೋನ್ ರಾಜ್ ಕೊಲೆ ಪ್ರಕರಣ; ಪ್ರೇಮಿಗೆ ವಿಷ ಹಾಕಿ ಕೊಂದ ಯುವತಿಗೆ ಜೀವಾವಧಿ ಶಿಕ್ಷೆ

ಪಾದ್ರಿಯಾಗಿದ್ದ ಅವರ ತಂದೆಗೆ ಸಾಂಪ್ರದಾಯಿಕವಾಗಿ ಕ್ರಿಶ್ಚಿಯನ್ ಸಮಾಧಿಗಳಿಗೆ ಬಳಸುವ ಪ್ರದೇಶದಲ್ಲಿ ಸಮಾಧಿ ಮಾಡುವ ಹಕ್ಕಿದೆ ಎಂದು ಬಘೇಲ್ ವಾದಿಸಿದರು. ಅವರ ಚಿಕ್ಕಮ್ಮ ಮತ್ತು ಅಜ್ಜನನ್ನು ಅದೇ ಸ್ಮಶಾನದ ಕ್ರಿಶ್ಚಿಯನ್ ವಿಭಾಗದಲ್ಲಿ ಸಮಾಧಿ ಮಾಡಲಾಗಿದೆ ಎಂದು ಬಾಘೇಲ್ ಹೇಳಿದ್ದಾರೆ. “ಗ್ರಾಮ ಪಂಚಾಯತ್ ಅನ್ನು ಬಿಡಿ, ಹೈಕೋರ್ಟ್ ಕೂಡ ವಿಚಿತ್ರ ಆದೇಶವನ್ನು ನೀಡಿದೆ. ರಾಜ್ಯ ಸರ್ಕಾರ ಏನು ಮಾಡುತ್ತಿದೆ?” ಎಂದು ನ್ಯಾಯಪೀಠವು ಟೀಕಿಸಿದೆ.

ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, “ಈ ದೇಶದಲ್ಲಿ ಒಬ್ಬ ವ್ಯಕ್ತಿಯನ್ನು ಅವರು ಬಯಸಿದ ಸ್ಥಳದಲ್ಲಿ ಏಕೆ ಸಮಾಧಿ ಮಾಡಲು ಸಾಧ್ಯವಿಲ್ಲ?” ಎಂದು ಕೇಳಿದರು. ಅವರ ಶವ 12 ದಿನಗಳಿಂದ ಶವಾಗಾರದಲ್ಲಿದೆಯೇ? ಒಬ್ಬ ವ್ಯಕ್ತಿಯು ತನ್ನ ತಂದೆಯ ಅಂತ್ಯಕ್ರಿಯೆಗಾಗಿ ಸುಪ್ರೀಂ ಕೋರ್ಟ್‌ಗೆ ಬರಬೇಕಾಗುತ್ತದೆ ಎಂಬುದು ಬಹಳ ವಿಷಾದದ ಸಂಗತಿ. ಇದನ್ನು ನಮಗೇ ನಂಬಲು ಆಗುತ್ತಿಲ್ಲ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ