ಇದು ಪ್ರಜಾತಂತ್ರದ ಲೇವಡಿ: ಹತ್ಯೆಯಾದ 29 ಮಾವೋವಾದಿ ನಕ್ಸಲರನ್ನು ಹುತಾತ್ಮರೆಂದು ಬಣ್ಣಿಸಿದ ಸುಪ್ರಿಯಾ ಶ್ರೀನೇತ್ ವಿರುದ್ಧ ಬಿಜೆಪಿ ಕಿಡಿ

|

Updated on: Apr 18, 2024 | 6:14 PM

BJP objects to pro naxal statement of Supriya Shrinate: ಏಪ್ರಿಲ್ 16, ಮಂಗಳವಾರದಂದು ಛತ್ತೀಸ್​ಗಡದ ಕಾಂಕೇರ್​ನಲ್ಲಿ ನಡೆದ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ 29 ಮಾವೋವಾದಿ ಉಗ್ರರು ಹತ್ಯೆಯಾಗಿದ್ದರು. ಈ ನಕ್ಸಲರನ್ನು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಅವರು ಹುತಾತ್ಮರೆಂದು ಬಣ್ಣಿಸಿದ್ದಾರೆ. ಇವರ ಈ ಹೇಳಿಕೆಯನ್ನು ಬಿಜೆಪಿ ಟೀಕಿಸಿದೆ. ಸುಪ್ರಿಯಾ ಶ್ರೀನೇತ್ ಅವರ ಈ ಹೇಳಿಕೆಯು ಛತ್ತೀಸ್​ಗಡ ಜನತೆ, ಪೊಲೀಸ್ ಮತ್ತು ಪ್ರಜಾತಂತ್ರ ವ್ಯವಸ್ಥೆಯ ಲೇವಡಿ ಆಗಿದೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.

ಇದು ಪ್ರಜಾತಂತ್ರದ ಲೇವಡಿ: ಹತ್ಯೆಯಾದ 29 ಮಾವೋವಾದಿ ನಕ್ಸಲರನ್ನು ಹುತಾತ್ಮರೆಂದು ಬಣ್ಣಿಸಿದ ಸುಪ್ರಿಯಾ ಶ್ರೀನೇತ್ ವಿರುದ್ಧ ಬಿಜೆಪಿ ಕಿಡಿ
ರಾಹುಲ್ ಗಾಂಧಿ ಜೊತೆ ಸುಪ್ರಿಯಾ ಶ್ರೀನೇತ್
Follow us on

ನವದೆಹಲಿ, ಏಪ್ರಿಲ್ 18: ಕಾಂಗ್ರೆಸ್ ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನೇತ್ (Supriya Shrinate) ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಛತ್ತೀಸ್​ಗಡದ ಕಾಂಕೇರ್​ನಲ್ಲಿ (Kanker, Chhattisgarh) ಮೊನ್ನೆ ಮಂಗಳವಾರ (ಏ. 16) 29 ಮಾವೋವಾದಿ ಉಗ್ರರು ಬಿಎಸ್​ಎಫ್ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿದ್ದರು. ಸುಪ್ರಿಯಾ ಶ್ರೀನೇತ್ ಈ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ತನಿಖೆಗೆ ಆಗ್ರಹಿಸಿದ್ದರು. ಈ ವೇಳೆ ಕಾರ್ಯಾಚರಣೆಯಲ್ಲಿ ಸತ್ತ ನಕ್ಸಲ್ ಉಗ್ರರನ್ನು ಸುಪ್ರಿಯಾ ಅವರು ಹುತಾತ್ಮರೆಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ವಕ್ತಾರೆಯ ಈ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಜಾತಂತ್ರದ ಅವಹೇಳನವಾಗಿದೆ ಎಂದು ತಿರುಗೇಟು ನೀಡಿದೆ.

‘ಛತ್ತೀಸ್​ಗಡದ ಅಮಾಯಕ ಜನರ ರಕ್ತ ಹರಿಸಿದ ನಕ್ಸಲರನ್ನು ಹುತಾತ್ಮರೆಂದು ಬಣ್ಣಿಸುವ ಮೂಲಕ ಕಾಂಗ್ರೆಸ್​ನ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನೇತ್ ಅವರು ಛತ್ತೀಸ್​ಗಡ ಜನತೆ, ಪೊಲೀಸ್ ಪಡೆ ಮತ್ತು ಪ್ರಜಾತಂತ್ರ ವ್ಯವಸ್ಥೆಯನ್ನು ಲೇವಡಿ ಮಾಡಿದ್ದಾರೆ. ಈ ಪವಿತ್ರ ನಾಡಿನಲ್ಲಿ ನಿಮ್ಮ ಆಗಮನ ಸ್ವೀಕಾರಾರ್ಹವಲ್ಲ,’ ಎಂದು ಛತ್ತೀಸ್​ಗಡ ಬಿಜೆಪಿ ಘಟಕ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ಬೇಕಂತಲೇ ಮಾವಿನ ಹಣ್ಣು ತಿನ್ನುತ್ತಿದ್ದಾರೆ: ಇಡಿ ದೂರು

ಕಾಂಗ್ರೆಸ್​ನಿಂದ ಇದು ನಿರೀಕ್ಷಿತ ಹೇಳಿಕೆಯೇ ಎಂದ ಬಿಜೆಪಿ ನಾಯಕ ಶಹಜಾದ್ ಪೂನಾವಾಲ

ನಕ್ಸಲನ್ನು ಹುತಾತ್ಮರೆಂದ ಸುಪ್ರಿಯಾ ಶ್ರೀನೇತ್ ಹೇಳಿಕೆಯನ್ನು ಬಿಜೆಪಿ ನಾಯಕ ಶಹಜಾದ್ ಪೂನಾವಾಲ ಕಟುವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್ಸಿಗರಿಂದ ಇಂಥದ್ದು ನಿರೀಕ್ಷಿತವೇ ಆಗಿದೆ ಎಂದಿದ್ದಾರೆ.

‘ಛತ್ತೀಸ್​ಗಡದಲ್ಲಿ ಬಹಳ ಮುಖ್ಯವಾದ ಕಾರ್ಯಾಚರಣೆ ಆಗಿದೆ. 29 ನಕ್ಸಲರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಇದು ನಿಜಕ್ಕೂ ದೊಡ್ಡ ಸಾಧನೆಯೇ. ಆದರೆ, ಕಾಂಗ್ರೆಸ್ ಪಕ್ಷದವರು ಆ ನಕ್ಸಲರನ್ನು ಹುತಾತ್ಮರೆಂದು ಬಣ್ಣಿಸಿ ಭದ್ರತಾ ಪಡೆಗಳನ್ನು ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಇದು ನಿರೀಕ್ಷಿತವೇ ಆದರೂ ಬಹಳ ಕ್ರೂರತನದಿಂದ ಕೂಡಿದ ಹೇಳಿಕೆ ಆಗಿದೆ,’ ಎಂದು ಬಿಜೆಪಿಯ ವಕ್ತಾರರೂ ಆಗಿರುವ ಶಹಜಾದ್ ಪೂನಾವಾಲ ಹೇಳಿದ್ದಾರೆ.

ಇದನ್ನೂ ಓದಿ: ಇವಿಎಂ ಹೇಗೆ ಕೆಲಸ ಮಾಡುತ್ತೆ? ಸುಪ್ರೀಂಕೋರ್ಟ್​ಗೆ ಮಾಹಿತಿ ಕೊಟ್ಟ ಚುನಾವಣಾ ಆಯೋಗ

ಛತ್ತೀಸ್​ಗಡ ರಾಜ್ಯ ಬಹಳಷ್ಟು ವರ್ಷ ಕಾಲ ಮಾವೋವಾದಿ ಉಗ್ರರ ಅಡ್ಡೆಯೇ ಆಗಿದೆ. ಕಾಂಕೇರ್ ಪ್ರದೇಶದಲ್ಲಿ ಮೊನ್ನೆ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 29 ನಕ್ಸಲರು ಹತ್ಯೆಯಾಗಿದ್ದರು. ಇವರಲ್ಲಿ 12ಕ್ಕೂ ಹೆಚ್ಚು ಮಹಿಳೆಯರೇ ಇದ್ದಾರೆ. ಮಾವೋವಾದಿ ಗುಂಪಿನಲ್ಲಿ ಪುರುಷರ ಮೇಲೆ ಭದ್ರತಾ ಪಡೆಗಳು ದಾಳಿ ನಡೆಸಿದಾಗ, ಅಪಾಯಕಾರಿ ಶಸ್ತ್ರಾಸ್ತ್ರಗಳಿದ್ದ ಮಹಿಳೆಯರು ಅವರ ರಕ್ಷಣೆಗೆ ಧಾವಿಸಿದ್ದರು. ಹೀಗಾಗಿ, ಪುರುಷರ ಜೊತೆಗೆ ಮಹಿಳಾ ಮಾವೋವಾದಿಗಳೂ ಹತ್ಯೆಯಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಬಿಎಸ್​ಎಫ್​ನ ಇಬ್ಬರು, ಮತ್ತು ಛತ್ತೀಸ್​ಗಡ ಜಿಲ್ಲಾ ಮೀಸಲು ಪೊಲೀಸ್ ಪಡೆಯ ಒಬ್ಬರು ಸೇರಿ ಒಟ್ಟು ಮೂವರು ಯೋಧರು ಗಾಯಗೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಛತ್ತೀಸ್​ಗಡದಲ್ಲಿ ನಡೆದ ಅತಿದೊಡ್ಡ ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಇದೂ ಒಂದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:12 pm, Thu, 18 April 24