ಅರವಿಂದ್ ಕೇಜ್ರಿವಾಲ್ ಬೇಕಂತಲೇ ಮಾವಿನ ಹಣ್ಣು ತಿನ್ನುತ್ತಿದ್ದಾರೆ: ಇಡಿ ದೂರು
Arvind Kejriwal vs ED at Delhi Court: ದೇಹದ ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿ ಸಾಕಷ್ಟು ಮಾವಿನಹಣ್ಣು, ಸಿಹಿ ತಿಂಡಿಗಳನ್ನು ತಿನ್ನುತ್ತಿದ್ದಾರೆ ಎಂದು ದೆಹಲಿ ಕೋರ್ಟ್ನಲ್ಲಿ ಇಡಿ ಹೇಳಿಕೆ ನೀಡಿದೆ. ಸಕ್ಕರೆ ಮಟ್ಟ ಹೆಚ್ಚಿರುವುದರ ನೆಪ ಇಟ್ಟುಕೊಂಡು ಅವರು ಜಾಮೀನು ಪಡೆಯಲು ಷಡ್ಯಂತ್ರ ರೂಪಿಸಿದ್ದಾರೆ ಎಂಬುದು ಕೋರ್ಟ್ನಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಮಾಡಿದ ವಾದವಾಗಿದೆ. ತಮ್ಮ ಸಕ್ಕರೆ ಮಟ್ಟದ ಬಗ್ಗೆ ನಿಗಾ ವಹಿಸಲು ವಿಡಿಯೋ ಕಾನ್ಫರೆನ್ಸ್ ಮೂಲಕ ವೈದ್ಯರನ್ನು ಸಂಪರ್ಕಿಸಲು ಅವಕಾಶ ಕೊಡಿ ಎಂದು ಅರವಿಂದ್ ಕೇಜ್ರಿವಾಲ್ ಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ.
ನವದೆಹಲಿ, ಏಪ್ರಿಲ್ 18: ಅರವಿಂದ್ ಕೇಜ್ರಿವಾಲ್ ಬೇಕಂತಲೇ ಮಾವಿನ ಹಣ್ಣು, ಸಿಹಿ ತಿಂಡಿಗಳನ್ನು ತಿನ್ನುತ್ತಿದ್ದಾರೆ. ಸಕ್ಕರೆ ಹಾಕಿದ ಚಹಾವನ್ನೇ ಕುಡಿಯುತ್ತಿದ್ದಾರೆ ಎಂದು ನ್ಯಾಯಾಲಯದಲ್ಲಿ ಜಾರಿ ನಿರ್ದೇಶನಾಲಯ (ED) ದೂರಿದೆ. ತಮ್ಮ ದೇಹದ ಶುಗರ್ ಲೆವಲ್ ನಿರಂತರವಾಗಿ ಹೆಚ್ಚುತ್ತಿದ್ದು, ವೈದ್ಯರನ್ನು ಸಮಾಲೋಚಿಸಲು ತಮಗೆ ಅವಕಾಶ ಕೊಡುವಂತೆ ಅರವಿಂದ್ ಕೇಜ್ರಿವಾಲ್ (Arvind Kejriwal) ದೆಹಲಿ ಕೋರ್ಟ್ನಲ್ಲಿ ಮನವಿ ಮಾಡಿದ್ದರು. ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ವೈದ್ಯರನ್ನು ವಾರಕ್ಕೆ ಮೂರು ಬಾರಿ ಸಂಪರ್ಕಿಸಿ ಸಮಾಲೋಚನೆ ನಡೆಸಲು ಅನುಮತಿಸಬೇಕೆಂದು ಅವರು ಕೋರಿದ್ದಾರೆ. ಈ ಅರ್ಜಿ ವಿಚಾರಣೆ ವೇಳೆ, ಜಾರಿ ನಿರ್ದೇಶನಾಲಯ ತನ್ನ ಹತಾಶೆಯನ್ನು ತೋರ್ಪಡಿಸಿದೆ. ಸಕ್ಕರೆ ಮಟ್ಟ ಹೆಚ್ಚಾಗಲೆಂದು ಉದ್ದೇಶಪೂರ್ವಕವಾಗಿ ಕೇಜ್ರಿವಾಲ್ ಮಾವಿನ ಹಣ್ಣು, ಸಿಹಿತಿಂಡಿ ತಿನ್ನುತ್ತಿದ್ದಾರೆ ಎಂದು ವಾದಿಸಿದೆ.
‘ಹೆಚ್ಚಿನ ಮಟ್ಟದ ಡಯಾಬಿಟಿಸ್ ಇದೆ ಎಂದು ಹೇಳಿಕೊಳ್ಳುವ ವ್ಯಕ್ತಿ ನಿಯಮಿತವಾಗಿ ಮಾವಿನ ಹಣ್ಣು, ಸಿಹಿ ತಿಂಡಿಗಳನ್ನು ತಿನ್ನುತ್ತಾರೆ. ಸಕ್ಕರೆ ಹಾಕಿದ ಚಹಾವನ್ನೇ ಸೇವಿಸುತ್ತಾರೆ. ಇದೆಲ್ಲವೂ ಕೂಡ ಜಾಮೀನು ಪಡೆಯಲು ಅವರು ಮಾಡುತ್ತಿರುವ ತಂತ್ರ,’ ಎಂದು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಜೋಹೇಬ್ ಹುಸೇನ್ ಕೋರ್ಟ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿಯು ಹೊಸ ರಾಜಕೀಯ ಸಮೀಕರಣಕ್ಕೆ ಭಾಷ್ಯ ಬರೆಯಲು ಮುಂದಾಗಿರುವ ತಮಿಳುನಾಡಿನಲ್ಲಿ ನಾಳೆ ಮತದಾನ
ರಕ್ತದ ಸಕ್ಕರೆ ಮಟ್ಟದಲ್ಲಿ ಏರಿಕೆ ಆಗುತ್ತಿರುವ ನೆವ ಒಡ್ಡಿ ಜಾಮೀನು ಪಡೆಯಲು ಕೇಜ್ರಿವಾಲ್ ಈ ನಾಟಕ ಆಡುತ್ತಿದ್ದಾರೆ ಎನ್ನುವ ಪ್ರಾಸಿಕ್ಯೂಶನ್ ವಾದವನ್ನು ಕೇಜ್ರಿವಾಲ್ ಪರ ವಕೀಲರು ನಿರಾಕರಿಸಿದ್ದಾರೆ. ಕೇಜ್ರಿವಾಲ್ ಅವರು ತಮ್ಮ ಇಂದಿನ ಅರ್ಜಿಯನ್ನು ಹಿಂಪಡೆದು ಮತ್ತೆ ಹೊಸದಾಗಿ ಇನ್ನೊಂದು ಅರ್ಜಿ ಸಲ್ಲಿಸುತ್ತಾರೆ ಎಂದು ವಕೀಲ ವಿವೇಕ್ ಜೈನ್ ಹೇಳಿದ್ದಾರೆ.
ಈ ವೇಳೆ ನ್ಯಾಯಾಲಯವು ಅರವಿಂದ್ ಕೇಜ್ರಿವಾಲ್ ಅವರ ಆಹಾರಕ್ರಮ ಮತ್ತು ಆರೋಗ್ಯ ಸ್ಥಿತಿ ಬಗ್ಗೆ ವೈದ್ಯಕೀಯ ವರದಿ ಸಲ್ಲಿಸುವಂತೆ ಜೈಲಿನ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ನಾಳೆ ಶುಕ್ರವಾರ ಈ ಪ್ರಕರಣದ ವಿಚಾರಣೆ ಮತ್ತೆ ನಡೆಯಲಿದೆ.
ಮಾರ್ಚ್ 21ರಿಂದ ಜೈಲಿನಲ್ಲಿ ಕೇಜ್ರಿವಾಲ್
ದೆಹಲಿ ಮದ್ಯ ನೀತಿ ಹಗರಣ ಸಂಬಂಧ ಮಾರ್ಚ್ 21ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿತ್ತು. ಸದ್ಯ ಅವರು ತಿಹಾರ್ ಜೈಲಿನಲ್ಲಿದ್ದಾರೆ. ಅವರ ನ್ಯಾಯಾಂಗ ಬಂಧನ ಏಪ್ರಿಲ್ 23ರವರೆಗೆ ಇದೆ. ತಿಹಾರ್ ಜೈಲಿನಲ್ಲಿ ಅವರನ್ನು ಭೇಟಿ ಮಾಡಿ ಬಂದ ಹಲವು ಆಮ್ ಆದ್ಮಿ ಮುಖಂಡರು, ಕೇಜ್ರಿವಾಲ್ ಅವರನ್ನು ಸರಿಯಾಗಿ ನಡೆಸಿಕೊಳ್ಳಲಾಗುತ್ತಿಲ್ಲ ಎಂದು ದೂರಿದ್ದಾರೆ. ಜೈಲಿನಲ್ಲಿ ಕೇಜ್ರಿವಾಲ್ರನ್ನು ಉಗ್ರನಂತೆ ಕಾಣಲಾಗುತ್ತಿದೆ ಎಂದು ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್, ದೆಹಲಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮೊದಲಾದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: TIME’s Most Influential People 2024: ಜಾಗತಿಕ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ 8 ಮಂದಿ ಭಾರತೀಯರು
ನನ್ನ ಹೆಸರು ಅರವಿಂದ್ ಕೇಜ್ರಿವಾಲ್. ನಾನು ಉಗ್ರನಲ್ಲ ಎಂದು ದೆಹಲಿ ಸಿಎಂ ಜೈಲಿನಿಂದ ಸಂದೇಶ ನೀಡಿದ್ದಾರೆ ಎಂದು ಮೊನ್ನೆ ಸಂಜಯ್ ಸಿಂಗ್ ಹೇಳಿದ್ದರು.
ಪ್ರತ್ಯೇಕ ಪಿಐಎಲ್ ಸಲ್ಲಿಕೆ
ಇದೇ ವೇಳೆ, ಜೈಲಿನಲ್ಲಿದ್ದರೂ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ಸಚಿವರು, ಶಾಸಕರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಗಳನ್ನು ನಡೆಸಲು ತಿಹಾರ್ ಜೈಲಿನಲ್ಲಿ ವ್ಯವಸ್ಥೆ ಏರ್ಪಡಿಸಲು ಆದೇಶ ನೀಡಬೇಕೆಂದು ಕೋರಿ ದೆಹಲಿ ಹೈಕೋರ್ಟ್ನಲ್ಲಿ ಪ್ರತ್ಯೇಕವಾಗಿ ಪಿಐಎಲ್ ಸಲ್ಲಿಕೆ ಆಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ