ಒಲಿಂಪಿಕ್​ ಪದಕ ವಿಜೇತ ಸುಶೀಲ್​ ಕುಮಾರ್​ನ ಇನ್ನೊಂದು ಮುಖ; ಬಹಿರಂಗವಾಯ್ತು ಹಲ್ಲೆ ನಡೆಸಿದ ವಿಡಿಯೋ

|

Updated on: May 28, 2021 | 3:06 PM

ಪೊಲೀಸರು ಹೇಳುವಂತೆ ಘಟನೆಯ ದೃಶ್ಯಾವಳಿಗಳನ್ನು ಚಿತ್ರೀಕರಿಸುವಂತೆ ಸ್ವತಃ ಸುಶೀಲ್​ ಕುಮಾರ್ ತಿಳಿಸಿದ್ದು, ಇತರೆ ಕುಸ್ತಿಪಟುಗಳಲ್ಲಿ ತನ್ನ ಬಗ್ಗೆ ಭಯ ಮೂಡಬೇಕು, ತಾನು ಏನೆಂದು ಗೊತ್ತಾಗಬೇಕು ಎಂದು ಹೇಳಿದ್ದರಂತೆ.

ಒಲಿಂಪಿಕ್​ ಪದಕ ವಿಜೇತ ಸುಶೀಲ್​ ಕುಮಾರ್​ನ ಇನ್ನೊಂದು ಮುಖ; ಬಹಿರಂಗವಾಯ್ತು ಹಲ್ಲೆ ನಡೆಸಿದ ವಿಡಿಯೋ
ಘಟನೆಯ ದೃಶ್ಯಾವಳಿ
Follow us on

ಕುಸ್ತಿಪಟು ಸಾಗರ್ ಧಂಖರ್ ಸಾವಿನಲ್ಲಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಪಾತ್ರವನ್ನು ಎತ್ತಿ ತೋರಿಸುವ ವಿಡಿಯೋ ಬಹಿರಂಗವಾಗಿದೆ. ಮೇ 4 ರಂದು ಛತ್ರಸಾಲ್ ಕ್ರೀಡಾಂಗಣದಲ್ಲಿ ಕುಸ್ತಿಪಟುಗಳ ನಡುವೆ ನಡೆದ ಜಗಳದ ಪರಿಣಾಮ ಸಾವಿನ ದವಡೆಗೆ ನೂಕಲ್ಪಟ್ಟ ಸಾಗರ್ ಧಂಖರ್ ಮೇಲೆ ಸುಶೀಲ್ ಕುಮಾರ್ ಸೇರಿದಂತೆ ಇನ್ನಿತರರು ಹಲ್ಲೆ ನಡೆಸಿರುವುದು ಖಾತ್ರಿಯಾಗಿದೆ. ಛತ್ರಸಾಲ್ ಕ್ರೀಡಾಂಗಣದ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳಲ್ಲಿ ಸುಶೀಲ್ ಕುಮಾರ್ ಮತ್ತು ಅವರ 20 ರಿಂದ 25 ಸಹಚರರು ಸಾಗರ್ ಮತ್ತು ಇತರ ಇಬ್ಬರನ್ನು ಹಾಕಿ ಸ್ಟಿಕ್​ಗಳಿಂದ ಥಳಿಸುತ್ತಿರುವುದು ಸೆರೆಯಾಗಿದ್ದು, ಅದು ನಿಜವೆಂದು ಫೋರೆನ್ಸಿಕ್ ಸೈನ್ಸ್ ಲ್ಯಾಬ್ ಹೇಳಿತ್ತು. ಇದೀಗ ಘಟನೆಗೆ ಸಾಕ್ಷಿಯಾಗಿರುವ ಇನ್ನೊಂದು ವಿಡಿಯೋ ಹೊರಬಿದ್ದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ವಿಡಿಯೋ ಪೊಲೀಸರ ಕೈ ಸೇರಿದ್ದು, ಅದರಲ್ಲಿ 19ರಿಂದ 20 ಸೆಕೆಂಡ್​ ಅವಧಿಯ ದೃಶ್ಯಗಳು ಸುಶೀಲ್ ಕುಮಾರ್ ಹಾಗೂ ಅವರ ಸಹಚರರ ವಿರುದ್ಧ ಸ್ಪಷ್ಟ ಸಾಕ್ಷಿ ಒದಗಿಸಿವೆ. ಈ ವಿಡಿಯೋ ಸುಶೀಲ್​ ಅವರ ಆಪ್ತ ಸ್ನೇಹಿತ ಪ್ರಿನ್ಸ್ ಎಂಬುವವರ ಮೊಬೈಲ್​ನಲ್ಲಿ ಪತ್ತೆಯಾಗಿದ್ದು ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಪ್ರಿನ್ಸ್ ಎಂಬಾತನ ವಿರುದ್ಧವೂ ಸಾಕಷ್ಟು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

ಪೊಲೀಸರು ಹೇಳುವಂತೆ ಘಟನೆಯ ದೃಶ್ಯಾವಳಿಗಳನ್ನು ಚಿತ್ರೀಕರಿಸುವಂತೆ ಸ್ವತಃ ಸುಶೀಲ್​ ಕುಮಾರ್ ತಿಳಿಸಿದ್ದು, ಇತರೆ ಕುಸ್ತಿಪಟುಗಳಲ್ಲಿ ತನ್ನ ಬಗ್ಗೆ ಭಯ ಮೂಡಬೇಕು, ತಾನು ಏನೆಂದು ಗೊತ್ತಾಗಬೇಕು ಎಂದು ಹೇಳಿದ್ದರಂತೆ. ಅದರಂತೆ ಪ್ರಿನ್ಸ್​ ಎಂಬಾತ ಇದನ್ನು ಚಿತ್ರೀಕರಿಸಿಕೊಂಡಿದ್ದ. ವಿಡಿಯೋದಲ್ಲಿ ಸುಶೀಲ್ ಕುಮಾರ್ ಹಾಗೂ ಆತನ ಸಹಚರರು ನೆಲಕ್ಕೆ ಬಿದ್ದಿದ್ದವರನ್ನು ಮನಸೋ ಇಚ್ಛೆ ಥಳಿಸುತ್ತಿರುವುದು ಸೆರೆಯಾಗಿದೆ.

ಮೇ 23 ರಂದು ವಿಶ್ವ ಕುಸ್ತಿ ದಿನದಂದೇ ಭಾರತದ ಒಲಿಂಪಿಕ್ ಅಥ್ಲೀಟ್, ಎರಡು ಪದಕಗಳನ್ನು ಗೆದ್ದ ಏಕೈಕ ಆಟಗಾರ ಎಂಬ ಹಿರಿಮೆ ಹೊತ್ತು ಈಗ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆ ತಗ್ಗಿಸುವಂತೆ ಮಾಡಿರುವ ಸುಶೀಲ್ ಕುಮಾರ್​ರನ್ನು ಬಂಧಿಸಲಾಗಿದೆ. ಘಟನೆ ನಂತರ ಸುಮಾರು 20 ದಿನಗಳ ಕಾಲ ಪರಾರಿಯಾಗಿದ್ದ ಸುಶೀಲ್ ಕುಮಾರ್ ಅಂದು ಬೆಳಗ್ಗೆ ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸುಶೀಲ್ ಕುಮಾರ್ ಬಂಧನದ ವಿಡಿಯೋ ಕೂಡಾ ವೈರಲ್ ಆಗಿದೆ. ವೀಡಿಯೊದಲ್ಲಿ, ಸುಶೀಲ್ ಕುಮಾರ್ ಅವರ ಮುಖದ ಮೇಲೆ ಟವೆಲ್ ಸುತ್ತಿಕೊಂಡಿದ್ದು, ಸುತ್ತಲೂ ಪೊಲೀಸರು ಸುತ್ತುವರೆದಿರುವುದು ಕಂಡು ಬಂದಿದೆ. ಪ್ರಪಂಚದಾದ್ಯಂತ ಭಾರತೀಯ ಕುಸ್ತಿಪಟು ಎಂದು ಗರ್ವದಿಂದ ತಲೆ ಎತ್ತಿದ್ದ ವ್ಯಕ್ತಿ ಆ ರೀತಿ ಮುಖ ಮರೆಮಾಡಿಕೊಂಡಿದ್ದನ್ನು ನೋಡಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ವಿಡಿಯೋ ಹಂಚಿಕೊಳ್ಳುವಾಗ ಅನೇಕರು ಇದನ್ನು ಭಾರತೀಯ ಕ್ರೀಡಾ ಜಗತ್ತಿಗೆ ಕಪ್ಪು ದಿನ ಎಂದು ಕರೆದಿದ್ದರು. ಇದೀಗ ಘಟನೆಯ ವಿಡಿಯೋ ಕೂಡಾ ಅದೇ ರೀತಿ ಹರಿದಾಡುತ್ತಿದೆ.

ಇದನ್ನೂ ಓದಿ:
ಕೊಲೆ ಪ್ರಕರಣ; ಕುಸ್ತಿಪಟು ಸುಶೀಲ್ ಕುಮಾರ್ ವಿರುದ್ಧ ಸಿಸಿಟಿವಿ ಸಾಕ್ಷ್ಯ..ಆರೋಪಿ ಸುಳಿವು ಕೊಟ್ಟ ಮೀರತ್ ಟೋಲ್​​ಪ್ಲಾಜಾ 

Sushil Kumar: ವಿಶ್ವ ಕುಸ್ತಿ ದಿನದಂದೇ ಪೊಲೀಸರ ಅತಿಥಿಯಾದ ಕುಸ್ತಿಪಟು ಸುಶೀಲ್ ಕುಮಾರ್; ವಿಡಿಯೋ ನೋಡಿ

Published On - 3:06 pm, Fri, 28 May 21