ಜಮ್ಮು ಗಡಿ ಬಳಿ ಪತ್ತೆಯಾದ ಪಾಕಿಸ್ತಾನಿ ಡ್ರೋನ್ ಮೇಲೆ ಬಿಎಸ್ಎಫ್ ಗುಂಡು ಹಾರಾಟ

| Updated By: ರಶ್ಮಿ ಕಲ್ಲಕಟ್ಟ

Updated on: Jul 02, 2021 | 11:49 AM

Pakistani Drone: ಬಿಎಸ್ಎಫ್ ಮೂಲಗಳ ಪ್ರಕಾರ ಇದು ಅಂತರರಾಷ್ಟ್ರೀಯ ಗಡಿಯನ್ನು ದಾಟಲು ಪ್ರಯತ್ನಿಸುತ್ತಿರುವ ಕ್ವಾಡ್ ಕಾಪ್ಟರ್ , ಇದನ್ನು  ಈ ಪ್ರದೇಶದ ಕಣ್ಗಾವಲು ನಡೆಸಲು ಉದ್ದೇಶಿಸಲಾಗಿತ್ತು. ಬಿಎಸ್ಎಫ್ ಸಿಬ್ಬಂದಿ ಅದರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ ತಕ್ಷಣ, ಡ್ರೋನ್ ಹಿಂತಿರುಗಿತು ಎಂದು ಅವರು ಹೇಳಿದ್ದಾರೆ.

ಜಮ್ಮು ಗಡಿ ಬಳಿ ಪತ್ತೆಯಾದ ಪಾಕಿಸ್ತಾನಿ ಡ್ರೋನ್ ಮೇಲೆ ಬಿಎಸ್ಎಫ್ ಗುಂಡು ಹಾರಾಟ
ಜಮ್ಮು ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿ
Follow us on

ಜಮ್ಮು: ಪಾಕಿಸ್ತಾನದ ಕಣ್ಗಾವಲು ಡ್ರೋನ್ ಮೇಲೆ ಗಡಿ ಭದ್ರತಾ ಪಡೆ ಶುಕ್ರವಾರ ಮುಂಜಾನೆ ಗುಂಡು ಹಾರಿಸಿತು. ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್‌ನ ಜಬೊವಾಲ್ ಗ್ರಾಮದ ಅಂತರರಾಷ್ಟ್ರೀಯ ಗಡಿಯ ಬಳಿ ಈ ಡ್ರೋನ್ ಪತ್ತೆಯಾಗಿದೆ.

ಬಿಎಸ್ಎಫ್ ಮೂಲಗಳ ಪ್ರಕಾರ ಇದು ಅಂತರರಾಷ್ಟ್ರೀಯ ಗಡಿಯನ್ನು ದಾಟಲು ಪ್ರಯತ್ನಿಸುತ್ತಿರುವ ಕ್ವಾಡ್ ಕಾಪ್ಟರ್ , ಇದನ್ನು  ಈ ಪ್ರದೇಶದ ಕಣ್ಗಾವಲು ನಡೆಸಲು ಉದ್ದೇಶಿಸಲಾಗಿತ್ತು. ಬಿಎಸ್ಎಫ್ ಸಿಬ್ಬಂದಿ ಅದರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ ತಕ್ಷಣ, ಡ್ರೋನ್ ಹಿಂತಿರುಗಿತು ಎಂದು ಅವರು ಹೇಳಿದ್ದಾರೆ.

ಜಮ್ಮುವಿನಲ್ಲಿರುವ ಭಾರತೀಯ ವಾಯುಪಡೆ (ಐಎಎಫ್) ನಿಲ್ದಾಣದ ಮೇಲೆ ಭಾನುವಾರ ಡ್ರೋನ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆಗಳು ತೀವ್ರ ಎಚ್ಚರಿಕೆ ವಹಿಸಿವೆ.

ಅಂದಿನಿಂದ, ಪ್ರತಿದಿನ ಗಡಿಯಲ್ಲಿ ವಿವಿಧ ಪ್ರದೇಶಗಳಲ್ಲಿ ಡ್ರೋನ್‌ಗಳನ್ನು ಪತ್ತೆಯಾಗುತ್ತಿವೆ. ಭಾನುವಾರ ಮತ್ತು ಸೋಮವಾರದ ಮಧ್ಯರಾತ್ರಿಯಲ್ಲಿ ಕಲುಚಕ್ ಮತ್ತು ರತ್ನುಚಕ್ ನಲ್ಲಿರುವ ತನ್ನ ಬ್ರಿಗೇಡ್ ಕೇಂದ್ರ ಕಚೇರಿಯಲ್ಲಿ ಡ್ರೋನ್ ಚಟುವಟಿಕೆಯನ್ನು ತಡೆಯಿತು ಎಂದು ಸೇನೆಯು ಹೇಳಿದೆ.

ಭಾನುವಾರದ ದಾಳಿಯ ಹಿಂದೆ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಕೈವಾಡ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಗುರುವಾರ ಜಮ್ಮುವಿನಲ್ಲಿ  ಡ್ರೋನ್​ಗಳು ಕಾಣಿಸಿಕೊಂಡಿದ್ದು ಮೂರು ಪ್ರತ್ಯೇಕ ಸ್ಥಳಗಳಲ್ಲಿ ಡ್ರೋನ್​​ಗಳು ಪತ್ತೆಯಾಗಿತ್ತು. ಕಲುಚಕ್​ ಬಳಿ ಮುಂಜಾನೆ 4.40ರ ಹೊತ್ತಿಗೆ, 4.52ರ ಸಮಯದಲ್ಲಿ ಕುಂಜ್ವಾನಿಯಲ್ಲಿ ಡ್ರೋನ್​ ಹಾರಾಡಿದ್ದಾಗಿ ಭದ್ರತಾ ಪಡೆಗಳು ಮಾಹಿತಿ ನೀಡಿವೆ. ಕಳೆದ ನಾಲ್ಕು ದಿನಗಳಲ್ಲಿ ಜಮ್ಮು ಮತ್ತು ಅಲ್ಲಿನ ಸೇನಾ ಶಿಬಿರಗಳ ಸುತ್ತ ಸುಮಾರು ಏಳು ಡ್ರೋನ್​​ಗಳು ಹಾರಾಡಿವೆ.

ಜೂ.27ರಂದು ಜಮ್ಮುವಿನ ಏರ್​ಪೋರ್ಟ್​​ನಲ್ಲಿರುವ ಏರ್​ಫೋರ್ಸ್​ ಸ್ಟೇಶನ್​ನಲ್ಲಿ ಅವಳಿ ಸ್ಫೋಟವಾಗಿತ್ತು. ಈ ಸ್ಫೋಟಕವನ್ನು ಸ್ಫೋಟಿಸಲು ಡ್ರೋನ್​​ಗಳನ್ನೇ ಬಳಸಿದ್ದಾರೆಂದು ತನಿಖೆಯಿಂದ ಗೊತ್ತಿದೆ. ಇದೇ ಮೊದಲ ಬಾರಿಗೆ ಪಾಕಿಸ್ತಾನ ಮೂಲದ ಉಗ್ರಸಂಘಟನೆಗಳು ಸ್ಫೋಟಕವನ್ನು ಡ್ರೋನ್​ ಮೂಲಕ ಎಸೆದಿದ್ದಾರೆ ಎಂದೂ ಹೇಳಲಾಗಿದೆ. ಜಮ್ಮು ಏರ್​ಪೋರ್ಟ್​​ನಿಂದ ಅಂತಾರಾಷ್ಟ್ರೀಯ ಗಡಿ ಕೇವಲ 14 ಕಿಮೀ ದೂರ ಇದೆ. ಈ ಏರ್​ಪೋರ್ಟ್​ ಏರ್​ಫೋರ್ಸ್​ ನಿಯಂತ್ರಣದಲ್ಲಿದ್ದು, ಏರ್​ ಟ್ರಾಫಿಕ್​ ಕಂಟ್ರೋಲ್​ ಕೂಡ ಹೊಂದಿದೆ. ನಾಗರಿಕ ವಿಮಾನ ನಿಲ್ದಾಣವೂ ಹೌದು. ಹೀಗೆ ಹಾರಾಟ ನಡೆಸುತ್ತಿರುವ ಡ್ರೋನ್​ಗಳ ಮೇಲೆ ಭದ್ರತಾ ಪಡೆ ಸಿಬ್ಬಂದಿ ಗುಂಡಿನ ದಾಳಿಯನ್ನೂ ನಡೆಸುತ್ತಿದ್ದಾರೆ.

ಜಮ್ಮುವಿನಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಉಗ್ರ ಚಟುವಟಿಕೆಯಿಂದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸೆಕ್ಯೂರಿಟಿ ಫೋರ್ಸ್​ಗಳು ಹೈ ಅಲರ್ಟ್​​ನಲ್ಲಿದ್ದು, ಬುಧವಾರ ಪ್ರಧಾನಿ ನರೇಂದ್ರ ಮೋದಿಯವರು, ಗೃಹ ಸಚಿವ ಅಮಿತ್​ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಮತ್ತು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಜತೆ ಉನ್ನತ ಮಟ್ಟದ ಸಭೆಯನ್ನೂ ನಡೆಸಿದ್ದಾರೆ.

ಇದನ್ನೂ ಓದಿ: Explainer: ಡ್ರೋನ್ ದಾಳಿ ತಡೆಯಲು ಸಾಧ್ಯವೇ? ಹೇಗಿದೆ ಭಾರತದ ರಕ್ಷಣಾ ವ್ಯವಸ್ಥೆ?

(Suspected Pakistani surveillance drone spotted near border in Jammu and Kashmir’s Jabowal village)

Published On - 11:48 am, Fri, 2 July 21