26/11 ಮುಂಬೈ ದಾಳಿ ಆರೋಪಿ ತಹವ್ವುರ್ ರಾಣಾನನ್ನು ಈ ವರ್ಷದ ಅಂತ್ಯಕ್ಕೆ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೆನಡಾ-ಪಾಕಿಸ್ತಾನಿ ಪ್ರಜೆ ತಹವ್ವುರ್ ರಾಣಾನನ್ನು ಅಮೆರಿಕ ಹಸ್ತಾಂತರಿಸಬಹುದು. ಇಂಡಿಯನ್ ಎಕ್ಸ್ಪ್ರೆಸ್ ಈ ಕುರಿತು ವರದಿ ಮಾಡಿದೆ. ಡಿಸೆಂಬರ್ ತಿಂಗಳಿನಲ್ಲಿ ರಾಣಾ ಅವರನ್ನು ಹಸ್ತಾಂತರಿಸಬಹುದು ಎನ್ನಲಾಗುತ್ತಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ದೆಹಲಿಯ ಯುಎಸ್ ರಾಯಭಾರ ಕಚೇರಿಯಲ್ಲಿ ಸಭೆ ನಡೆಯಿತು. ಎರಡೂ ದೇಶಗಳ ಕೇಂದ್ರ ತನಿಖಾ ಸಂಸ್ಥೆಗಳು ಮತ್ತು ಕಾನೂನು ಇಲಾಖೆಗಳ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು. ಸುಮಾರು 3 ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ರಾಣಾ ಹಸ್ತಾಂತರದ ಕುರಿತು ಚರ್ಚೆ ನಡೆಸಲಾಯಿತು.
ಈ ಹಸ್ತಾಂತರಕ್ಕೆ ಭಾರತ ಸರ್ಕಾರದ ಸಿದ್ಧತೆಗಳ ಬಗ್ಗೆಯೂ ಚರ್ಚಿಸಲಾಯಿತು. ಅಲ್ಲದೆ, ರಾಣಾ ಜೈಲಿಗೆ ಬಂದ ನಂತರದ ವ್ಯವಸ್ಥೆಗಳ ಬಗ್ಗೆಯೂ ಚರ್ಚಿಸಲಾಯಿತು.
ಮತ್ತಷ್ಟು ಓದಿ:14 ವರ್ಷದಿಂದ ಅಮೆರಿಕದಿಂದ ಮುಂಬೈ ದಾಳಿಯ ಮಾಸ್ಟರ್ಮೈಂಡ್ ವಶಕ್ಕೆ ಹೆಣಗುತ್ತಿದೆ ಭಾರತ!
ಇದಕ್ಕೂ ಮೊದಲು ಸೆಪ್ಟೆಂಬರ್ 23 ರಂದು ಯುನೈಟೆಡ್ ಸ್ಟೇಟ್ಸ್ ಕೋರ್ಟ್ ಆಫ್ ಅಪೀಲ್ ರಾಣಾ ಅವರ ಮನವಿಯನ್ನು ತಿರಸ್ಕರಿಸಿತ್ತು. ಹಸ್ತಾಂತರ ಒಪ್ಪಂದದ ಅಡಿಯಲ್ಲಿ ಆರೋಪಿಗಳನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ತಹವ್ವುರ್ ರಾಣಾ ಅಪರಾಧ ಎಸಗಿದ್ದಾನೆ ಎಂಬ ಮ್ಯಾಜಿಸ್ಟ್ರೇಟ್ ತೀರ್ಮಾನವನ್ನು ಭಾರತ ಬೆಂಬಲಿಸುತ್ತದೆ ಎಂದು ಆಗಸ್ಟ್ 15 ರಂದು ನ್ಯಾಯಾಲಯ ಹೇಳಿತ್ತು. ತಹವ್ವುರ್ ರಾಣಾ ಪ್ರಸ್ತುತ ಲಾಸ್ ಏಂಜಲೀಸ್ ಜೈಲಿನಲ್ಲಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವರಿಗೆ ಇನ್ನೂ 45 ದಿನಗಳಿವೆ. ಇದರ ನಂತರ, ಹಸ್ತಾಂತರಕ್ಕೆ ಇನ್ನೂ 45 ದಿನಗಳು ತೆಗೆದುಕೊಳ್ಳಬಹುದು.
ರಾಣಾ ವಿರುದ್ಧ ಅಮೆರಿಕದಲ್ಲಿ ಹಲವು ಪ್ರಕರಣಗಳಲ್ಲಿ ವಿಚಾರಣೆ ನಡೆದಿತ್ತು. ಇದರಲ್ಲಿ ಮುಂಬೈ ದಾಳಿಯಲ್ಲಿ ಭಯೋತ್ಪಾದಕ ಸಂಘಟನೆಯೊಂದಿಗೂ ಸಂಬಂಧವಿದೆ ಎಂಬ ಆರೋಪವೂ ಸೇರಿತ್ತು. ಭಯೋತ್ಪಾದಕ ಸಂಘಟನೆಗೆ ಬೆಂಬಲ ನೀಡಿದ್ದಕ್ಕಾಗಿ ಮತ್ತು ಡೆನ್ಮಾರ್ಕ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸುವ ಸಂಚಿನಲ್ಲಿ ಭಾಗಿಯಾಗಿದ್ದಕ್ಕಾಗಿ ಶಿಕ್ಷೆ ವಿಧಿಸಲಾಗಿತ್ತು.
26 ನವೆಂಬರ್ 2008 ರಂದು ಮುಂಬೈನಲ್ಲಿ ಭಯೋತ್ಪಾದಕರು ದೊಡ್ಡ ದಾಳಿ ನಡೆಸಿದರು. 2011ರಲ್ಲಿ ಎನ್‌ಐಎ ರಾಣಾ ಸೇರಿದಂತೆ 9 ಜನರ ವಿರುದ್ಧ ಈ ದಾಳಿಗೆ ಯೋಜನೆ ರೂಪಿಸಿ ಆರೋಪಪಟ್ಟಿ ಸಲ್ಲಿಸಿತ್ತು.
ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಗುಂಪಿನ ಭಯೋತ್ಪಾದಕರು 2008ರ ನವೆಂಬರ್ 26ರಂದು ರಾತ್ರಿ ಮುಂಬೈ ನಗರವನ್ನು ಪ್ರವೇಶಿಸಿದ್ದರು. ಏಕಾಏಕಿ ನಡೆಸಿದ ಗುಂಡಿನಲ್ಲಿ ದಾಳಿಯಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ 166 ಜನರು ಮೃತಪಟ್ಟು 300 ಜನರು ಗಾಯಗೊಂಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ