14 ವರ್ಷದಿಂದ ಅಮೆರಿಕದಿಂದ ಮುಂಬೈ ದಾಳಿಯ ಮಾಸ್ಟರ್ಮೈಂಡ್ ವಶಕ್ಕೆ ಹೆಣಗುತ್ತಿದೆ ಭಾರತ!
ಮುಂಬೈ ದಾಳಿ ನಡೆದು 16 ವರ್ಷಗಳಾದರೂ ಅಮೆರಿಕದಿಂದ ಆ ದಾಳಿಯ ಮಾಸ್ಟರ್ಮೈಂಡ್ ಡೇವಿಡ್ ಹೆಡ್ಲಿಯನ್ನು ವಶಕ್ಕೆ ಪಡೆಯಲು ಭಾರತಕ್ಕೆ ಸಾಧ್ಯವಾಗಿಲ್ಲ. ಈಗೇನಾದರೂ ಅಮೆರಿಕ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ್ದ ಭಾರತೀಯ ಮಾಜಿ ಗುಪ್ತಚರ ಅಧಿಕಾರಿ ವಿಕಾಸ್ ಯಾದವ್ನನ್ನು ಹಸ್ತಾಂತರಿಸುವಂತೆ ಭಾರತಕ್ಕೆ ಬೇಡಿಕೆಯಿಟ್ಟರೆ ಭಾರತ ಅದಕ್ಕೆ ಬದಲಾಗಿ ಡೇವಿಡ್ ಹೆಡ್ಲಿಯನ್ನು ಹಸ್ತಾಂತರಿಸಲು ಕೇಳುವ ಸಾಧ್ಯತೆಗಳಿವೆ. ಆದರೆ, ಈ ಬಗ್ಗೆ ಅಮೆರಿಕ ಇನ್ನೂ ಯಾವುದೇ ಹೆಜ್ಜೆಯಿಟ್ಟಿಲ್ಲ.
ನವದೆಹಲಿ: ಅಮೆರಿಕಕ್ಕೆ ಬೇಕಾಗಿರುವ ಭಾರತದ ಮಾಜಿ ಗುಪ್ತಚರ ಅಧಿಕಾರಿ ವಿಕಾಸ್ ಯಾದವ್ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಮತ್ತೆ ಮುಂಬೈ ದಾಳಿಯ ರೂವಾರಿಯನ್ನು ಭಾರತಕ್ಕೆ ಅಮೆರಿಕ ಹಸ್ತಾಂತರಿಸುತ್ತದೆಯೇ? ಎಂಬ ಕುರಿತು ಚರ್ಚೆಗಳು ಎದ್ದಿವೆ. ಮುಂಬೈ ದಾಳಿ ನಡೆದು 16 ವರ್ಷಗಳೇ ಕಳೆದರೂ ಆ ದಾಳಿಯ ಮಾಸ್ಟರ್ಮೈಂಡ್ ಡೇವಿಡ್ ಹೆಡ್ಲಿಯನ್ನು ಅಮೆರಿಕದಿಂದ ತನ್ನ ವಶಕ್ಕೆ ಪಡೆಯಲು ಭಾರತಕ್ಕೆ ಸಾಧ್ಯವಾಗಿಲ್ಲ.
ಗುಪ್ತಚರ ಮೂಲಗಳ ಪ್ರಕಾರ, ಭಾರತವು ಹಲವಾರು ಪ್ರಯತ್ನಗಳ ಹೊರತಾಗಿಯೂ ಹಸ್ತಾಂತರದ ಬಗ್ಗೆ ಭಾರತ ಮನವಿ ಮಾಡಿದರೂ ಯುಎಸ್ ಎಂದಿಗೂ ಸಹಕರಿಸಲಿಲ್ಲ, ಈ ಕಾರಣದಿಂದಾಗಿ ಮುಂಬೈ ಭಯೋತ್ಪಾದಕ ದಾಳಿಯ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. 2008ರ ಮುಂಬೈ ಭಯೋತ್ಪಾದನಾ ದಾಳಿಯ ಪ್ರಮುಖ ಸಂಚುಕೋರ ಪಾಕಿಸ್ತಾನಿ ಮೂಲದ ಅಮೆರಿಕ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿಯನ್ನು ಹಸ್ತಾಂತರಿಸುವಂತೆ ಭಾರತವು ಅಮೆರಿಕದಿಂದ ನೆರವು ಕೋರಿ 14 ವರ್ಷಗಳು ಕಳೆದಿವೆ. ಆದರೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇದನ್ನೂ ಓದಿ: ಭಾರತಕ್ಕೆ ಬರಲಿವೆ 31 ಪ್ರಿಡೇಟರ್ ಡ್ರೋನ್; ಅಮೆರಿಕದೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ
ಉನ್ನತ ಗುಪ್ತಚರ ಮೂಲಗಳ ಪ್ರಕಾರ, ಹೆಡ್ಲಿಯನ್ನು ಭಾರತಕ್ಕೆ ಕರೆತರಲು ಸರ್ಕಾರ ಹೆಣಗಾಡುತ್ತಿದೆ. ಖಲಿಸ್ತಾನಿ ಭಯೋತ್ಪಾದಕ ಮತ್ತು ಅಮೆರಿಕ ಪ್ರಜೆ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಕ್ಕಾಗಿ ವಿಕಾಸ್ ಯಾದವ್ ಅವರನ್ನು ಎಫ್‌ಬಿಐ ಹುಡುಕುವುದರೊಂದಿಗೆ ಹಸ್ತಾಂತರದ ವಿಷಯವು ಮತ್ತೊಮ್ಮೆ ಚರ್ಚೆಯಾಗುತ್ತಿದೆ. ಅಮೆರಿಕ ಇನ್ನೂ ಆತನ ಹಸ್ತಾಂತರವನ್ನು ಕೋರಿಲ್ಲವಾದರೂ, ಸಹಾಯಕ್ಕಾಗಿ ಭಾರತಕ್ಕೆ ಮನವಿ ಸಲ್ಲಿಸುವ ಸಾಧ್ಯತೆಯಿದೆ.
2011ರ ಚಾರ್ಜ್ ಶೀಟ್ ಪ್ರಕಾರ, ಡೇವಿಡ್ ಹೆಡ್ಲಿ ವಿರುದ್ಧ ಪಿತೂರಿ, ಭಾರತದ ವಿರುದ್ಧ ಯುದ್ಧ ನಡೆಸುವುದು, ಕೊಲೆ, ಕೊಲೆ ಯತ್ನ ಮತ್ತು ಭಯೋತ್ಪಾದಕ ಚಟುವಟಿಕೆಗಳ ಆರೋಪ ಹೊರಿಸಲಾಗಿದೆ. ಮೂಲಗಳ ಪ್ರಕಾರ, ಹೆಡ್ಲಿಗೆ ಅಮೆರಿಕದಲ್ಲಿ 35 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಆದರೆ ಅವನನ್ನು ಭಾರತಕ್ಕೆ ಕರೆತರುವ ಪ್ರಯತ್ನಗಳು ವಿಫಲವಾಗಿವೆ.
ಇದನ್ನೂ ಓದಿ: ಅಮೆರಿಕದಲ್ಲಿ ಪನ್ನು ಹತ್ಯೆಗೆ ಸಂಚು ರೂಪಿಸಿದವನು ಇನ್ನುಮುಂದೆ ಭಾರತ ಸರ್ಕಾರದ ಉದ್ಯೋಗಿಯಾಗಿರುವುದಿಲ್ಲ: ಮ್ಯಾಥ್ಯೂ ಮಿಲ್ಲರ್
2010ರಲ್ಲಿ ಭಾರತವು ಮೊದಲು ಹೆಡ್ಲಿಯನ್ನು ಹಸ್ತಾಂತರಿಸುವಂತೆ ವಿನಂತಿಸಿತು. ಆದರೆ ತಮ್ಮ ಮನವಿ ಒಪ್ಪಂದದ ನಿಯಮಗಳನ್ನು ಉಲ್ಲೇಖಿಸಿ US ಅದನ್ನು ತಿರಸ್ಕರಿಸಿತು. ಭಾರತವು 2011 ಮತ್ತೆ ಹಸ್ತಾಂತರ ವಿನಂತಿಯನ್ನು ನವೀಕರಿಸಿತು. ಅದನ್ನು ಮತ್ತೆ US ತಿರಸ್ಕರಿಸಿತು. 2013ರಲ್ಲಿ ಭಾರತವು ಹೊಸ ಹಸ್ತಾಂತರ ವಿನಂತಿಯನ್ನು ಮಾಡಿತು. ಮುಂಬೈ ದಾಳಿಯ ಇನ್ನೊಬ್ಬ ಆರೋಪಿ ಅಬು ಜುಂದಾಲ್ನ ವಿಚಾರಣೆಗೆ ಹೆಡ್ಲಿಯ ಸಾಕ್ಷ್ಯವು ನಿರ್ಣಾಯಕವಾಗಿದೆ ಎಂದು ಒತ್ತಿಹೇಳಿತು. ಅದನ್ನು ಯುಎಸ್ ಮತ್ತೆ ನಿರಾಕರಿಸಿತು. 2016ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೊಸ ಪುರಾವೆಗಳನ್ನು ಎತ್ತಿ ಹಿಡಿಯುವ ಹೊಸ ಹಸ್ತಾಂತರ ಕೋರಿಕೆಯನ್ನು ಸಲ್ಲಿಸಿದಾಗ ಇದು ಪುನರಾವರ್ತನೆಯಾಯಿತು. US ಆಗಲೂ ಕೂಡ ಸಹಕರಿಸಲಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ