ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಲೇ ಇದೆ ತಾಲಿಬಾನ್ ಕ್ರೂರತೆ; ಉಗ್ರರ ದರ್ಬಾರ್ ಹೇಗಿದೆ ಗೊತ್ತಾ?

S Chandramohan

| Edited By: Sushma Chakre

Updated on: Sep 13, 2021 | 6:47 PM

ಸಾಮಾನ್ಯ ಜನರನ್ನೇ ಹೀಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡುತ್ತಿರುವ ತಾಲಿಬಾನಿಗಳ ಕೈಗೆ ವೈರಿ ಪಡೆ ಪಂಜಶೀರ್ ಪಡೆಯ ಯೋಧರು ಸಿಕ್ಕರೆ ಅವರ ಸ್ಥಿತಿ ಹೇಗಾಗಬೇಡ. ಪಂಜಶೀರ್ ಪ್ರಾಂತ್ಯಕ್ಕೆ ನುಗ್ಗಿರುವ ತಾಲಿಬಾನಿಗಳು ಸೆರೆ ಸಿಕ್ಕ ಪಂಜಶೀರ್​ನ ಪಡೆಯ ಯೋಧರ ಕಣ್ಣಿಗೆ ಬಟ್ಟೆ ಕಟ್ಟಿ ಹತ್ಯೆ ಮಾಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಲೇ ಇದೆ ತಾಲಿಬಾನ್ ಕ್ರೂರತೆ; ಉಗ್ರರ ದರ್ಬಾರ್ ಹೇಗಿದೆ ಗೊತ್ತಾ?
ತಾಲಿಬಾನ್

ನವದೆಹಲಿ: ಅಫ್ಘನಿಸ್ತಾನದಲ್ಲಿ ತಾಲಿಬಾನ್ ಸಂಘಟನೆಯ ಕ್ರೂರ ಆಳ್ವಿಕೆ ಮುಂದುವರಿದಿದೆ. ವೈರಿಗಳನ್ನು ಕ್ರೂರವಾಗಿ ಕೊಲ್ಲುವ ಮೂಲಕ ಕ್ರೂರತೆಯ ಅಟ್ಟಹಾಸ ಮೆರೆದಿದ್ದಾರೆ. ಮಹಿಳೆಯನ್ನು ಭೂಮಿಯಲ್ಲಿ ಮುಚ್ಚಿ ತಲೆಗೆ ಕಲ್ಲಿನಿಂದ ಹೊಡೆದು ಸಾಯಿಸಿದ್ದಾರೆ. ಪಂಜಶೀರ್ ಪಡೆಯ ಯೋಧರ ಕಣ್ಣಿಗೆ ಬಟ್ಟೆ ಕಟ್ಟಿ ಹತ್ಯೆ ಮಾಡುತ್ತಿದ್ದಾರೆ. ತಾಲಿಬಾನ್ ಕ್ರೂರತೆಯ ಉದಾಹರಣೆಗಳು ಒಂದೆರಡಲ್ಲ. ತಾಲಿಬಾನ್ ಸಂಘಟನೆ ಅಂದರೆ ಕ್ರೂರತೆ, ತಾಲಿಬಾನ್ ಅಂದರೆ ಅಮಾನವೀಯತೆ. ತಾಲಿಬಾನ್ ಅಂದರೆ ದರ್ಪ, ದೌರ್ಜನ್ಯಗಳಿಗೆ ಮತ್ತೊಂದು ಹೆಸರು. ತಾಲಿಬಾನ್ ಆಳ್ವಿಕೆಯಲ್ಲಿ ಮಾನವ ಹಕ್ಕುಗಳಿಗೆ ಮೂರು ಕಾಸಿನ ಬೆಲೆಯೂ ಇಲ್ಲ. ಹಮ್ಮುರಾಬಿ ಕಾನೂನು ಜಾರಿಗೊಳಿಸುವ ಸಂಘಟನೆಯೇ ತಾಲಿಬಾನ್. ಈಗ ಅಫ್ಘನಿಸ್ತಾನದಲ್ಲಿ ತಾಲಿಬಾನ್ ಸಂಘಟನೆಯ ಕ್ರೂರತೆಯ ದರ್ಬಾರ್ ಮುಂದುವರಿದಿದೆ. ತಮ್ಮ ವೈರಿಗಳನ್ನು ಕ್ರೂರವಾಗಿ ಕೊಲ್ಲುವ ಮೂಲಕ ತಾಲಿಬಾನ್ ಅಟ್ಟಹಾಸ ಮೆರೆಯುತ್ತಿದೆ. ಅಫ್ಘನಿಸ್ತಾನದಲ್ಲಿ ಮಹಿಳೆಯರ ಮೇಲೆ ತಾಲಿಬಾನ್ ಸಂಘಟನೆಯು ಹಲ್ಲೆ ನಡೆಸಿದೆ.

ಮಹಿಳೆಯನ್ನು ತಲೆಯವರೆಗೂ ಭೂಮಿಯಲ್ಲಿ ಮುಚ್ಚಿ ತಲೆಗೆ ಕಲ್ಲಿನಿಂದ ಹೊಡೆದು ತಾಲಿಬಾನ್ ಉಗ್ರಗಾಮಿಗಳು ಸಾಯಿಸಿದ್ದಾರೆ. ಮಹಿಳೆಯರು, ತಮ್ಮ ವೈರಿಗಳನ್ನು ಕಲ್ಲಿನಿಂದ ಹೊಡೆದು ಸಾಯಿಸುವುದು ತಾಲಿಬಾನ್ ಸಂಘಟನೆಯ ಹಳೆಯ ಸ್ಟೈಲ್. 1996ರಿಂದ 2001ರವರೆಗಿನ ಅವಧಿಯಲ್ಲೂ ಸಣ್ಣ ತಪ್ಪು ಮಾಡಿದವರನ್ನು ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸುತ್ತಿದ್ದರು. ಈಗಲೂ ಅದೇ ಸ್ಟೈಲ್ ಶಿಕ್ಷೆ ಮುಂದುವರಿದಿದೆ. ತಾಲಿಬಾನಿಗಳು ಈಗ ಉದಾರವಾಗಿ ಆಳ್ವಿಕೆ ನೀಡುವ ಸೂಚನೆ ನೀಡಿದ್ದರೂ ಅದನ್ನು ಜಗತ್ತು ನಂಬಿರಲಿಲ್ಲ. ಜಗತ್ತಿನ ನಂಬಿಕೆ ಹುಸಿಯಾಗಲಿಲ್ಲ. ತಾಲಿಬಾನ್ ಸಂಘಟನೆಯು ತನ್ನ ಹಳೆಯ ಚಾಳಿಯನ್ನೇ ಮುಂದುವರಿಸಿದೆ. ಈ ಬಾರಿ ಅಪರಾಧ ಎಸಗಿದವರ ಬಗ್ಗೆ ಸರಿಯಾದ ತನಿಖೆ ನಡೆಸುತ್ತೇವೆ. ಬಳಿಕ ಶಿಕ್ಷೆ ಕೊಡುತ್ತೇವೆ ಎಂದು ತಾಲಿಬಾನ್ ವಕ್ತಾರರು ಹೇಳಿದ್ದರು. ಆದರೆ, ವಾಸ್ತವವಾಗಿ ಅಫ್ಘನಿಸ್ತಾನದಲ್ಲಿ ಆಗುತ್ತಿರುವುದೇ ಬೇರೆ. ಹಳೆಯ ಶಿಕ್ಷೆ ನೀಡುವ ಪದ್ಧತಿಯೇ ಮುಂದುವರೆದಿದೆ. ಅಫ್ಘನಿಸ್ತಾನದಲ್ಲಿ ತಾಲಿಬಾನಿಗಳಿಗೆ ಮಾನವ ಹಕ್ಕು, ಮನುಷ್ಯತ್ವ, ಮಾನವೀಯತೆ ಎಂಬುದು ಯಾವುದೂ ಇಲ್ಲ. ಷರಿಯಾ ಕಾನೂನು ಒಂದೇ ತಾಲಿಬಾನಿಗಳಿಗೆ ಗೊತ್ತಿರೋದು. ತಾಲಿಬಾನ್ ಕೆಲವರ ಕೈಯನ್ನು ಕತ್ತರಿಸಿದೆ. ಇನ್ನೂ ಕಂದಹಾರ್ ನಲ್ಲಿ ಮಹಿಳೆಯೊಬ್ಬಳ ಮನೆಗೆ ನುಗ್ಗಿದ ತಾಲಿಬಾನ್ ಉಗ್ರರು ಆಕೆಯ ಇಬ್ಬರು ಸೋದರರನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ಒಬ್ಬ ಸೋದರನನ್ನು ಹತ್ಯೆ ಮಾಡಿದ್ದಾರೆ. ಕಾಬೂಲ್ ನಲ್ಲಿ ಮನೆ ಹೊರಗೆ ನಿಂತಿದ್ದ ತನ್ನ ಪತ್ನಿಯನ್ನು ತಾಲಿಬಾನ್ ಹತ್ಯೆ ಮಾಡಿದೆ ಎಂದು ಅಬ್ದುಲ್ ಖಲೀಕಾ ಹೇಳಿದ್ದಾರೆ. ಆದರೆ, ತಾಲಿಬಾನಿಗಳು ಆಯ್ಕೆ ಮಾಡಿರುವ ಪ್ರಧಾನಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ, ಸಾಮಾನ್ಯ ಜನರಿಗೆ ಯಾವುದೇ ತೊಂದರೆ ಕೊಡಬೇಡಿ ಎಂದು ಆಡಿಯೋ ಮೇಸೇಜ್​ನಲ್ಲಿ ಹೇಳಿದ್ದಾನೆ. ಆದರೆ, ತಾಲಿಬಾನ್ ಉಗ್ರರು ಈ ಮಾತುನ್ನು ಕೂಡ ಕೇಳುತ್ತಿಲ್ಲ.

ಸಾಮಾನ್ಯ ಜನರನ್ನೇ ಹೀಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡುತ್ತಿರುವ ತಾಲಿಬಾನಿಗಳ ಕೈಗೆ ವೈರಿ ಪಡೆ ಪಂಜಶೀರ್ ಪಡೆಯ ಯೋಧರು ಸಿಕ್ಕರೆ ಅವರ ಸ್ಥಿತಿ ಹೇಗಾಗಬೇಡ. ಪಂಜಶೀರ್ ಪ್ರಾಂತ್ಯಕ್ಕೆ ನುಗ್ಗಿರುವ ತಾಲಿಬಾನಿಗಳು ಸೆರೆ ಸಿಕ್ಕ ಪಂಜಶೀರ್​ನ ಪಡೆಯ ಯೋಧರ ಕಣ್ಣಿಗೆ ಬಟ್ಟೆ ಕಟ್ಟಿ ಹತ್ಯೆ ಮಾಡಿದ್ದಾರೆ.

ಪಂಜಶೀರ್ ಪ್ರಾಂತ್ಯದಲ್ಲಿ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹಾ ಮನೆಗೆ ತಾಲಿಬಾನ್ ಉಗ್ರರು ನುಗ್ಗಿದ್ದಾರೆ. ಮನೆಯನ್ನೆಲ್ಲ ಜಾಲಾಡಿದ್ದಾರೆ. ಈ ವೇಳೆ 6.5 ಮಿಲಿಯನ್ ಡಾಲರ್ ಹಣ, 18 ಪೀಸ್ ಚಿನ್ನ ಸಿಕ್ಕಿದೆ ಎಂದು ತಾಲಿಬಾನ್ ಹೇಳಿದೆ. ಹಣ, ಚಿನ್ನವನ್ನು ಜಫ್ತಿ ಮಾಡಿರುವುದಾಗಿ ತಾಲಿಬಾನ್ ಹೇಳಿದೆ. ಡಾಲರ್ ಹಣ ಚಿನ್ನ ಜಪ್ತಿ ಮಾಡುತ್ತಿರುವ ವಿಡಿಯೋ ಕೂಡ ಬಿಡುಗಡೆ ಆಗಿದೆ. ಆದರೆ, ಇದಕ್ಕೆ ಅಮರುಲ್ಲಾ ಸಲೇಹಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಮರುಲ್ಲಾ ಸಲೇಹಾ ಹಾಗೂ ಪಂಜಶೀರ್ ಪಡೆಯ ನಾಯಕ ಅಹಮದ್ ಮಸೂದ್ ಇಬ್ಬರೂ ದೇಶ ಬಿಟ್ಟು ಹೋಗಿಲ್ಲ. ಇಬ್ಬರೂ ಪಂಜಶೀರ್ ಪ್ರಾಂತ್ಯದಲ್ಲೇ ಇದ್ದಾರೆ ಎಂದು ನ್ಯಾಷನಲ್ ರೆಸಿಸ್ಟನ್ಸ್ ಫೋರ್ಸ್ ಹೇಳಿದೆ.

ಕಳೆದ ವಾರ ಟೋಲೋ ನ್ಯೂಸ್​ಗೆ ಸಂದರ್ಶನ ನೀಡಿದ್ದ ತಾಲಿಬಾನ್ ನಾಯಕ ಸೈಯದ್ ಜಾಕಿರುಲ್ಲಾ ಮಹಿಳೆಯರು ಅಫ್ಘನಿಸ್ತಾನದಲ್ಲಿ ಮಂತ್ರಿಯಾಗುವಂತಿಲ್ಲ. ಮಹಿಳೆಯರು ಮಕ್ಕಳನ್ನು ಮಾತ್ರ ಹೆರಬೇಕೆಂದು ನೇರವಾಗಿಯೇ ಹೇಳಿದ್ದ. ಇದಕ್ಕೆ ಈಗ ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಪ್ರತಿಕ್ರಿಯೆ ನೀಡಿದ್ದಾನೆ. ಮಹಿಳೆಯರು ಮಂತ್ರಿಯಾಗುವಂತಿಲ್ಲ ಎಂಬುದು ತಾಲಿಬಾನ್ ಸಂಘಟನೆಯ ಅಧಿಕೃತ ಹೇಳಿಕೆಯಲ್ಲ. ತಾಲಿಬಾನ್ ಸಂಘಟನೆಯ ನೀತಿಯೂ ಅಲ್ಲ. ತಾಲಿಬಾನ್ ಸಂಘಟನೆಯ ಅಧಿಕೃತ ವಕ್ತಾರರು ಮಾತ್ರ ಹೇಳಿಕೆ ನೀಡಬೇಕು. ಮಹಿಳೆಯರು ಮಂತ್ರಿಯಾಗುವಂತಿಲ್ಲ ಎಂಬುದು ತಾಲಿಬಾನ್ ಸಂಘಟನೆಯ ಅಧಿಕೃತ ನಿಲುವು ಅಲ್ಲ ಎಂದು ಸುಹೇಲ್ ಶಾಹೀನ್ ಹೇಳಿದ್ದಾನೆ.

ಇದರ ಮಧ್ಯೆಯೇ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ತಾಲಿಬಾನ್ ಆಳ್ವಿಕೆ ಶುರುವಾದ ಬಳಿಕ ಮೊದಲ ಕಮರ್ಷಿಯಲ್ ವಿಮಾನ ಬಂದಿದೆ. ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್​ಲೈನ್ಸ್ ಗೆ ಸೇರಿದ್ದ ವಿಮಾನ ಕಾಬೂಲ್ ವಿಮಾನ ನಿಲ್ದಾಣಕ್ಕೆ ಬಂದಿದೆ. ತಾಲಿಬಾನಿಗಳಿಗೆ ಜಾಗತಿಕ ಸಮುದಾಯ ಮಾನ್ಯತೆ ನೀಡಬಾರದೆಂದು ಆಮೆರಿಕಾದಲ್ಲಿರುವ ಅಫ್ಘನ್ ಜನರು ಆಗ್ರಹಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಬುರ್ಕಾ ಧರಿಸಿ ಹೊರಗೆ ಬರಬೇಕು ಎನ್ನುವುದು ತಾಲಿಬಾನಿಗಳ ನಿಲುವು. ಇದನ್ನು ಧಿಕ್ಕರಿಸಲು ಅಫ್ಘನಿಸ್ತಾನದ ಯುವತಿಯರು, ಮಹಿಳೆಯರು ತಮ್ಮ ಸಂಪ್ರದಾಯಿಕ ಡ್ರೆಸ್ ಧರಿಸಿರುವ ಪೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರ ಅಭಿಯಾನವನ್ನೇ ನಡೆಸುತ್ತಿದ್ದಾರೆ.

ಇನ್ನೂ ತಾಲಿಬಾನ್​ನ ಉಪ ಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬಾರದರ್, ತನ್ನ ಸಾವು, ಗಾಯಗೊಂಡ ಬಗೆಗಿನ ವದಂತಿಗಳೆಲ್ಲಾ ಸುಳ್ಳು ಎಂದು ವಾಯ್ಸ್ ಮೇಸೇಜ್ ಬಿಡುಗಡೆ ಮಾಡಿದ್ದಾನೆ. ತಾಲಿಬಾನ್ ಉಗ್ರರ ಅಂತರಿಕ ಸಂಘರ್ಷದಿಂದ ಮುಲ್ಲಾ ಅಬ್ದುಲ್ ಘನಿ ಬಾರದರ್ ಸಾವನ್ನಪ್ಪಿದ್ದಾನೆ, ಗಾಯಗೊಂಡಿದ್ದಾನೆ ಎನ್ನುವ ವದಂತಿ ಇತ್ತು. ಇದಕ್ಕೆ ಈಗ ಸ್ಪಷ್ಟನೆ ಕೊಟ್ಟಿದ್ದಾನೆ. ಕತಾರ್ ವಿದೇಶಾಂಗ ಮಂತ್ರಿ ಮೊಹಮ್ಮದ್ ಅಬ್ದುಲಾ ರೆಹಮಾನ್ ಕಾಬೂಲ್ ಗೆ ಭೇಟಿ ನೀಡಿ ತಾಲಿಬಾನ್ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಜೊತೆಗೆ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ, ಡಾಕ್ಟರ್ ಅಬ್ದುಲ್ಲಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: Afghanistan Crisis: ಅಫ್ಘಾನಿಸ್ತಾನದ ಗೌಪ್ಯ ಸ್ಥಳದಿಂದ ಅಮೆರಿಕನ್ನರು, ಅಫ್ಘಾನ್​ ಕಮಾಂಡೋಗಳನ್ನು ರಹಸ್ಯವಾಗಿ ಶಿಫ್ಟ್​ ಮಾಡಿದ್ದು ಹೇಗೆ?

ಪುರುಷರು ಇಲ್ಲದಿರುವ ತರಗತಿಯಲ್ಲಿ ಮಾತ್ರ ಮಹಿಳೆಯರು ಕಲಿಯಬಹುದು, ಇಸ್ಲಾಮಿಕ್ ಉಡುಗೆ ಕಡ್ಡಾಯ ಎಂದ ತಾಲಿಬಾನ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada