ಚೆನ್ನೈ: ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷಗಳು ಭರ್ಜರಿ ತಯಾರಿಯಲ್ಲಿವೆ. DMK ಪಕ್ಷ AIADMK ಹಾಗೂ ಬಿಜೆಪಿ ಮೈತ್ರಿ ಪಕ್ಷವನ್ನು ಮಣಿಸಲು ಸರ್ವ ಸನ್ನದ್ಧವಾಗುತ್ತಿದೆ. ಇಂದು (ಮಾರ್ಚ್ 8) CPI(M) ಡಿಎಂಕೆ ಜತೆಗೆ ಮೈತ್ರಿ ಘೋಷಣೆ ಮಾಡಿದ್ದು, ವಿಧಾನಸಭಾ ಚುನಾವಣೆಗೆ 6 ಸೀಟ್ಗಳನ್ನು ಪಡೆದುಕೊಂಡಿದೆ. ನಾವು ಎಲ್ಲಾ 234 ಕ್ಷೇತ್ರಗಳಲ್ಲೂ AIDMK-BJP ಪಕ್ಷವನ್ನು ಸೋಲಿಸಲು ಕೆಲಸ ಮಾಡುತ್ತೇವೆ ಎಂದು ತಮಿಳುನಾಡು CPI(M) ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣನ್ ಹೇಳಿದ್ದಾರೆ.
ಇಲ್ಲಿಯವರೆಗೆ ದ್ರಾವಿಡ ಮುನ್ನೇತ್ರ ಕಳಗಂ (DMK) ಒಟ್ಟು 54 ಕ್ಷೇತ್ರಗಳನ್ನು ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ. CPM, CPI, MDMK ಹಾಗೂ VCK ಪಕ್ಷಕ್ಕೆ ತಲಾ 6 ಕ್ಷೇತ್ರಗಳು, ಕಾಂಗ್ರೆಸ್ಗೆ 25 ಕ್ಷೇತ್ರಗಳು, IUMLಗೆ 3 ಮತ್ತು MMKಗೆ 2 ಸೀಟ್ಗಳನ್ನು ನೀಡಿದೆ.
ದ್ರಾವಿಡ ಮುನ್ನೇತ್ರ ಕಳಗಂ (DMK) ತನ್ನ ಮೈತ್ರಿ ಪಕ್ಷವಾದ ಕಾಂಗ್ರೆಸ್ಗೆ 25 ಸೀಟುಗಳನ್ನು ನೀಡುವುದಾಗಿ ಭಾನುವಾರ ತೀರ್ಮಾನ ಕೈಗೊಂಡಿತ್ತು. ಭಾನುವಾರ ಬೆಳಗ್ಗೆ ನಡೆದ ಸಭೆಯಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಮತ್ತು ತಮಿಳುನಾಡು ಕಾಂಗ್ರೆಸ್ ಸಮಿತಿ (TNCC) ಮುಖ್ಯಸ್ಥ ಕೆ.ಎಸ್.ಅಳಗಿರಿ ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದರು.
25 ವಿಧಾನಸಭೆ ಕ್ಷೇತ್ರ ಮತ್ತು ಕನ್ಯಾಕುಮಾರಿಯಲ್ಲಿ ಒಂದು ಲೋಕಸಭಾ ಸ್ಥಾನದಲ್ಲಿ ಕಾಂಗ್ರೆಸ್ ಸ್ಪರ್ಧೆಗಿಳಿಯಲಿದೆ. ಕಳೆದ ವರ್ಷ ಕಾಂಗ್ರೆಸ್ ಸಂಸದ ಹೆಚ್. ವಸಂತಕುಮಾರ್ ಕೊವಿಡ್ ನಿಂದ ನಿಧನರಾದ ಹಿನ್ನೆಲೆಯಲ್ಲಿ ಕನ್ಯಾಕುಮಾರಿ ಲೋಕಸಭಾ ಸ್ಥಾನ ಖಾಲಿಯಾಗಿ ಉಳಿದಿತ್ತು.
ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಳಗಿರಿ, ಡಿಎಂಕೆ ಜತೆಗಿನ ಸೀಟು ಹಂಚಿಕೆ ಒಪ್ಪಂದಕ್ಕೆ ನಾವು ಸಹಿ ಹಾಕಿದ್ದೇವೆ. 25 ವಿಧಾನಸಭಾ ಸ್ಥಾನಗಳಲ್ಲಿ ಹಾಗೂ ಕನ್ಯಾಕುಮಾರಿ ಲೋಕಸಭಾ ಸ್ಥಾನಕ್ಕಾಗಿ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಹೇಳಿದ್ದರು.
ರೇಷನ್ ಕಾರ್ಡ್ ಹೊಂದಿದ ಗೃಹಿಣಿಯರಿಗೆ ಮಾಸಿಕ 1,000 ರೂ. ವಿತರಣೆ
ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷ ಅಧಿಕಾರಕ್ಕೆ ಬಂದರೆ, ರೇಷನ್ ಕಾರ್ಡ್ ಹೊಂದಿದ ಗೃಹಿಣಿಯರಿಗೆ ಪ್ರತಿ ತಿಂಗಳು 1,000 ರೂಪಾಯಿ ನೀಡುವುದಾಗಿ DMK ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಘೋಷಣೆ ಮಾಡಿದ್ದಾರೆ. ಇದರಿಂದ ಎಲ್ಲಾ ಮಹಿಳೆಯರು ಆಹಾರ, ಅಗತ್ಯ ಸಾಮಾಗ್ರಿಗಳನ್ನು ಪಡೆಯುವಂತಾಗಲಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಸುಮಾರು 2.8 ಕೋಟಿ ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಿವೆ. ಅಷ್ಟೂ ಕುಟುಂಬದ ಮಹಿಳೆಯರಿಗೆ ಮಾಸಿಕ 1,000 ರೂ.ನಂತೆ ನೀಡಿದರೆ, ವಾರ್ಷಿಕ 33,600 ಕೋಟಿ ವೆಚ್ಚ ಉಂಟಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Published On - 1:25 pm, Mon, 8 March 21