ಚೆನ್ನೈ: ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು ಆಲ್ ಇಂಡಿಯಾ ಸಮತ್ವ ಮಕ್ಕಳ್ ಕಾಟ್ಚಿ (AISMK) ಸಂಸ್ಥಾಪಕ ಮತ್ತು ನಟ ಶರತ್ ಕುಮಾರ್ ಅವರು ಮಕ್ಕಳ್ ನೀದಿ ಮೈಯಂ (MNM) ಮುಖ್ಯಸ್ಥ, ನಟ ಕಮಲ್ ಹಾಸನ್ ಅವರನ್ನು ಭೇಟಿಯಾಗಿ ಚುನಾವಣಾ ಮೈತ್ರಿ ಬಗ್ಗೆ ಮಾತನಾಡಿದ್ದಾರೆ. ಮೈತ್ರಿ ಬಗ್ಗೆ ಕಮಲ್ ಹಾಸನ್ ಜತೆ ಮಾತನಾಡಿದ್ದು ಅವರಿಂದ ಸಕಾರಾತ್ಮಕ ಉತ್ತರ ನಿರೀಕ್ಷಿಸುತ್ತಿದ್ದೇನೆ. ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ಚುನಾವಣೆ ನಂತರವೇ ತಿಳಿಯಲಿದೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಶರತ್ ಕುಮಾರ್ ಹೇಳಿದ್ದಾರೆ.
ಕಮಲ್ ಹಾಸನ್ ಅವರ ಜತೆಗಿನ ಮಾತುಕತೆ ಪೂರ್ಣವಾಗಿಲ್ಲ. ನಮ್ಮ ಪಕ್ಷವು ಜನರ ಒಳಿತಿಗಾಗಿ ಕೆಲಸ ಮಾಡಲಿದೆ ಎಂದು ಹೇಳಿದ ಶರತ್ ಕುಮಾರ್ ಹಣದ ಆಸೆಗಾಗಿ ಮತಚಲಾಯಿಸಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ. ಜಯಲಲಿತಾ ಅವರ ಹುಟ್ಟುಹಬ್ಬದ ಆಚರಣೆ ವೇಳೆ ಶರತ್ ಕುಮಾರ್, ಅವರ ಪತ್ನಿ ರಾಧಿಕಾ ವಿ.ಕೆ.ಶಶಿಕಲಾ ಅವರನ್ನು ಭೇಟಿ ಮಾಡಿದ್ದರು.
Photos Of #MakkalNeedhiMaiam Party President #KamalHaasan
And #Sarathkumar pic.twitter.com/7coPLZ09Gb— Actor Kayal Devaraj (@kayaldevaraj) February 27, 2021
ಈ ಹಿಂದೆ ಎಐಎಡಿಎಂಕೆ ಮೈತ್ರಿ ಪಕ್ಷವಾಗಿದ್ದ ಶರತ್ ಕುಮಾರ್ ಅವರ ಪಕ್ಷ ಎಐಎಸ್ಎಂಕೆ ಮುಂಬರುವ ಚುನಾವಣೆಯಲ್ಲಿ ಪೆರಂಬಲೂರ್ ಸಂಸದ, ಟಿ.ಆರ್. ಪಚ್ಚಮುತ್ತು ಅವರ ಇಂದಿಯಾ ಜನನಾಯಕ ಕಾಟ್ಚಿ (IJK) ಜತೆ ಸ್ಪರ್ಧಿಸುವುದಾಗಿ ಶುಕ್ರವಾರ ಘೋಷಿಸಿತ್ತು. ಲೋಕಸಭಾ ಚುನಾವಣೆಯಲ್ಲಿ ಐಜೆಕೆ ಪಕ್ಷ ಡಿಎಂಕೆ ಮೈತ್ರಿಕೂಟದಲ್ಲಿತ್ತು.
ಮಾರ್ಚ್ 3ರಿಂದ ಚುನಾವಣಾ ಪ್ರಚಾರ: ಕಮಲ್ ಹಾಸನ್
ಮಾರ್ಚ್ 3ನೇ ತಾರೀಖಿನಿಂದ ಚುನಾವಣಾ ಪ್ರಚಾರ ಆರಂಭಿಸುತ್ತೇನೆ ಎಂದು ಕಮಲ್ ಹಾಸನ್ ಹೇಳಿದ್ದಾರೆ. ಮೈತ್ರಿ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡ ನಂತರ ನಾನು ಮಾತನಾಡುತ್ತೇನೆ. ಮಾರ್ಚ್ 7ರಂದು ನಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಮಕ್ಕಳ್ ನೀಧಿ ಮೈಯ್ಯಂ ಮುಖ್ಯಸ್ಥ ಕಮಲ್ ಹಾಸನ್ ಹೇಳಿದ್ದಾರೆ.
I will start the election campaigning on March 3rd. I will speak about alliances once it is finalised. Party will announce the first list of candidates on March 7th: Kamal Haasan, Makkal Needhi Maiam chief#TamilNaduElection2021 pic.twitter.com/AIC2GQLa0m
— ANI (@ANI) February 27, 2021
ಎಐಎಡಿಎಂಕೆ ಜತೆ ಬಿಜೆಪಿ ನಾಯಕರ ಮಾತುಕತೆ
ಸೀಟು ಹಂಚಿಕೆ ಬಗ್ಗೆ ಬಿಜೆಪಿ ಮತ್ತು ಎಐಎಡಿಎಂಕೆ ನಡುವೆ ಮಾತುಕತೆ ಶುರುವಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ತಮಿಳುನಾಡು ಉಸ್ತುವಾರಿ ವಹಿಸಿರುವ ಸಿಟಿ ರವಿ, ಕೇಂದ್ರದ ರಾಜ್ಯ ಖಾತೆಗಳ ಸಚಿವ ಕಿಶನ್ ರೆಡ್ಡಿ, ವಿ.ಕೆ.ಸಿಂಗ್ ಮತ್ತು ತಮಿಳುನಾಡು ಬಿಜೆಪಿ ಮುಖ್ಯಸ್ಥ ಎಲ್. ಮುರುಗನ್ ನೇತೃತ್ವದ ತಂಡವು ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಜತೆ ಅವರ ನಿವಾಸದಲ್ಲಿ ಶುಕ್ರವಾರ ಮಾತುಕತೆ ನಡೆಸಿದೆ.
ತಮಿಳುನಾಡು,ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಶುಕ್ರವಾರ ಘೋಷಿಸಿತ್ತು. ಏಪ್ರಿಲ್ 6ರಂದು ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದ್ದು ಮೇ.2ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ, ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳು ಮೈತ್ರಿಕೂಟ ಮಾಡಿಕೊಂಡಿದ್ದು ಪ್ರಾದೇಶಿಕ ಪಕ್ಷಗಳು ಇಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
ಇದನ್ನೂ ಓದಿ: Tamil Nadu Politics: ರಾಜಕೀಯ ವಿಶ್ಲೇಷಣೆ | ಶಶಿಕಲಾ ಆಡೋದು ಗೆಲ್ಲುವ ಆಟವೋ? ಒಡೆಯುವ ಆಟವೋ?