Tamil Nadu: ಧಾರಾಪುರಂನಲ್ಲಿ ಕಾರು ಅಪಘಾತ; ತಮಿಳುನಾಡು ವಿಧಾನಸಭೆಯ ಸ್ಪೀಕರ್ ಪಿ.ಧನಪಾಲ್​ಗೆ ಗಾಯ

|

Updated on: Mar 30, 2021 | 4:04 PM

Tamil Nadu Assembly Elections 2021: ಧಾರಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೋಗುತ್ತಿದ್ದ ವೇಳೆ ತಮಿಳುನಾಡು ವಿಧಾನಸಭೆಯ ಸ್ಪೀಕರ್ ಪಿ.ಧನಪಾಲ್ ಅವರ ಕಾರು ಅಪಘಾತಕ್ಕೀಡಾಗಿದೆ.

Tamil Nadu: ಧಾರಾಪುರಂನಲ್ಲಿ ಕಾರು ಅಪಘಾತ; ತಮಿಳುನಾಡು ವಿಧಾನಸಭೆಯ ಸ್ಪೀಕರ್ ಪಿ.ಧನಪಾಲ್​ಗೆ ಗಾಯ
ಅಪಘಾತಕ್ಕೊಳಗಾಗಿರುವ ಪಿ.ಧನಪಾಲ್ ಅವರ ಕಾರು
Follow us on

ಧಾರಾಪುರಂ: ತಮಿಳುನಾಡು ವಿಧಾನಸಭೆಯ ಸ್ಪೀಕರ್ ಪಿ.ಧನಪಾಲ್ ಅವರ ಕಾರು ಮಂಗಳವಾರ ಧಾರಾಪುರಂ ಸೂರಿನಲ್ಲೂರ್ ಟೋಲ್ ಗೇಟ್ ಬಳಿ ಅಪಘಾತಕ್ಕೀಡಾಗಿದೆ. 69ರ ಹರೆಯದ ಧನಪಾಲ್ ಜತೆ ರಾಜ್ಯ ಸಚಿವ ಎಸ್.ಪಿ. ವೇಲುಮಣಿ ಇದ್ದರು. ಅಪಘಾತದಲ್ಲಿ ಧನಪಾಲ್ ಅವರಿಗೆ ಗಾಯಗಳಾಗಿವೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ.  ಮಧ್ಯಾಹ್ನ ಧಾರಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ನಡೆಸಲಿದ್ದು, ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಇವರಿಬ್ಬರು ಹೊರಟಿದ್ದರು. ಧಾರಾಪುರಂನಲ್ಲಿ ಮೋದಿ ಬಿಜೆಪಿ ರಾಜಾಧ್ಯಕ್ಷ ಎಲ್.ಮುರುಗನ್ ಪರ ಪ್ರಚಾರ ನಡೆಸಲಿದ್ದಾರೆ.

ಫೆಬ್ರವರಿ 25ರಂದು ಮೋದಿ ಧಾರಾಪುರಂ ಚುನಾವಣಾ ಕ್ಷೇತದಲ್ಲಿ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ತಮಿಳುನಾಡಿನ ಆಡಳಿತಾರೂಢ ಪಕ್ಷ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ (AIADMK) ಮೈತ್ರಿ ಪಕ್ಷವಾಗಿ ಬಿಜೆಪಿ ಇಲ್ಲಿ ಕಣಕ್ಕಿಳಿದಿದೆ. 234 ವಿಧಾನಸಭಾ ಕ್ಷೇತ್ರಗಳಿರುವ ತಮಿಳುನಾಡು ವಿಧಾನಸಭೆಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿಕೂಟದ ವಿರುದ್ಧ ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟ ಸ್ಪರ್ಧಿಸಲಿದೆ.

ಡಿಎಂಕೆ ಅಭ್ಯರ್ಥಿಯನ್ನು ಅನರ್ಹಗೊಳಿಸಲು ಹೈಕೋರ್ಟ್ ನಿರಾಕರಣೆ
ತಮಿಳುನಾಡಿನ ತಿರುಚುಲಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಡಿಎಂಕೆ ಅಭ್ಯರ್ಥಿ ತಂಗಂ ತೆನ್ನರಸು ಅವರನ್ನು ಅನರ್ಹಗೊಳಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ. ಮಾಜಿ ಸಚಿವರಾದಗಿದ್ದ ತಂಗಂ ತೆನ್ನರಸು ಮತದಾರರಿಗೆ ಉಡುಗೊರೆ ವಿತರಿಸಿದ್ದಾರೆ ಎಂದು ಅದೇ ಚುನಾವಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಪಕ್ಷೇತರ ಅಭ್ಯರ್ಥಿ ಎಂ.ತಿರುಪತಿ ಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ, ಸೆಂಥಿಲ್ ಕುಮಾರ್ ರಾಮಮೂರ್ತಿ ಅವರು ಈ ಬಗ್ಗೆ ಚುನಾವಣಾ ಆಯೋಗವನ್ನು ಸಮೀಪಿಸುವಂತೆ ಅರ್ಜಿದಾರರಿಗೆ ಹೇಳಿದ್ದಾರೆ. ಅರ್ಜಿದಾರರ ಪ್ರಕಾರ ಮಾರ್ಚ್ 19 ರಂದು ತಂಗಂ ತೆನ್ನರಸು ಕರಿಯಪಟ್ಟಿ ತಾಲೂಕಿನ ಅವಿಯೂರ್ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮತದಾರರಿಗೆ ಉಡುಗೊರೆೆ ವಿತರಿಸಿದ್ದಾರೆ.

ಚುನಾವಣಾ ಪ್ರಚಾರದ ಅಂಗವಾಗಿ ನನ್ನಿಲಂ ವಿಧಾನಸಭಾ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ, ಮಾಜಿ ಸಚಿವ ಕೆ.ಕಾಮರಾಜ್ ಗದ್ದೆಯಲ್ಲಿ ನಾಟಿ ಮಾಡಿದ್ದಾರೆ.


ಎ. ರಾಜಾ ಫೋಟೊ ಸುಟ್ಟು ಹಾಕಿ ಎಐಎಡಿಎಂಕೆ ಪ್ರತಿಭಟನೆ
ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ.ಕೆ. ಪಳನಿಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಡಿಎಂಕೆ ಸಂಸದ ಎ.ರಾಜಾ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ಎಐಎಡಿಎಂಕೆ ಬೆಂಬಲಿಗರು ತಿರುಚ್ಚಿ ಮತ್ತು ಅರಿಯಲೂರ್​ನಲ್ಲಿ ರಾಜಾ ಅವರ ಫೋಟೊ ಸುಟ್ಟು ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಜತೆ ಸೌಹಾರ್ದ
ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಜತೆ ನಾವು ಸೌಹಾರ್ದಯುತ ಸಂಬಂಧ ಹೊಂದಿದ್ದೇವೆ ಎಂದು ಸೋಮವಾರ ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಮುಖ್ಯಮಂತ್ರಿ ಎಡಪ್ಪಾಡಿ.ಕೆ. ಪಳನಿಸ್ವಾಮಿ ಹೇಳಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ಜನರು ಕಮಲದ ಚಿಹ್ನೆಗೆ ಮತ ಹಾಕಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : Tamil Nadu Elections 2021: ತಮಿಳುನಾಡು ಸಿಎಂ ಪಳನಿಸ್ವಾಮಿ ಅವರು ನರೇಂದ್ರ ಮೋದಿ ಪಾದಕ್ಕೆ ನಮಸ್ಕರಿಸುವುದನ್ನು ನೋಡಲಾಗುತ್ತಿಲ್ಲ: ರಾಹುಲ್ ಗಾಂಧಿ

Tamil Nadu Assembly Elections 2021: ಚುನಾವಣಾ ಪ್ರಚಾರದ ವೇಳೆ ದೋಸೆ ಮಾಡಿದ ನಟಿ, ಬಿಜೆಪಿ ಅಭ್ಯರ್ಥಿ ಖುಷ್ಬೂ

Published On - 1:19 pm, Tue, 30 March 21