World Idli Day 2021: ಆಪ್ತವೆನಿಸುವ ತಿಂಡಿ ಇಡ್ಲಿಯ ದಿನ ಇಂದು: ಸಾಂಬಾರ್ ಜತೆ ಚಪ್ಪರಿಸಿಕೊಂಡು ತಿನ್ನಿ.. ಆರೋಗ್ಯಕ್ಕೂ ಅನುಕೂಲ
ಮನೆಗಳಲ್ಲೂ ಬಹು ಸರಳವಾಗಿ ಸಿದ್ಧಪಡಿಸಬಹುದಾದ ತಿಂಡಿಯೆಂದರೆ ಇಡ್ಲಿ. ದೇಶಾದ್ಯಂತ ಯಾವುದೇ ಉಪಹಾರ ಗೃಹ, ಹೋಟೆಲ್, ರೆಸ್ಟೋರೆಂಟ್ ಇರಲಿ ಇಡ್ಲಿಯಂತೂ ಇದ್ದೇ ಇರುತ್ತದೆ. ಇಂಥ ಇಡ್ಲಿಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳೂ ಇವೆ.
ಇಡ್ಲಿ ಒಂಥರ ಆಪ್ತವಾದ ತಿಂಡಿ ಎಂಬುದರಲ್ಲಿ ಎರಡು ಮಾತಿಲ್ಲ. ದಕ್ಷಿಣ ಭಾರತದಲ್ಲಿ ಈ ತಿಂಡಿಯನ್ನು ಇಷ್ಟಪಡದವರು ತುಂಬ ಕಡಿಮೆ.. ಚಟ್ನಿ, ಬಿಸಿಬಿಸಿ ಸಾಂಬಾರ್ ಜೊತೆ ತಿನ್ನುತ್ತಿದ್ದರೆ ಆಹಾ ! ಎನ್ನುವಷ್ಟು ರುಚಿ. ಅದೆಷ್ಟೋ ಉಪಾಹಾರ ಗೃಹಗಳು ಇಡ್ಲಿಗೇ ಫೇಮಸ್ ಆಗಿದ್ದೂ ಇದೆ. ಇಂತಿಪ್ಪ ಇಡ್ಲಿಯ ದಿನ ಇಂದು.. 2015ರಿಂದ ಪ್ರತಿವರ್ಷ ಮಾರ್ಚ್ 30ರಷ್ಟು ವಿಶ್ವ ಇಡ್ಲಿ ದಿನವನ್ನಾಗಿ ಆಚರಿಸಲಾಗುತ್ತಿದೆ. 2015ರಲ್ಲಿ ಮೊದಲ ಬಾರಿಗೆ ಚೆನ್ನೈನ ಅನ್ನಿವಾನ್ ಇಡ್ಲಿ ಸೆಂಟರ್ನಲ್ಲಿ ಇಡ್ಲಿ ದಿನವನ್ನು ಆಚರಿಸಲಾಯಿತು. ಅಂದು ಅನ್ನಿವಾನ್ 1,328 ಇಡ್ಲಿಗಳನ್ನು ತಯಾರಿಸಿದ್ದರು.
ಮನೆಗಳಲ್ಲೂ ಬಹು ಸರಳವಾಗಿ ಸಿದ್ಧಪಡಿಸಬಹುದಾದ ತಿಂಡಿಯೆಂದರೆ ಇಡ್ಲಿ. ದೇಶಾದ್ಯಂತ ಯಾವುದೇ ಉಪಹಾರ ಗೃಹ, ಹೋಟೆಲ್, ರೆಸ್ಟೋರೆಂಟ್ ಇರಲಿ ಇಡ್ಲಿಯಂತೂ ಇದ್ದೇ ಇರುತ್ತದೆ. ಇಂಥ ಇಡ್ಲಿಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳೂ ಇವೆ. ಹಾಗೇ ಆಹಾರ ಇತಿಹಾಸ ತಜ್ಞರ ಪ್ರಕಾರ ಇಡ್ಲಿಯನ್ನು ಮೊದಲು ಪರಿಚಯಿಸಿದ್ದು ಇಂಡೋನೇಷಿಯಾ. ಭಾರತಕ್ಕೆ ಬಂದಿದ್ದು ಕ್ರಿ.ಶ.800-1200ರ ಹೊತ್ತಲ್ಲಿ. ಅಂದಿನಿಂದಲೂ ಉದ್ದಿನ ಬೇಳೆಯ ಹಿಟ್ಟಿನಲ್ಲಿ, ಆವಿಯಲ್ಲಿ ಬೇಯಿಸಿ ತಯಾರಾಗುವ ಇಡ್ಲಿ ಇಂದು ವಿಶ್ವದಾದ್ಯಂತ ಫೇಮಸ್. ಇಡ್ಲಿಯಲ್ಲೂ ಈಗ ಹಲವು ರೂಪಗಳು ಇವೆ. ಏನೇ ಇದ್ದರೂ ಎಂದಿಗೂ ಬೇಸರ ತರಿಸದ ಒಂದು ತಿಂಡಿ ಇದು.
2021ರ ವಿಶ್ವ ಇಡ್ಲಿ ದಿನವಾದ ಇಂದು ಇದರ ಹಲವು ಪ್ರಯೋಜನಗಳನ್ನು ತಿಳಿದುಕೊಳ್ಳೋಣ:
ಸರಾಗವಾಗಿ ಜೀರ್ಣವಾಗುತ್ತದೆ ಕೆಲವು ಆಹಾರಗಳು ತಿನ್ನಲು ರುಚಿಯಾಗಿದ್ದರೂ, ಜೀರ್ಣಕ್ರಿಯೆಗೆ ತೊಂದರೆಕೊಡುತ್ತವೆ. ಅಷ್ಟೇ ಅಲ್ಲ, ಅಂಥ ಆಹಾರ ಸೇವನೆ ಮಾಡಿದ ತಕ್ಷಣ ನಮ್ಮಲ್ಲಿ ಸೋಮಾರಿತನ ಮೂಡುತ್ತದೆ. ಮಲಗಿ ನಿದ್ದೆ ಮಾಡಿಬಿಡಬೇಕು ಎನ್ನಿಸುತ್ತದೆ. ಆದರೆ ಇಡ್ಲಿ -ಸಾಂಬಾರ್ ಹಾಗಲ್ಲ. ದೇಹದೊಳಗೆ ಸೇರುತ್ತಿದ್ದಂತೆ ಸುಲಭವಾಗಿ ಜೀರ್ಣವಾಗುತ್ತದೆ. ಹೊಟ್ಟೆಗಾಗಲೀ, ದೇಹಕ್ಕಾಗಲೀ ಭಾರ ಆಗುವುದಿಲ್ಲ.
ವಿಟಮಿನ್ ಮತ್ತು ಖನಿಜಾಂಶಗಳ ಆಗರ ಒಂದು ಇಡ್ಲಿಯಲ್ಲಿ 1 ಮಿಲಿಗ್ರಾಂಗಳಷ್ಟು ಕಬ್ಬಿಣಾಂಶ ಇರುತ್ತದೆ. ಕ್ಯಾಲ್ಸಿಯಂ, ಫೋಲೇಟ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಎ ಅಂಶವೂ ಇರುತ್ತದೆ. ಹಾಗಾಗಿ ಡಯಟ್ ಮಾಡುವವರಿಗೆ ಇಡ್ಲಿ ತುಂಬ ಸಹಕಾರಿ. ಇದರಲ್ಲಿರುವ ಕಬ್ಬಿಣಾಂಶ ರಕ್ತವನ್ನು ಆಮ್ಲಜನಕಯುಕ್ತವಾಗಿಡುತ್ತದೆ.
ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿ ಇಡ್ಲಿಯಲ್ಲಿ ನಾರಿನ ಅಂಶ ಹೆಚ್ಚಾಗಿರುತ್ತದೆ ಮತ್ತು ಸಾಕಷ್ಟು ಪ್ರಮಾಣದಲ್ಲಿ ಪ್ರೋಟಿನ್ ಇರುತ್ತದೆ. ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇಡ್ಲಿ ಸೇವನೆ ಒಳ್ಳೆಯದರು. ಇದರು ಬೊಜ್ಜನ್ನು ಕರಗಿಸುತ್ತದೆ. ಹಾಗೇ, ಸದಾ ಏನಾದರೂ ತಿನ್ನಲೇಬೇಕು ಎಂದು ಬಯಸುವವರಿಗೆ ಕೂಡ ಇಡ್ಲಿ ಒಳ್ಳೆಯದು.
ಇಡ್ಲಿ-ಸಾಂಬಾರ್ನಲ್ಲಿ ನಾರಿನಾಂಶ ಇಡ್ಲಿಯನ್ನು ತಿನ್ನಲು ಸಾಂಬಾರ್ ಬೇಕೇಬೇಕು. ಈ ಸಾಂಬಾರ್ನ್ನು ತಿಳಿಯಾಗಿ, ಸಾದಾ ಮಾಡುವುದಕ್ಕಿಂತ ಹೆಚ್ಚೆಚ್ಚು ತರಕಾರಿಗಳನ್ನು ಸೇರಿಸಿ ಮಾಡಿಕೊಳ್ಳಬೇಕು. ಈ ತರಕಾರಿಗಳಿಂದ ದೇಹಕ್ಕೆ ನಾರಿನ ಅಂಶ ಪೂರೈಕೆ ಆಗುವ ಜತೆಗೆ, ಹೆಚ್ಚು ಶಕ್ತಿ ಬರುತ್ತದೆ.
ಇದು ಎಣ್ಣೆಯುಕ್ತ ತಿಂಡಿಯಲ್ಲ ಎಲ್ಲಕ್ಕಿಂತ ಮುಖ್ಯವಾಗಿ ಎಣ್ಣೆಯಿಲ್ಲದೆ ತಯಾರಾಗುವ ಆಹಾರ ಇಡ್ಲಿ. ಇದನ್ನು ಆವಿಯಲ್ಲಿ ಬೇಯಿಸುವದರಿಂದ ಎಣ್ಣೆಯ ಅಗತ್ಯವೇ ಇರುವುದಿಲ್ಲ. ಹಾಗಾಗಿ ಎಣ್ಣೆ ತಿನ್ನುವುದರಿಂದ ಉಂಟಾಗುವ ಸಮಸ್ಯೆಗಳು ಉದ್ಭವಿಸುವುದಿಲ್ಲ. ಕೊಬ್ಬಿನಾಂಶ ಹೆಚ್ಚುತ್ತದೆ, ಹೃದಯಕ್ಕೆ ತೊಂದರೆಯಾಗಬಹುದು ಎಂಬ ಭಯವೂ ಬೇಡ.
ಎಷ್ಟೆಲ್ಲ ರೀತಿಯ ಇಡ್ಲಿಗಳಿವೆ ಗೊತ್ತಾ? ಇನ್ನು ಇಡ್ಲಿ ಎಂದರೆ ಸಾಮಾನ್ಯವಾಗಿ ಉದ್ದಿನ ಬೇಳೆ ನೆನೆಸಿಟ್ಟು, ಅದನ್ನು ಬೀಸಿ.. ಅದಕ್ಕೆ ಸ್ವಲ್ಪ ಅಕ್ಕಿ ರವೆ ಸೇರಿಸಿ ಆವಿಯಲ್ಲಿ ಬೇಯಿಸಲಾಗುತ್ತದೆ. ಅದಕ್ಕೂ ಹೊರತಾಗಿ ಕೆಲವು ಇಡ್ಲಿಗಳು ಇತ್ತೀಚೆಗೆ ಪ್ರಸಿದ್ಧವಾಗುತ್ತಿವೆ. ಅದರಲ್ಲಿ ಮುಖ್ಯವಾಗಿ ಇರುವವುಗಳನ್ನು ಇಲ್ಲಿ ಹೆಸರಿಸಲಾಗಿದೆ ನೋಡಿ:
ಸ್ಟಫ್ಡ್ ಇಡ್ಲಿ: ಸ್ಟಫ್ಡ್ ಇಡ್ಲಿ ತುಂಬ ಆರೋಗ್ಯಕರವಾದ ಇಡ್ಲಿ. ಇದರಲ್ಲಿ ಹೆಸರುಕಾಳು, ಹಸಿಮೆಣಸು, ಬೇಯಿಸಿದ ಆಲೂಗಡ್ಡೆಗಳ ಮಿಶ್ರಣವನ್ನು ಮಾಡಿ ಇಡ್ಲಿಯಲ್ಲಿ ಇದನ್ನು ಸ್ಟಫ್ ಮಾಡಲಾಗುತ್ತದೆ. ಹೀಗೆ ಆವಿಯಲ್ಲಿ ಬೇಯಿಸಿದ ಇಡ್ಲಿ ತಿನ್ನಲು ರುಚಿಯಾಗಿಯೂ ಇದ್ದು, ಆರೋಗ್ಯಕ್ಕೆ ಕೂಡ ತುಂಬ ಒಳ್ಳೆಯದು.
ರವಾ ಇಡ್ಲಿ: ಇದು ರವೆಯಿಂದ ತಯಾರಿಸುವ ಇಡ್ಲಿ. ಪುದಿನಾ ಮತ್ತು ಕಾಯಿ ಚಟ್ನಿಯೊಂದಿಗೆ ತಿಂದರೆ ಅದ್ಭುತ ರುಚಿ
ಓಟ್ ಇಡ್ಲಿ: ಓಟ್ ಸಾಮಾನ್ಯವಾಗಿ ಆರೋಗ್ಯಕರ ತಿಂಡಿಯಾಗಿದೆ. ಅದರಲ್ಲಿ ಇಡ್ಲಿ ಮಾಡಿ ತಿಂದರೆ ಇನ್ನಷ್ಟು ಟೇಸ್ಟಿ. ಈ ಇಡ್ಲಿ ಪೋಷಕಾಂಶಗಳ ಆಗರವಾಗಿದೆ.
ಹೆಸರುಕಾಳು ಇಡ್ಲಿ: ಇದು ಹೆಸರು ಕಾಳು ಮತ್ತು ಅಕ್ಕಿಯನ್ನು ನೆನೆಸಿಟ್ಟು ಮಾಡುವ ಇಡ್ಲಿ. ಇದಕ್ಕೆ ಹಸಿಮೆಣಸಿನ ಕಾಯಿ, ಈರುಳ್ಳಿ, ಸಾಸಿವೆ ಕಾಳನ್ನು ಸೇರಿಸಲಾಗುತ್ತದೆ. ಸಾಂಬಾರ್ ಹಾಗೂ ಚಟ್ನಿಯೊಟ್ಟಿಗೆ ತಿನ್ನಬಹುದಾಗಿದೆ.
ಕಂಚಿಪುರಂ ಇಡ್ಲಿ: ರವಾ ಮತ್ತು ಅಕ್ಕಿಯನ್ನೊಳಗೊಂಡ ಇಡ್ಲಿ. ತುಪ್ಪ, ಚಟ್ನಿಯೊಂದಿಗೆ ತಿನ್ನಬಹುದು.
ಇದನ್ನೂ ಓದಿ: ನೂರಾರು ವರ್ಷ ಇತಿಹಾಸದ ಖ್ಯಾತ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ರದ್ದು ಹಿನ್ನೆಲೆ ಎಲ್ಲೆಡೆ ಕಟ್ಟೆಚ್ಚರ
Coronavirus News LIVE: ಕಳೆದ 24 ಗಂಟೆಯಲ್ಲಿ ದೇಶದಲ್ಲಿ 56,211 ಜನರಲ್ಲಿ ಸೋಂಕು ಪತ್ತೆ, 271 ಜನರು ಸಾವು