ತಮಿಳುನಾಡು ಹೊಸ ಸರ್ಕಾರಕ್ಕೆ ಆಪತ್ತು, ಸಿಎಂ ವಿಜಯ್ ಸರ್ಕಾರ ಅಲುಗಾಡಿಸಿದ ಸಿಪಿಐಎಂ, ಬೆಂಬಲ ವಾಪಸ್ ಬೆದರಿಕೆ

ತಮಿಳುನಾಡು ರಾಜಕೀಯದಲ್ಲಿ ಹೊಸ ಸರ್ಕಾರ ರಚನೆಯಾದ ಕೇವಲ ಹತ್ತು ದಿನಗಳಲ್ಲೇ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ದಳಪತಿ, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ನೇತೃತ್ವದ ನೂತನ ಸರ್ಕಾರ ಈಗ ಪತನದ ಭೀತಿಯನ್ನು ಎದುರಿಸುತ್ತಿದ್ದು, ಮಿತ್ರಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಇಡೀ ದಕ್ಷಿಣ ಭಾರತದ ರಾಜಕೀಯವನ್ನೇ ಬೆಚ್ಚಿಬೀಳಿಸಿರುವ ಈ ಹೈಡ್ರಾಮಾದ ಸಂಪೂರ್ಣ ವಿವರ ಇಲ್ಲಿದೆ.

ತಮಿಳುನಾಡು ಹೊಸ ಸರ್ಕಾರಕ್ಕೆ ಆಪತ್ತು, ಸಿಎಂ ವಿಜಯ್ ಸರ್ಕಾರ ಅಲುಗಾಡಿಸಿದ ಸಿಪಿಐಎಂ, ಬೆಂಬಲ ವಾಪಸ್ ಬೆದರಿಕೆ
ವಿಜಯ್
Image Credit source: Deccan Chronicle

Updated on: May 20, 2026 | 9:55 AM

ಚೆನ್ನೈ, ಮೇ 20: ತಮಿಳುನಾಡಿ(Tamil Nadu)ನಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಸರ್ಕಾರಕ್ಕೆ ಆರಂಭದಲ್ಲೇ ಭಾರಿ ವಿಘ್ನ ಎದುರಾಗಿದೆ. ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತದ ಕೊರತೆಯಿಂದಾಗಿ ಮಿತ್ರಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದ ವಿಜಯ್ ಅವರಿಗೆ, ಈಗ ಎಡಪಕ್ಷಗಳು ಬೆಂಬಲ ಹಿಂತೆಗೆದುಕೊಳ್ಳುವ ನೇರ ಎಚ್ಚರಿಕೆ ನೀಡಿವೆ.

ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಹುಮತಕ್ಕೆ ಸ್ಥಾನಗಳು ಕಡಿಮೆಯಿದ್ದ ಕಾರಣ ಕಾಂಗ್ರೆಸ್, ಎಡಪಕ್ಷಗಳು (CPIM), ವಿಸಿಕೆ (VCK) ಮತ್ತು ಐಯುಎಂಎಲ್ (IUML) ಪಕ್ಷಗಳು ವಿಜಯ್ ಅವರಿಗೆ ಹೊರಗಿನಿಂದ ಬೆಂಬಲ ನೀಡಿದ್ದವು.

ಆದರೆ, ತಮ್ಮ ಸರ್ಕಾರವನ್ನು ಮತ್ತಷ್ಟು ಸ್ಥಿರಗೊಳಿಸುವ ಮತ್ತು ಬಲಪಡಿಸುವ ಉದ್ದೇಶದಿಂದ ಸಿಎಂ ವಿಜಯ್ ಅವರು, ಪ್ರಮುಖ ಪ್ರತಿಪಕ್ಷವಾದ ಎಐಎಡಿಎಂಕೆ (AIADMK) ಪಕ್ಷದಿಂದ ಬಂಡಾಯವೆದ್ದು ವಿಶ್ವಾಸಮತದ ವೇಳೆ ತಮಗೆ ಅಡ್ಡ ಮತ ಚಲಾಯಿಸಿದ್ದ 25 ಶಾಸಕರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳಲು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಈ ವಿಷಯವೇ ಈಗ ಮೈತ್ರಿಕೂಟದಲ್ಲಿ ಭಾರಿ ಸ್ಫೋಟಕ್ಕೆ ಕಾರಣವಾಗಿದೆ.

ಮತ್ತಷ್ಟು ಓದಿ: ತಮಿಳುನಾಡು ಚುನಾವಣೆಯಲ್ಲಿ ಮತ ಹಾಕಿದ ಸೆಲೆಬ್ರಿಟಿಸ್; ಇಲ್ಲಿವೆ ಫೋಟೋಸ್

ಈ ಬೆಳವಣಿಗೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ, ಸಿಎಂ ವಿಜಯ್ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ತಮಿಳುನಾಡು ಮತ್ತೊಂದು ಚುನಾವಣೆಯನ್ನು ಎದುರಿಸಲು ಸಿದ್ಧವಾಗಿಲ್ಲದ ಕಾರಣ ಮತ್ತು ರಾಷ್ಟ್ರಪತಿ ಆಳ್ವಿಕೆ ಹೇರಿ ಬಿಜೆಪಿಯು ಹಿಂಬಾಗಿಲಿನಿಂದ ರಾಜ್ಯವನ್ನು ಆಳಬಾರದು ಎಂಬ ಒಂದೇ ಉದ್ದೇಶದಿಂದ ನಾವು ಟಿವಿಕೆಯನ್ನು ಬೆಂಬಲಿಸಿದ್ದೆವು. ಈ ಬಾರಿಯ ಜನಾಭಿಪ್ರಾಯ ಡಿಎಂಕೆ ಮತ್ತು ಎಐಎಡಿಎಂಕೆ ವಿರುದ್ಧವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿಜಯ್ ಅವರು ಸ್ವಚ್ಛ ಮತ್ತು ಉತ್ತಮ ಸರ್ಕಾರ ನಡೆಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಈಗ ಅವರೇನಾದರೂ ಎಐಎಡಿಎಂಕೆಯ ಯಾವುದೇ ಬಣ ಅಥವಾ ಬಂಡಾಯ ಶಾಸಕರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡರೆ, ಅದು ಜನಾದೇಶಕ್ಕೆ ಮಾಡುವ ದ್ರೋಹವಾಗುತ್ತದೆ. ಅಂತಹ ನಿರ್ಧಾರ ಕೈಗೊಂಡರೆ ನಾವು ಖಂಡಿತವಾಗಿಯೂ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಮರುಪರಿಶೀಲಿಸಿ, ವಾಪಸ್ ಪಡೆಯುತ್ತೇವೆ ಎಂದು ಗುಡುಗಿದ್ದಾರೆ.

ಒಂದು ವೇಳೆ ಸಿಎಂ ವಿಜಯ್ ಅವರು ಎಐಎಡಿಎಂಕೆ ಬಂಡಾಯ ಶಾಸಕರಿಗೆ ಮಣೆ ಹಾಕಿದರೆ, ಮೈತ್ರಿಕೂಟದಲ್ಲಿ ಭಾರಿ ಬಿರುಕು ಮೂಡುವುದು ನಿಶ್ಚಿತ. ಸಿಪಿಐಎಂ ಬೆಂಬಲ ಹಿಂತೆಗೆದುಕೊಂಡರೆ, ಕಾಂಗ್ರೆಸ್‌ನ 5 ಶಾಸಕರನ್ನು ಹೊರತುಪಡಿಸಿ, ಉಳಿದ ನಾಲ್ಕು ಮಿತ್ರಪಕ್ಷಗಳ ಒಟ್ಟು 8 ಶಾಸಕರು ತಕ್ಷಣವೇ ಸರ್ಕಾರದಿಂದ ಹೊರಬರಲಿದ್ದಾರೆ.

ಈ ಪರಿಸ್ಥಿತಿಯಲ್ಲಿ ವಿಜಯ್ ಅವರು ಎಐಎಡಿಎಂಕೆಯ 25 ಬಂಡಾಯ ಶಾಸಕರು ಮತ್ತು ಎಎಂಎಂಕೆಯ (AMMK) ಒಬ್ಬ ಶಾಸಕರ ಬೆಂಬಲದೊಂದಿಗೆ ತಮ್ಮ ಸರ್ಕಾರವನ್ನು ತಾತ್ಕಾಲಿಕವಾಗಿ ಉಳಿಸಿಕೊಳ್ಳಬಹುದು.

ಆದರೆ, ಅಧಿಕಾರ ವಹಿಸಿಕೊಂಡ ಹತ್ತೇ ದಿನಗಳಲ್ಲಿ ವಿರೋಧ ಪಕ್ಷದ ಭ್ರಷ್ಟ ಶಾಸಕರನ್ನು ಸರ್ಕಾರಕ್ಕೆ ಸೇರಿಸಿಕೊಂಡರೆ, ಅದು ಸಾರ್ವಜನಿಕರಲ್ಲಿ ಸಿಎಂ ವಿಜಯ್ ಅವರ ಇಮೇಜ್‌ಗೆ ಭಾರಿ ದೊಡ್ಡ ನಕಾರಾತ್ಮಕ ಸಂದೇಶವನ್ನು ರವಾನಿಸಲಿದೆ. ಈ ಭೀಕರ ರಾಜಕೀಯ ಪೇಚಿನಿಂದ ಪಾರಾಗಲು ಮತ್ತು ಪರಿಸ್ಥಿತಿಯನ್ನು ಸಮತೋಲನಗೊಳಿಸಲು ಟಿವಿಕೆ ಪಕ್ಷದ ಕೋರ್ ಕಮಿಟಿ ಸದ್ಯ ತುರ್ತು ಸಭೆಗಳನ್ನು ನಡೆಸುತ್ತಿದ್ದು, ಇಡೀ ತಮಿಳುನಾಡು ರಾಜಕೀಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us